ಮೂಡುಬಿದರೆ: ಸುಮಾರು 700 ವರ್ಷಗಳಿಂದ ಸುನ್ನಿ(ತುರ್ಕಿ) ಧರ್ಮೀಯರು ಆರಾಧಿಸಿಕೊಂಡು ಬಂದಿರುವ ಪ್ರಾರ್ಥನಾಲಯವಾದ ಅಸಿರ್ಖಾನ್ ಮಂದಿರವನ್ನು ಮುಸ್ಲಿಂ ಧರ್ಮದ ಇನ್ನೊಂದು ಪಂಗಡವಾದ ಸಲಾಫಿಗಳು ಧ್ವಂಸ ಗೊಳಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿರುವ ಕುರಿತು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೂಡುಬಿದರೆ ಠಾಣಾ ವ್ಯಾಪ್ತಿಯ ಕಡಂದಲೆಯ ಆಸುಪಾಸಿನಲ್ಲಿ ಶತಮಾನದಿಂದ ವಾಸಿಸುತ್ತಿದ್ದ ಸುನ್ನಿ ಸಮುದಾಯದವರು ಗೋಲಿದಡಿ ಎಂಬಲ್ಲಿ ಖಬರಸ್ತಾನ್ (ಧಫನ್) ಭೂಮಿಯಲ್ಲಿ ಅಸಿರ್ಖಾನ್ ಪ್ರಾರ್ಥನಾಲಯ ನಿರ್ಮಿಸಿ ಇದಕ್ಕೆ ಮೊಹರಂ ಹಬ್ಬದಂದು ವಿಶೇಷಪೂಜೆ ಸಲ್ಲಿಸುತ್ತಿದ್ದರು.
ಇದೇ ಜಾಗಕ್ಕೆ ತಾಗಿಕೊಂಡು ಇಸ್ಲಾಂನ ಇನ್ನೊಂದು ಪಂಗಡವಾದ ಸಲಾಫಿಗಳು ಮಸೀದಿಯನ್ನು ನಿರ್ಮಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ತದನಂತರ ಎರಡು ಪಂಗಡದವರ ಮಧ್ಯೆ ಜಾಗದ ವಿಷಯದಲ್ಲಿ ವೈಷ್ಯಮ್ಯ ಉಂಟಾಗಿದ್ದು, ಇದೇ ಕಾರಣಕ್ಕಾಗಿ ಭಾನುವಾರ ಸಲಾಫಿ ತಂಡದವರು ಯಾರು ಇಲ್ಲದ ಸಮಯ ನೋಡಿ ಜೆಸಿಬಿ ಯಂತ್ರದ ಮೂಲಕ ಅಸಿರ್ಖಾನ್ ಮಂದಿರವನ್ನು ನೆಲಸಮಗೊಳಿಸಿದ್ದಾರೆ. ಸುದ್ದಿ ತಿಳಿದ ಸುನ್ನಿ ಪಂಗಡದವರು ಸ್ಥಳಕ್ಕಾಗಮಿಸಿದ್ದು, ಬಿಗುವಿನ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಊರವರಾದ ಸುಚರಿತ ಶೆಟ್ಟಿ, ರಮೇಶ್ ಪೂಜಾರಿ, ಪಂ. ಸದಸ್ಯ ದಿನೇಶ್ ಸೇರಿದಂತೆ ಇತರರು ಇತ್ತಂಡಗಳನ್ನು ಸಮಾಧಾನ ಪಡಿಸಿದ್ದಾರೆ. ಮೂಡುಬಿದರೆ ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
