ಬಂಟ್ವಾಳ: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ನಡೆಯುವ ರಸ್ತೆ ತಡೆ, ಜಾಥಾ, ಬಂದ್, ಪ್ರತಿಭಟನೆ, ಉಪವಾಸ ಸತ್ಯಾಗ್ರಹ ಮತ್ತಿತರ ಕಾರ್ಯಕ್ರಮಗಳಿಂದ ಉಂಟಾಗುವ ಆರ್ಥಿಕ ನಷ್ಟಕ್ಕೆ ಜಿಲ್ಲಾಡಳಿತ ನೇರಹೊಣೆಯಾಗಲಿದೆ ಎಂದು ಪರಿಸರ ಹೋರಾಟಗಾರ ರಾಜಮಣಿ ರಾಮಕುಂಜ ಅವರು ಆರೋಪಿಸಿದ್ದಾರೆ.

ಬಂಟ್ವಾಳ ಯಶವಂತ ವ್ಯಾಯಾಮ ಶಾಲೆಯಲ್ಲಿ ಸಮಾನ ಮನಸ್ಕ ನಾಗರಿಕ ಸಂಘಟನೆಗಳು ಮಂಗಳವಾರ ಸಂಜೆ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಬಂಟ್ವಾಳ ತಾಲೂಕಿನಲ್ಲಿ ಜನಾಂದೋಲನ ರೂಪುಗೊಳ್ಳದೇ ಇರಲು ಮಾಹಿತಿ ಕೊರತೆ ಕಾರಣ. ಈ ಹಿನ್ನೆಲೆಯಲ್ಲಿ ಅ. 30ರಂದು ಸಂಜೆ 6.45ಕ್ಕೆ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ಕಲ್ಯಾಣ ಮಂಟಪದಲ್ಲಿ `ಬಂಟ್ವಾಳಿಗರ ನಡೆ; ನೇತ್ರಾವತಿ ಕಡೆ’ಎನ್ನುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎತ್ತಿನಹೊಳೆ ಯೋಜನೆ ಏನು? ಎತ್ತ? ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯ ಗಾರವನ್ನು ಪರಿಸರ ಹೋರಾಟಗಾರರಾದ ಗಿರಿಧರ ಕಾಮತ್, ದಿನೇಶ್ ಹೊಳ್ಳ ಅವರು ನಡೆಸಿಕೊಡಲಿದ್ದಾರೆ ಎಂದವರು ವಿವರಿಸಿದರು.

ಕರಾವಳಿ ಜಿಲ್ಲೆಯ ಶಾಸಕರು, ಸಚಿವರ ನಿರ್ಲಕ್ಷ್ಯದಿಂದಾಗಿ ಎತ್ತಿನಹೊಳೆ ಯೋಜನೆ ಜಾರಿಗೊಳ್ಳುತ್ತಿರುವ ಜನತೆಯ ದೌರ್ಭಾಗ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸರಕಾರವನ್ನೇ ಎಚ್ಚರಿಸುವ ಕಾರ್ಯ ನಡೆಯಬೇಕೆಂದು ಸಾಮಾಜಿಕ ಹೋರಾಟಗಾರ ಪ್ರಭಾಕರ ದೈವಗುಡ್ಡೆ ಅವರು ತಿಳಿಸಿದರು. ಎತ್ತಿನಹೊಳೆಯಿಂದ ಜನರಿಗೆ ಉಪಕಾರವಾಗುವುದರಿಂದ ದುಪ್ಪಟ್ಟಾಗಿ ಅನಾಹುತವೇ ಸಂಭವಿಸುತ್ತದೆ. ಯೋಜನೆಯ ವಿರುದ್ಧ ಜನರು ಜಾತಿ, ಪಂಥ, ಪಕ್ಷಗಳನ್ನು ತೊರೆದು ಹೋರಾಡಬೇಕಿದೆ ಎಂದು ಉಪನ್ಯಾಸಕ ವಿನಾಯಕ ಪೈ ಬಂಟ್ವಾಳ ತಿಳಿಸಿದರು.

ಅ.30ರಂದು ಸಂಜೆ 6.30ಕ್ಕೆ ಬಂಟ್ವಾಳ ಪೇಟೆಯ ವ್ಯಾಪಾರಸ್ಥರು, ಜನರು ತಮ್ಮ ದೈನಂದಿನ ವ್ಯಾಪಾರ, ವಹಿವಾಟುಗಳನ್ನು ಸ್ಥಗಿತಗೊಳಿಸಿ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಳದ ವಠಾರದ ನೇತ್ರಾವತಿ ತಟದ ಬಳಿ ಜರಗುವ ಗಂಗಾಪೂಜನ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕೆಂದು ವ್ಯಾಯಾಮ ಶಾಲೆಯ ಅಧ್ಯಕ್ಷ ನಾರಾಯಣ ಕಾಮತ್ ತಿಳಿಸಿದರು. ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರ ಪುರುಷೋತ್ತಮ ಶೆಣೈ, ಶ್ರೀ ಸೀತಾರಾಮ ದೇವಸ್ಥಾನದ ಅಜಯ ಕೊಂಬ್ರಬೈಲು, ಕೆಳಗಿನಪೇಟೆ ಬದ್ರಿಯಾ ಜುಮಾ ಮಸೀದಿಯ ಪ್ರತಿನಿಧಿ ಹಾಜಿ ಮಹಮ್ಮದ್ ಅಲಿ, ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದ ಗಣೇಶ ಸುವರ್ಣ, ಬಂಟ್ವಾಳ ವರ್ತಕರ ಸಂಘದ ಅಧ್ಯಕ್ಷ ಬಿ.ಲಕ್ಷ್ಮಣ ಅಚ್ಯುತ್ ಬಾಳಿಗಾ, ಲಯನ್ಸ್ ಕ್ಲಬ್ನ ಪ್ರತಿನಿಧಿ ಲಕ್ಷ್ಮಣ ಕುಲಾಲ್, ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಅಲ್ಲಿಪಾದೆ ಮತ್ತಿತರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *