ಬರೋಡ : ಡಾ! ಕಯ್ಯಾರ ಕಿಂಞಣ್ಣ ರೈ ವೇದಿಕೆ, ಸೆಪ್ಟೆಂಬರ್ 27 ರಂದು ಬರೋಡದ ಸಿ.ಸಿ.ಮೆಹತ ಸಭಾಂಗಣದಲ್ಲಿ 12ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅರಣ್ಯ ಖಾತೆ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಶ್ರೀ. ಬಿ. ರಮಾನಾಥ್ ರೈಯವರು ಹೊರನಾಡು ಕನ್ನಡಿಗರು ವಿಶಾಲ ಮನೋಧರ್ಮದವರು ಅವರು ನಾಡು ನುಡಿಗೆ ತೋರುವ ಗೌರವ ಅಪಾರವಾದುದು. ನಿಮ್ಮೆಲ್ಲರ ಏಕತೆ ತಾಯಿನಾಡಿಗೆ ಪರೋಕ್ಷವಾಗಿ ಬಲವರ್ದನೆ ನೀಡುತ್ತದೆ. ನಾನು ಬರೋಡಕ್ಕೆ ಬಂದಿರುವುದು ಪ್ರೀತಿ ಮತ್ತು ಸೌಜನ್ಯಕ್ಕಾಗಿ ಸಂಘಟಕರು ನನಗೆ ಆಮಂತ್ರಣ ನೀಡಿದಾಗ ಕೆಲಸಗಳ ಒತ್ತಡ ಮಧ್ಯೆಯ ಒಪ್ಪಿಗೆ ಸೂಚಿಸಿದ್ದೆ, ಅದರಂತೆಯೆ ನಾನು ನಿಮ್ಮ ಮುಂದೆ ಇದ್ದೇನೆ. ತಾವು ಇನ್ನೂ ಹೆಚ್ಚಿನ ರೀತಿಯಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿ ಮುನ್ನಡೆಯಬೇಕು. ಅದು ತಾಯ್ನಾಡಿಗೆ ಮತ್ತು ದೇಶಕ್ಕೆ ನೀವು ನೀಡುವ ಕೊಡುಗೆ ಎನ್ನುವುದು ನನ್ನ ಭಾವನೆ” ಎಂದರು.
ಮುಖ್ಯ ಅತಿಥಿಗಳಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ! ಎಲ್. ಹನುಮಂತಯ್ಯನವರು ಮಾತನಾಡಿ “ ಇತಿಹಾಸ ಕಾಲದಿಂದಲೂ ಕನ್ನಡಕ್ಕೆ ತನ್ನದೇ ಆದ ಪರಂಪರೆಯಿದೆ” ವಿಶೇಷ ಸ್ಥಾನ ಮಾನವನ್ನು ಪಡೆದ ಜಗತ್ತಿನ 20 ಭಾಷೆಗಳಲ್ಲಿ ಕನ್ನಡವೂ ಒಂದು ಎಂದರೆ ನಾವು ನಮ್ಮ ತಾಯಿ ನುಡಿಯಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳೋಣ. ಕನ್ನಡಿಗರು ಜಗತ್ತಿನ ಯಾವ ಮೂಲೆಯಲ್ಲಿ ಇದ್ದರು ಸ್ಥಳೀಯ ಮುಖ್ಯವಾಹಿನಿಯಲ್ಲಿ ಹಾಲು ಜೇನಿನಂತೆ ಬೆರೆಯುತ್ತಾರೆ. ಅದರೊಂದಿಗೆ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಾರೆ ಎಂಬ ಅಭಿಪ್ರಾಯ ಪಟ್ಟರು.

DSC_7396

DSC_7443

DSC_7333ಸಮ್ಮೇಳನಾಧ್ಯಕ್ಷರಾದ ಖ್ಯಾತ ಲೇಖಕ ಶ್ರೀ. ಕಾ.ತ.ಚಿಕ್ಕಣ್ಣನವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ ಕನ್ನಡ ನಾಡು ಮತ್ತು ಕನ್ನಡ ನುಡಿ ಅತ್ಯಂತ ಶ್ರೀಮಂತವಾದುದು. ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿವೆ. ಹಾಗೂ ಇವು ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆ ಮನುಕೂಲದ ಮೂಲಮಂತ್ರವಾಗಬೇಕೆಂದು ಸಾರುತ್ತವೆ. ನಾವು ಬೇರೆಯವರನ್ನು ದೋಷಿಸುವ ಮತ್ತು ದ್ವೇಷಿಸುವ ಮೊದಲು ಪರಾಮರ್ಶೆ ಮಾಡಿಕೊಳ್ಳಬೇಕು. ಅರ್ಹತೆ ಇರುವವರಲ್ಲಿ ಅವಕಾಸವನ್ನು ಸೃಷ್ಠಿಸಿಕೊಳ್ಳುವ ಶಕ್ತಿಯು ಇರುತ್ತದೆ. ಅಂತೆಯೆ ಇಂದು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಜಗತ್ತಿನೆಲ್ಲೆಡೆ ಮಾನ್ಯತೆ ಪಡೆಯುತ್ತಿದೆ. ಇಂತಹ ಒಂದು ನಾಡು ನುಡಿಯ ಸೇವೆ ಮಾಡುವವರನ್ನು ಹುರಿದುಂಬಿಸಿ ಬೆಂಬಲಿಸೋಣ. ಅದು ನಾವು ಮಾಡಬೇಕಾದ ಮೊದಲ ಕೆಲಸ” ಎಂದರು.
ಇನ್ನೋರ್ವ ಮುಖ್ಯ ಅತಿಥಿ ಭಾಷಾ ಸಂಶೋಧಕರಾದ ಪದ್ಮಶ್ರೀ ಪ್ರೋ . ಗಣೇಶ್ ಎನ್. ದೇವಿ,  “ಕರ್ನಾಟಕದ ಹಲವು ವಿದ್ವಾಂಸರಿಂದ ಕನ್ನಡ ನಾಡಿನ ಸಾಹಿತ್ಯ ಇತಿಹಾಸ ಮತ್ತು ಭಾಷೆಯ ಬಗ್ಗೆ ಸಾಕಷ್ಟು ವಿಷಯವನ್ನು ಅರಿತುಕೊಂಡಿದ್ದೇನೆ. ನನಗೆ ಕನ್ನಡ ಭಾಷೆ ಬರದಿದ್ದರೂ ಒಂದು ರೀತಿಯಲ್ಲಿ ಕರ್ನಾಟಕದ ಭಾಗವಾಗಿದ್ದೇನೆ ಏಕೆಂದರೆ ನಾನು ಕರ್ನಾಟಕದ ಅಳಿಯ ಅಂದರೆ ನನ್ನ ಪತ್ನಿ ಕನ್ನಡತಿ” ಎಂದರು. ಕಾಯ, ವಾಚ ಮನಸ ಕನ್ನಡಿಗರು ವಿಶೇಷತೆ ಮತ್ತು ವಿಶಿಷ್ಟತೆ ಉಳ್ಳವರು ಎಂದರು.
ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದ ಸ್ಥಾಪಕ ಅಧ್ಯಕ್ಷ ಇ.ಕೆ.ಪಿ. ಮಂಜುನಾಥ್ ಸಾಗರ್ ತಮ್ಮ ಪ್ರಾಸ್ಥಾವಿಕ ಭಾಷಣದಲ್ಲಿ ಪ್ರತೀ ವರ್ಷ ಈ ಸಮ್ಮೇಳನ ಹಮ್ಮಿಕೊಳ್ಳುವ ಉದ್ದೇಶ ಹೊರನಾಡು ಕನ್ನಡಿಗರು ತಾಯ್ನಾಡಿನೊಂದಿಗೆ ಸಂಬಂಧವನ್ನು ಬಲಪಡಿಸಿಕೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿದೆ. ಅಲ್ಲದೆ ಕಲಾವಿದರು, ಸಾಹಿತಿಗಳಿಗೆ ಅಪಾರ ಪ್ರತಿಭೆ ಇದ್ದರೂ ಅವಕಾಶ ವಂಚಿತರಾಗಿರುತ್ತಾರೆ. ಅಂತಹವರಿಗೆ ರಾಷ್ಟ್ರೀಯ ಮಟ್ಟದಲ್ಲಿ ವೇದಿಕೆ ಕಲ್ಪಿಸುವುದು ನಮ್ಮ ಆಶಯ. ಕನ್ನಡಕ್ಕಾಗಿ ತುಡಿಯುವ ಮತ್ತು ಕನ್ನಡಕ್ಕಾಗಿ ದುಡಿಯುವ ಮನಸ್ಸುಗಳಿಗೆ ಹೃದಯವಾಹಿನಿ ಕರ್ನಾಟಕ ಒಂದು ಅನನ್ಯ ವೇದಿಕೆಯಾಗಿದೆ ಎಂದರು.
ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಡಾ! ವಿ. ನಾಗರಾಜ್ ನಾಯಕ್ ಕರ್ನಾಟಕದಲ್ಲಿ ಮತ್ತು ಕನ್ನಡ ಸಂಘಟನೆಗಳು ನವೆಂಬರ್ ತಿಂಗಳಿನಲ್ಲಿ ಅಬ್ಬರದಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಆ ತಿಂಗಳು ಮುಗಿಯುತ್ತಿದ್ದಂತೆ ನಿಶ್ಯಬ್ಧವಾಗಿ ಬಿಡುತ್ತಾರೆ. ಈ ಮನೋಭಾವದಿಂದ ಹೊರ ಬರಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ! ಕೆ. ಮುರಳೀಧರ್, ಕರ್ನಾಟಕ ಸಂಘ, ಬರೋಡದ ಮುಖ್ಯ ಟ್ರಸ್ಟೀ ಶ್ರೀ ಎನ್.ಆರ್.ಮುಕ್ತಾಲಿ ಮತ್ತು ಛೇರ್‍ಮೇನ್ ಶ್ರೀ ಜಯರಾಮ ಶೆಟ್ಟಿ ಸಮ್ಮೇಳನದ ಕುರಿತು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಐವರು ಗಣ್ಯರಿಗೆ ಹೃದಯವಂತ-2015 ಪ್ರಶಸ್ತಿ ನೀಡಿ ಗೌರವಿಸಲಾಯಿತು ಶ್ರೀ ಎಸ್. ಜಯರಾಂ ಶೆಟ್ಟಿ-ಕನ್ನಡ ಸೇವೆ, ಶ್ರೀ ಎನ್. ಆರ್. ಮುಕ್ತಾಲಿ, ಬರೋಡ-ಕನ್ನಡ ಸೇವೆ, ಶ್ರೀ ಅಲೆವುರು ಶೇಖರ ಪೂಜಾರಿ, ಉಡುಪಿ-ಸಮಾಜ ಸೇವೆ, ಶ್ರೀ. ದಯಾನಂದ ಬೋಂಟ್ರಾ ಬರೋಡ-ಸಮಾಜ ಸೇವೆ, ಶ್ರೀ ಲಕ್ಷ್ಮಣ ಪೂಜಾರಿ ಅಹ್ಮದಾಬಾದ್ -ಸಮಾಜ ಸೇವೆ.
ಕನ್ನಡ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹನ್ನೆರಡು ಮಹಾನೀಯರಿಗೆ ರಾಷ್ಟ್ರೀಯ ಕನ್ನಡ ಸಮ್ಮೇಳನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಶ್ರೀ ಎಸ್. ಕೆ. ಹಳೆಯಂಗಡಿ ಬರೋಡ, ಶ್ರೀ ಎಂ.ಪಿ. ದೇಸಾಯಿ ಬರೋಡ, ಶ್ರೀ ನಾಗರಾಜ್ ಜಿ. ಆರ್., ಬರೋಡ, ಶ್ರೀ. ರಾಧಕೃಷ್ಣ ಶೆಟ್ಟಿ ಸೂರತ್, ಶ್ರೀ ಎನ್.ಎಮ್. ಶೆಟ್ಟಿ ವಾಪಿ, ಶ್ರೀ ಶಶಿಧರ್ ಶೆಟ್ಟಿ, ಬರೋಡ, ಶ್ರೀ ವಿ.ಜಿ.ಪಾಲ್ ಮಂಗಳೂರು, ಶ್ರೀ ಸಂಜೀವ ಶೆಟ್ಟಿ ಅಹ್ಮದಬಾದ್, ಶ್ರೀ ಮನೋಜ್ ಪೂಜಾರಿ ಸೂರತ್, ಶ್ರೀ ಬಾಲಕೃಷ್ಣ ಶೆಟ್ಟಿ ವಾಪಿ, ಶ್ರೀ ಜಿ.ಎಸ್.ಉಪ್ಪಿನ್ ಬರೋಡ, ಶ್ರೀ ರವಿಂದ್ರ ರಾಜ್‍ಪುರೋಹಿತ್ ಬರೋಡ.
ನೂಪುರ ಕಲಾಸಂಸ್ಥೆ ದಾವಣಗೆರೆ, ಮತ್ತು ಕರ್ನಾಟಕ ಸಂಘ ಬರೋಡ ಕಲಾವಿದರಿಂದ ಜಾನಪದ ಕಂಸಾಳೆ ಸ್ವಾಗತ ನೃತ್ಯ ಮೈನವಿರೇಳಿಸುವಂತೆ ಮೂಡಿ ಬಂತು.
ವಾಪಿಯ ಪಿ.ಎಸ್. ಕಾರಂತ್ ಅವರ ಅಧ್ಯಕ್ಷತೆಯಲ್ಲಿ ಹೊರನಾಡು ಕನ್ನಡಿಗರು ಮತ್ತು ಮಾಧ್ಯಮ ಗೋಷ್ಠಿ ಜರುಗಿತು ಸಂಪನ್ಮೂಲ ವ್ಯಕ್ತಿಗಳಾದ ಪ್ರವಾಸೋದ್ಯಮ ಸಚಿವಾಲಯದ ಮಾಧ್ಯಮ ಕಾರ್ಯದರ್ಶಿ ಶ್ರೀ. ರಾಜು ಅಡಕಳ್ಳಿ ಮತ್ತು ಬರೋಡದ ಉದ್ಯಮಿ ಶ್ರೀ. ಶಶಿಧರ್ ಶೆಟ್ಟಿ ಸಂವಾದ ನಡೆಸಿಕೊಟ್ಟರು.
ಹೆಚ್.ಎ.ಎಲ್. ಬೆಂಗಳೂರಿನ ಕೇಂದ್ರಿಯ ಕನ್ನಡ ಸಂಘದ ಸದಸ್ಯರಿಂದ “ಬದುಕು ನಮ್ಮ ಕೈಯಲ್ಲಿ ಮತ್ತು ಜಾನಪದ ಗೀತೆ” ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದವು.
ಹಿರಿಯ ಕವಿ ಬಿಂಡಿಗನವಿಲೆ ಭಗವಾನ್ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ತಿಳಿಹಾಸ್ಯದೊಂದಿಗೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಭಾಗವಹಿಸಿದ ಕವಿಗಳು ಶ್ರೀಮತಿ ಗೀತಾ ಶ್ರೀನಿವಾಸ್ ಬರೋಡ, ಬಾಲಕೃಷ್ಣ ಶೆಟ್ಟಿ ವಾಪಿ, ಮಹಮದ್ ಮುಸ್ತಾಫ ಬೆಳ್ಳಾರೆ ಮತ್ತು ಮಮತಾ ಮಲ್ಹಾರ್ ವಾಪಿ. ರೂಪ ಗಿರೀಶ್ ಬೆಂಗಳೂರು ತಂಡದಿಂದ ನಡೆದ ನೃತ್ಯರೂಪ ಮನಮೋಹಕವಾಗಿ ಮೂಡಿಬಂತು.
ಬರೋಡ ಕರ್ನಾಟಕ ಸಂಘದ ಮಹಿಳಾ ಸದಸ್ಯರಿಂದ ಕಿರು ಹಾಸ್ಯ ಪ್ರಹಸನ ಗರ್ಭಾ ನೃತ್ಯ ಮುಂತಾದ ಕಾರ್ಯಕ್ರಮಗಳು ಆಕರ್ಷಿಕವಾಗಿ ಮೂಡಿ ಬಂದವು.
ಬರೋಡ ಕರ್ನಾಟಕ ಸಂಘದ ಕಾರ್ಯದರ್ಶಿ ರಾಘವೇಂದ್ರ ಆರ್. ಅವರು ಧನ್ಯವಾದ ಸಮರ್ಪಿಸಿದರು, ಕನ್ನಡ ಕಿರುತೆರೆ ಖ್ಯಾತಿಯ ಗೋ. ನಾ. ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *