ಬಂಟ್ವಾಳ:ತಾಲ್ಲೂಕಿನ ಕಡೇಶ್ವಾಲ್ಯ ಸಮೀಪದ ದಾಸಕೋಡಿ ಎಂಬಲ್ಲಿ ಕೌಟುಂಬಿಕ ಘರ್ಷಣೆಯಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಅಬ್ದುಲ್ ಖಾದರ್ ಪತ್ನಿ ಬಿ.ಫಾತಿಮ(70) ಎಂದು ಗುರುತಿಸಲಾಗಿದೆ. ಇವರ ಮನೆಯಲ್ಲಿ ಇದೇ 8ರಂದು ವೈವಾಹಿಕ ಸಂಬಂಧ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದ್ದ ವೇಳೆ ಮದುಮಗನ ಕಡೆಯ ವ್ಯಕ್ತಿಗಳು ದೂಡಿ ಹಾಕಿದ್ದರು ಎನ್ನಲಾಗಿದೆ.
ಆರೋಪಿಗಳನ್ನು ಇವರ ಸಂಬಂಧಿಕರೆನ್ನಲಾದ ಜುಬೇದ್, ರಿಯಾಝ್, ಸಾಲಿಹ್, ಆಶಿಕ್ ಮತ್ತು ಆಶ್ಪಕ್ ಎಂದು ಗುರುತಿಸಲಾಗಿದೆ.
ಇದರಿಂದಾಗಿ ತಲೆಗೆ ಗಂಭೀರ ಗಾಯಗೊಂಡ ವೃದ್ಧೆಯನ್ನು ಆರಂಭದಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಳೆದ ಎರಡು ದಿನಗಳ ಹಿಂದೆಯಷ್ಟೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಾವನ್ನಪ್ಪಿದ್ದಾರೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ
