ಬಂಟ್ವಾಳ; ಕರ್ನಾಟಕ ಸರ್ಕಾರದ ನಿವೇಶನ ರಹಿತರಿಗೆ ಜಾರಿಗೆ ತಂದಿರುವ 94 ಸಿ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವನ್ನು ವಿಸ್ತರಿಸಲಾಗಿದ್ದು, ಈ ಯೋಜನೆಯಲ್ಲಿ 9 ಸೆಂಟ್ಸ್ ವರೆಗೂ ಅರ್ಹರಿಗೆ ಜಮೀನು ಮಂಜೂರುಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನ ಸ್ತ್ರೀಶಕ್ತಿಭವನದಲ್ಲಿ ಮಂಗಳವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ನ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, 2002 ರ ಮೊದಲಿಂದ ಸರ್ಕಾರಿ ಜಮೀನಿನಲ್ಲಿ ವಾಸ್ತವ್ಯ ವಿರುವವರಿಗೆ ಮಾತ್ರ 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದರು. ಕೆಲವೆಡೆಗಳಲ್ಲಿ ಗ್ರಾಮಕರಣಿಕರು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಯೋಜನೆಯ ಬಗ್ಗೆ ಫಲಾನುಭವಿಗಳ ದಾರಿ ತಪ್ಪಿಸುತ್ತಿರುವುದು ಗಮನಕ್ಕೆ ಬಂದಿದೆ. ಅಂತವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಚಿವ ರೈ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರರು, 94 ಸಿ ಯಲ್ಲಿ ಅರ್ಹಫಲಾನುಭವಿಗಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದ್ದು, ಈಗ ಹೊಸದಾಗ 480 ಅರ್ಜಿ ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿವಿಧ ಇಲಾಖೆಯ ಕಾರ್ಯಗಳ ಕುರಿತಾಗಿ ಸಚಿವರು ಪ್ರಗತಿಪರಿಶೀಲನೆ ನಡೆಸಿದರು. ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ ಉಂಟಾಗಿದ್ದ ಗೊಂದಲ ಸದ್ಯಕ್ಕೆ ನಿವಾರಣೆಯಾಗಿದೆ, ಹೊಸದಾಗಿ ಬಿಪಿಎಲ್ ಕಾರ್ಡ್ ವಿತರಣೆ ಕಾರ್ಯ ಆರಂಭಗೊಂಡಿದ್ದು, ಅನ್ನಭಾಗ್ಯ ಯೋಜನೆಯೂ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ, ಈ ಕುರಿತಂತೆ ಯಾವುದೇ ದೂರುಗಳಿಲ್ಲ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಮಾಹಿತಿ ನೀಡಿದರು.
ರಾಷ್ಟ್ರೀಯ ಹೆದ್ದಾರಿ48 ರ ಅಮೈ ಸರ್ಕಲ್ ನಿಂದ ಬಿ.ಸಿ.ರೋಡಿನವರೆಗೆ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ, ಡಾಮರೀಕರಣ ಕಾರ್ಯ ಶೀಘ್ರ ನಡೆಯಲಿದೆ ಎಂದು ಹೆದ್ದಾರಿ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು.
ಆಸ್ಪತ್ರೆ ಡಿಸೆಂಬರ್ ಗೆ ಪೂರ್ಣ
ನಿರ್ಮಾಣ ಹಂತದಲ್ಲಿರುವ ಬಂಟ್ವಾಳ ನೂರು ಬೆಡ್ ನ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದ್ದು, ಇದೇ ವರ್ಷದ ಡಿಸೆಂಬರ್ ನಲ್ಲಿ ಪೂರ್ಣಗೊಳ್ಳಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಸಭೆಗೆ ತಿಳಿಸಿದರು.
ಮಲೇರಿಯಾ ಹಾಗೂ ಡೆಂಗ್ಯೂ ಬಾಧೆ ತಾಲೂಕಿನಲ್ಲಿ ನಿಯಂತ್ರಣದಲ್ಲಿದೆ , ಮುಂಜಾಗ್ರತಾ ಕ್ರಮವಾಗಿ ನಗರ ವ್ಯಾಪ್ತಿಯಲ್ಲಿ ಫಾಗಿಂಗ್ ಕಾರ್ಯ ನಡೆಸುವಂತೆ ಸಚಿವರು ಆರೋಗ್ಯಾಧಿಕಾರಿಯವರಿಗೆ ಈ ಸಂದರ್ಭದಲ್ಲಿ ನಿರ್ದೇಶನ ನೀಡಿದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ 14 ಅಂಗನವಾಡಿ ಕೇಂದ್ರಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ ಹಾಗೂ ವಿಟ್ಲ ಹೋಬಳೀಯಲ್ಲಿ ಸೂರಿಕುಮೇರು ಹಾಗೂ ಪೆರುವಾಯಿಯ ಅಂಗನವಾಡಿ ಕೇಂದ್ರಕ್ಕೆ ನಿವೇಶನ ಕೊರತೆ ಇದೆ ಎಂದು ಶಿಶುಅಭಿವೃದ್ದಿ ಯೋಜನಾಧಿಕಾರಿಗಳಾದ ಮಲ್ಲಿಕಾ ಹಾಗೂ ಸುಧಾಜೋಶಿ ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತಂತೆ ವಿಶೇಷ ಮುತುವಜರ್ಿವಹಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಮಿನಿ ವಿಧಾನ ಸೌಧ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಕಾಮಗಾರಿ ಆರಂಭಗೊಂಡಿದೆ, ಸಜಿಪಮೂಡದಲ್ಲಿ ಏತನೀರಾವರಿ ಯೀಜನೆಯ ಕಾಮಗಾರಿ ಅಂತಿಮ ಹಂತಕ್ಕೆ ಮುಟ್ಟಿದ್ದು, ಮುಂದಿನ ತಿಂಗಳು ಇದರ ಲೋಕಾರ್ಪಣೆ ನಡೆಸಬಹುದು ಎಂದು ಸಂಬಂಧಿಸಿದ ಇಲಾಖಾ ಇಂಜಿನಿಯರ್ ಸಭೆಗೆ ತಿಳಿಸಿದರು.ಪಾಣೆಮಂಗಳೂರು ಮತ್ತು ವಿಟ್ಲ ರೈತ ಸಂಪರ್ಕ ಕೇಂದ್ರ ನಿರ್ಮಾಣಕ್ಕೆ ಜಮೀನು ಕೋರಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿ ಅಧಿಕಾರಿ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಇಲ್ಲ..
ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೇ ಎಂದು ಸಚಿವರು ಪ್ರಭಾರ ಮುಖ್ಯಾಧಿಕಾರಿ ಮತ್ತಡಿಯವರನ್ನು ಪ್ರಶ್ನಿಸಿದಾಗ, ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಪ್ರತ್ಯುತ್ತರ ನೀಡಿದರು. ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ದ 3 ಕಡತಗಳಿಗೆ ಜಿಲ್ಲಾಧಿಕಾರಿ ಕಛೇರಿಯಿಂದ ಅನುಮೋದನೆ ದೊರೆಯಬೇಕಿದೆ ಎಂದು ತಿಳಿಸಿದರು. ತಕ್ಷಣ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸುವಂತೆ ಸಚಿವ ರೈ ಸೂಚಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ, ಉಪಾಧ್ಯಕ್ಷೆ ವಿಲಾಸಿನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ, ತಹಶೀಲ್ದಾರ್ ಪುರಂದರ ಹೆಗ್ಡೆ ವೇದಿಕೆಯಲ್ಲಿದ್ದರು.ಜಿಲ್ಲಾಪಂಚಾಯತ್ ಸದಸ್ಯರಾದ ಎಂ.ಎಸ್.ಮಹಮ್ಮದ್, ಸಂತೋಷ್ ಕುಮಾರ್ ರೈ, ಚಂದ್ರಪ್ರಕಾಶ ಶೆಟ್ಟಿ, ಮಮತಾಗಟ್ಟಿ , ಕೆಡಿಪಿ ಸದಸ್ಯರಾದ ಉಮೇಶ್ ಬೋಳಂತೂರು, ರಾಜೇಶ್ ಬಾಳೆಕಲ್ಲು ,ಅಬ್ದುಲ್ಲ ಕೊಳ್ನಾಡು ಮೊದಲಾದವರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಪಾಲ್ಗೊಂಡರು.
