ಅಹಮದಾಬಾದ್: ಗುಜರಾತ್ನ ಪ್ರಭಾವಿ ಪಟೇಲ್ ಸಮುದಾಯಕ್ಕೆ ಸರ್ಕಾರಿ ನೌಕರಿ ಹಾಗೂ ಶಾಲಾ-ಕಾಲೇಜು ಪ್ರವೇಶದಲ್ಲಿ ಮೀಸಲಿಗೆ ಆಗ್ರಹಿಸಿ ಹೋರಾಟ ಭಾಗವಾಗಿ ಏಕ್ತಾ ಯಾತ್ರೆ ಕೈಗೊಂಡಿದ್ದ ಯುವ ನಾಯಕ ಹಾರ್ದಿಕ್ ಪಟೇಲ್ ಮತ್ತು ಬೆಂಬಲಿಗರನ್ನು ಸೂರತ್ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ಸರ್ಕಾರ ಮತ್ತು ಪೊಲೀಸರು ಯಾತ್ರಗೆ ಅನುಮತಿ ನಿರಾಕರಿಸಿದ್ದರು. ಹಾರ್ದಿಕ್ ಮತ್ತು 70 ಕ್ಕೂ ಹೆಚ್ಚು ಪ್ರತಿಭಟನಾ ನಿರತರನ್ನು ಸೂರತ್ನ ವರಚ್ಚಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಗುಜರಾತ್ ಸರ್ಕಾರ ಮತ್ತು ಪೊಲೀಸರು ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಹಾರ್ದಿಕ್ ಆರೋಪಿಸಿದ್ದಾರೆ. ಪಟೇಲ್ ಸಮುದಾಯದ ಮೀಸಲಿಗೆ ಹೋರಾಟ ಆರಂಭಿಸಿ ಬಿಜೆಪಿ ಸರ್ಕಾರದ ನಿದ್ದೆಗೆಡಿಸಿರುವ ಹಾರ್ದಿಕ್ ಪಟೇಲ್, ಈಗ ಬಿಹಾರ ಚುನಾವಣೆ ಸಂದರ್ಭದಲ್ಲಿ 4 ರ್ಯಾಲಿ ಉದ್ದೇಶಿಸಿ ಮಾತನಾಡಲು ತೀರ್ಮಾನಿಸಿದ್ದಾರೆ.
“ಪಟೇಲ್ ಸಮುದಾಯದ ಮೇಲೆ ಗುಜರಾತ್ನಲ್ಲಿ ದೌರ್ಜನ್ಯ ನಡೆಯುತ್ತಿದೆ. ಮೀಸಲು ಬೇಡಿಕೆ ಬಗ್ಗೆ ಬಿಜೆಪಿ ಮೌನವಾಗಿದೆ. ಹೀಗಾಗಿ ಬಿಹಾರದಲ್ಲಿ 4 ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದೇನೆ. ಬಿಜೆಪಿಯ ತಂತ್ರವನ್ನೆಲ್ಲ ಹಾಳು ಮಾಡಲಿದ್ದೇನೆ’ ಎಂದು ಶುಕ್ರವಾರ ಹೇಳಿದ್ದಾರೆ.

