ಬಂಟ್ವಾಳ : ಅಹಿಂದ ದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೇಸ್ ಸರ್ಕಾರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡಕ್ಕೆ ಯಾವುದೇ ಯೋಜನೆಯನ್ನು ರೂಪಿಸದೆ ಮತ್ತು ಅನುದಾನವನ್ನು ನೀಡದೆ ಅನ್ಯಾಯ ವೆಸಗಿದೆ ಎಂದು ಮಾಜಿ ಶಾಸಕ, ಬಿಜೆಪಿಯ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಪದ್ಮನಾಭ ಕೊಟ್ಟಾರಿ ಆರೋಪಿಸಿದ್ದಾರೆ.

ಬುಧವಾರ ಸಂಜೆ ಬಿ.ಸಿ.ರೋಡಿನ ಬಿಜೆಪಿ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಟೀಕಿಸಿದರು.
ಕಳೆದ ಎರಡೂವರೆ ವರ್ಷದಲ್ಲಿ ಸಿದ್ದರಾಮಯ್ಯ ಸರ್ಕಾರ ಹಗಲು ಹೊತ್ತಿನಲ್ಲಿ ನಿದ್ದೆಯಲ್ಲಿದ್ದರೆ ಉಳಿದ ಸಮಯದಲ್ಲಿ ತಮ್ಮ ಪಕ್ಷದ ಆಂತರಿಕ ಜಗಳದಲ್ಲಿಯೇ ಮುಳುಗಿರುತ್ತದೆ. ಇದರಿಂದಾಗಿ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ಕುಂಠಿತವಾಗಿದೆ. ರಾಜ್ಯದ ಖಜಾನೆ ಖಾಲಿಯಾಗಿದ್ದು ಕಾಂಗ್ರೇಸ್ ಸರ್ಕಾರ ದುಃಸ್ಥಿತಿಯಲ್ಲಿದೆ ಎಂದರು.
ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲು ಬಿಜೆಪಿಯ ರಾಜ್ಯ ಘಟಕದ ಸೂಚನೆಯಂತೆ ನ.2 ರಂದು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮೋರ್ಚಾ ವತಿಯಿಂದ ಮಂಗಳೂರಿನ ಸಂಘನಿಕೇತನದಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಪಕ್ಷದ ರಾಜ್ಯ , ಜಿಲ್ಲಾ ನಾಯಕರು ಭಾಗವಹಿಸಲಿದ್ದಾರೆ. ಬಂಟ್ವಾಳ ವಿಧಾನ ಸಭಾ ಕ್ಷೇತ್ರದಿಂದ ಈ ಮೂರು ಮೋರ್ಚಾಕ್ಕೆ ಸಂಬಂಧಿಸಿದಂತೆ 300 ರಿಂದ 400 ಮಂದಿ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಮುಂಬರುವ ತಾ.ಪಂ., ಜಿ.ಪಂ. ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ನಡೆಯುತ್ತಿರುವ ಕ್ಷೇತ್ರ ವಿಂಗಡಣೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಹಸ್ತಕ್ಷೇಪ ನಡೆಸುತ್ತಿದ್ದಾರೆಂದು ಆರೋಪಿಸಿದ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ ಅಧಿಕಾರಿಗಳು ಈಗಾಗಲೇ ನಡೆಸಿರುವ ಕ್ಷೇತ್ರ ವಿಂಗಡನೆಯಲ್ಲಿ ಕಾಂಗ್ರೇಸ್ ಕೈಯಾಡಿಸುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ದೇವದಾಸ ಶೆಟ್ಟಿ, ಚೆನ್ನಪ್ಪಕೋಟ್ಯಾನ್, ದಿನೇಶ್ ಭಂಡಾರಿ, ರಾಮದಾಸ್ ಬಂಟ್ವಾಳ, ದೇವಪ್ಪ ಪೂಜಾರಿ, ಕೃಷ್ಣಪ್ಪ ಪೂಜಾರಿ, ದಿನೇಶ್ ಅಮ್ಟೂರು, ಪುರುಷ ಎನ್ ಸಾಲ್ಯಾನ್, ಹರೀಶ್ಚಂದ್ರ ಪೂಜಾರಿ, ಬಿ.ಕೆ.ಅಣ್ಣುಪೂಜಾರಿ, ವಿಕಾಸ್ ಪುತ್ತೂರು, ಗಂಗಾಧರ, ಚಂದ್ರಶೇಖರ ಶೆಟ್ಟಿ, ತನಿಯಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
