ಬಂಟ್ವಾಳ: ಬಂಟ್ವಾಳದಲ್ಲಿ ಕಳೆದ 1981ರ ಮೇ.24ರಂದು ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪರ ನೇತೃತ್ವದಲ್ಲಿ ಆರಂಭಗೊಂಡ ಸಮಾಜ ಸೇವಾ ಸಹಕಾರಿ ಬ್ಯಾಂಕಿನ 10ನೇ ಶಾಖೆಯು ಬಿ.ಸಿ.ರೋಡ್ನ ಕೈಕಂಬ ಪೊಳಲಿ ದ್ವಾರ ಬಳಿ ಮುಕ್ತಿ ಕಾಂಪ್ಲೆಕ್ಸ್ನಲ್ಲಿ ನ.1ರಂದು ಆರಂಭಗೊಳ್ಳಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸುರೇಶ ಕುಲಾಲ್ ಹೇಳಿದ್ದಾರೆ.
ಬಂಟ್ವಾಳದಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸಂಸದ ನಳಿನ್ ಕುಮಾರ್ ಕಟೀಲು ಶಾಖೆ ಉದ್ಘಾಟಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮೊಡಂಕಾಪು ಚರ್ಚ್ನ ಧರ್ಮಗುರು ಮ್ಯಾಕ್ಸಿಂ ನೊರೋನ್ಹ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ಉದ್ಯಮಿ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಪುರಸಭಾಧ್ಯಕ್ಷೆ ವಸಂತಿ ಚಂದಪ್ಪ, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಕಟ್ಟಡ ಮಾಲೀಕ ಎಂ.ಕೆ.ಮೊಯಿದಿನ್, ಪುರಸಭಾ ಸದಸ್ಯೆ ಪ್ರಭಾ ಆರ್.ಸಾಲ್ಯಾನ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಪಿ.ಕೆ.ಉಮೇಶ್ ಮಾತನಾಡಿ, ಶೀಘ್ರವೇ ಪುಂಜಾಲಕಟ್ಟೆ ಮತ್ತು ತೊಕ್ಕೊಟ್ಟುವಿನಲ್ಲಿ ಶಾಖೆ ಆರಂಭಿಸಲಾಗುವುದು. ಒಟ್ಟು 5,697 ಮಂದಿ ಸದಸ್ಯರನ್ನು ಹೊಂದಿರುವ ಬ್ಯಾಂಕ್ ಕಳೆದ ಸಾಲಿನಲ್ಲಿ ಒಟ್ಟು ರೂ 287ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿ ರೂ 1.15ಕೋಟಿ ಲಾಭ ಗಳಿಸಿ ಸದಸ್ಯರಿಗೆ ಶೇ.21 ಡಿವಿಡೆಂಡ್ ವಿತರಿಸಲಾಗಿದೆ ಎಂದರು.
ಇದೇ ಪ್ರಥಮ ಬಾರಿಗೆ ಬ್ಯಾಂಕಿನ ಸುಮಾರು 1,500ಕ್ಕೂ ಮಿಕ್ಕಿ ಮಂದಿ ಸದಸ್ಯರಿಗೆ ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆಯಡಿ ಉಚಿತ ವಿಮೆ ಸೌಲಭ್ಯ ನೀಡಲಾಗಿದ್ದು, ಸದಸ್ಯರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಿಶ್ವನಾಥ ಬಿ.ಕೆ., ನಿರ್ದೇಶಕರಾದ ಜನಾರ್ದನ ಕುಲಾಲ್ ಬೊಂಡಾಲ, ವಿಶ್ವನಾಥ, ವಿನಾಯಕ, ಅರುಣ್ ಕುಮಾರ್, ವಿ.ಪದ್ಮನಾಭ, ವಾಮನ ಟೈಲರ್, ಹೇಮಂತ ಸಾಲ್ಯಾನ್, ವಿಜಯ ಕುಮಾರ್, ಜಯಂತಿ, ವಿದ್ಯಾ ಮತ್ತಿತರರು ಇದ್ದರು.
