ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತು ವ್ಯಾಪ್ತಿಯ ಶಂಭೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಗ್ರೀನ್ಕೋ ಸಂಸ್ಥೆಯ ಪೆರ್ಲ ಹೈಡ್ರೋ ಫವರ್ ಪ್ರೈವೇಟ್ ಲಿಮಿಟೆಡ್ನ ಷಣ್ಮುಖ ಸುಬ್ರಮಣ್ಯ ಮಿನಿ ಹೈಡಲ್ ಸ್ಮೀಮ್ನ ಮೇಲೆ ಬಾಯ್ಲರ್ ಮತ್ತು ಕಾರ್ಖಾನೆ ಇಲಾಖೆ ಕ್ರಿಮಿನಲ್ ಕೇಸು ದಾಖಲಿಸಿದೆ.
ಫವರ್ ಯೋಜನೆಯು ಅನಧೀಕೃತವಾಗಿ ಕಾರ್ಯಾಚರಿಸುತ್ತಿರುವ ವಿರುದ್ಧ ನರಿಕೊಂಬು ಜನಜಾಗೃತಿ ಸೇವಾ ಟ್ರಸ್ಟ್ ರಾಜ್ಯ ಹೈಕೋರ್ಟ್ ಟನಲ್ಲಿ ದಾವೆ ಹೂಡಿತ್ತು. ಇದರ ವಿಚಾರಣೆ ನಡೆಸಿದ ಕೋರ್ಟ್ ಸಂಸ್ಥೆಗೆ ನೋಟೀಸು ಜಾರಿ ಮಾಡಿ ಸಂಬಂಧಿಸಿದ ಇಲಾಖೆಗಳ ಅನುಮತಿ, ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತ್ತು. ಈ ಸಂಬಂಧ ತನಿಖೆ ನಡೆಸಿದ ಬಾಯ್ಲರ್ ಮತ್ತು ಕಾಖರ್ಾನೆ ಇಲಾಖೆಯು ಯೋಜನೆಗೆ ಸಂಬಂಧಿಸಿದ ದಾಖಲೆಗಳು ಸಮರ್ಪಕವಾಗಿರದ ಹಿನ್ನೆಲೆಯಲ್ಲಿ ಇದೀಗ ಯೋಜನೆಯ ವಿರುದ್ಧ ಬಂಟ್ವಾಳ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಕೇಸು ದಾಖಲಿಸಿದೆ.
ಘಟನೆ ವಿವರ: ಶಂಭೂರು ಗ್ರಾಮದ ಮಡಿಮುಗೇರು ಎಂಬಲ್ಲಿ ನೇತ್ರಾವತಿ ತಟದಲ್ಲಿ ನದಿ ನೀರನ್ನು ಅವಲಂಬಿಸಿಕೊಂಡೇ ಈಗಾಗಲೇ ಎ.ಎಂ.ಆರ್, ಹೃತಿಕ್ ಹೆಸರಿನಲ್ಲಿ ವಿದ್ಯುತ್ ಉತ್ಪಾಧನಾ ಘಟಕಗಳು ಕಾರ್ಯಾಚರಿಸುತ್ತಿದ್ದು ಇದೀಗ ಸಂಸ್ಥೆಯು ಪೆರ್ಲ ಹೈಡ್ರೋ ಫವರ್ ಪ್ರೈವೇಟ್ ಲಿಮಿಟೆಡ್ನ ಷಣ್ಮುಖ ಸುಬ್ರಮಣ್ಯ ಮಿನಿ ಹೈಡಲ್ ಸ್ಮೀಮ್ ಎಂಬ ಹೆಸರಿನಲ್ಲಿ ಯೋಜನೆ ರೂಪಿಸಿ ಬಹುಪಾಲು ಕಾಮಗಾರಿಯನ್ನು ಮುಗಿಸಿದೆ. ಈ ಯೋಜನೆಯು ಅನಧಿಕೃತವಾಗಿದ್ದು ಸರಕಾರದ ಆದೇಶದಂತೆ ನಡೆದಿಲ್ಲ ಎಂದು ದೂರಿ ಕೆಲ ಸಮಯದ ಹಿಂದೆ ಇಲ್ಲಿನ ನರಿಕೊಂಬು ಜನಜಾಗೃತಿ ಸೇವಾ ಟ್ರಸ್ಟ್ ಹೈಕೋರ್ಟ್ನಲ್ಲಿ ಖಾಸಗಿ ಪಿರ್ಯಾದಿ ದಾಖಲಿಸಿತ್ತು.
ಸರಕಾರಿ ಆದೇಶದ ಪ್ರಕಾರ ಮಡಿಮುಗೇರಿನ ತೊರೆಯಲ್ಲಿ ಮಿನಿ ಸ್ಕೀಮ್ ರೂಪಿಸಬೇಕೆಂದಿದ್ದರೂ ಸಂಸ್ಥೆಯು ನೇತ್ರಾವತಿ ನದಿಯನ್ನೇ ತಿರುಗಿಸಿ ಯೋಜನೆ ರೂಪಿಸುತ್ತಿದ್ದರೂ ಸಂಬಂಧಿಸಿದ ಜಿಲ್ಲಾ ನೀರಾವರಿ ಇಲಾಖೆ ಸಹಿತ ಇತರ ಇಲಾಖೆಗಳು ಮೌನವಹಿಸಿರುವ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲಾಗಿತ್ತು. ನ್ಯಾಯಾಲಯ ಸಹಿತ ಇತರ ಇಲಾಖೆಗಳಿಗೂ ದೂರು ಸಲ್ಲಿಸಿ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಲಾಗಿತ್ತು.
ದೂರನ್ನು ಪರೀಶೀಲಿಸಿದ ನ್ಯಾಯಾಲಯವು ಕೆಲವು ತಿಂಗಳುಗಳ ಹಿಂದೆಯೇ ಸಂಸ್ಥೆಗೆ ನೋಟೀಸು ಜಾರಿ ಮಾಡಿ ಯೋಜನೆ ಅನುಷ್ಠಾನಕ್ಕೆ ಬೇಕಾದ ಇತರ 24 ಇಲಾಖೆಗಳ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತ್ತು. ಈ 24 ಇಲಾಖೆಗಳ ಪೈಕಿ ಒಂದಾದ ಬಾಯ್ಲರ್ ಮತ್ತು ಕಾರ್ಖಾನೆ ಇಲಾಖೆಯು ಯೋಜನೆಯ ಬಗ್ಗೆ ಪರಿಶೀಲನೆ ನಡೆಸಿದ್ದು ಸಂಬಂಧಿಸಿದ ಇತರ ಇಲಾಖೆಗಳ ಅನುಮತಿ ಪತ್ರ ಇಲ್ಲದಿರುವುದು, ಕ್ರೆಡಿಲ್ ಸಂಸ್ಥೆಯ ಟೆಕ್ನಿಕಲ್ ಕ್ಲಿಯರೆನ್ಸ್ ಮತ್ತು ನೀರಾವರಿ ಇಲಾಖೆಯ ಅನುಮತಿ ಸಿಗದೇ ಕಾಮಗಾರಿ ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಇದೀಗ ಸಂಸ್ಥೆಯ ಮೇಲೆ ಬಂಟ್ವಾಳ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.
ಯೋಜನೆಯ ಜಾರಿ ಸಂಬಂಧಿಸಿ ಸಂಸ್ಥೆಯು ಗ್ರಾಮ ಪಂಚಾಯತಿಗೆ ನಿರಾಕ್ಷೇಪಣಾ ಪತ್ರ ಪಡೆಯಲು ಬಂದ ಸಂದರ್ಭದಲ್ಲಿ ಪಂಚಾಯತು ಅಧಿಕಾರಿಗಳು ಈ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸದಿರುವುದು ಹಾಗೂ ಸರಕಾರಿ ಆದೇಶದಂತೆ ತೊರೆಯಲ್ಲಿ ಯೋಜನೆ ರೂಪಿಸುವ ಬದಲಾಗಿ ನದಿಯಲ್ಲೇ ಯೋಜನಾ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದರೂ ಪಂಚಾಯತು ಅಧಿಕಾರಿಗಳು ಮೌನವಹಿಸಿರುವ ಬಗ್ಗೆಯೂ ನರಿಕೊಂಬು ಜನಜಾಗೃತಿ ಸೇವಾ ಟ್ರಸ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
