ಮೂಲಭೂತ ಸೌಕರ್ಯಗಳಿಗೆ ಆದ್ಯತೆ ಇರಲಿ
ಮೂಡುಬಿದರೆ: ಗ್ರಾ.ಪಂ ಬರುವ ಅನುದಾನ ಕರೆಂಟ್ ಬಿಲ್-ನೀರಿನ ಬಿಲ್ ಕಟ್ಟಲು ಸಾಕಾವುದಿಲ್ಲ. ಅದಕ್ಕಾಗಿ ಪಂಚಾಯಿತಿಗೆ ಬರುವ ವಿವಿಧ ಯೋಜನೆಗಳಿಂದ ಬರುವ ಅನುದಾನವನ್ನು ವಿನಿಯೋಗಿಸಿಕೊಂಡು ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.

ಅಶ್ವತ್ಥಪುರ ಮುಖ್ಯ ರಸ್ತೆಯ ಬಳಿ ಜಸ್ಟೀಸ್ ಡಾ.ರಾಮ ಜೋಯಿಸ್ ಇವರ ರಾಜ್ಯ ಸಭಾ ಸದಸ್ಯರ ನಿಧಿಯಿಂದ ನಿರ್ಮಿಸಲ್ಪಟ್ಟ ಬಸ್ಸು ನಿಲ್ದಾಣ ಹಾಗೂ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ನಿಧಿಯಿಂದ ಅಶ್ವತ್ಥಪುರ-ಪಂಜುರ್ಲಿಗುಡ್ಡೆ ರಸ್ತೆ ಡಾಮರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಕಸ್ತೂರಿ ಪಂಜ, ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಜಿ.ಪಂ ಸದಸ್ಯ ಈಶ್ವರ ಕಟೀಲ್, ತಾ.ಪಂ ಸದಸ್ಯೆ ಜಯಲಕ್ಷ್ಮೀ ಶೆಟ್ಟಿಗಾರ್, ಗುತ್ತಿಗೆದಾರ ಅರುಣ್ ಭಟ್, ಗ್ರಾ.ಪಂ ಸದಸ್ಯ ಕರುಣಾಕರ ಶೆಟ್ಟಿ, ಉದ್ಯಮಿ ದೇವಿಪ್ರಸಾದ್ ಶೆಟ್ಟಿ, ರಂಜಿತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
