ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಬಂಟ್ವಾಳ ತಾಲೂಕು ಕಲ್ಲಡ್ಕವಲಯ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಮತ್ತು ಜನ ಜಾಗೃತಿ ವಲಯ ಸಮಿತಿ ಕಲ್ಲಡ್ಕ ವಲಯ ಇದರಾಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಗೋಳ್ತಮಜಲು ಇಲ್ಲಿ ಜರಗಿತು.
ಹಿರಿಯ ಮಲೇರಿಯ ಪರಿವೀಕ್ಷಕರಾದ ಶ್ರೀಯುತ ಜಯರಾಮ ಪೂಜಾರಿ ಮಂಗಳೂರು ಇವರು ಕಿಶೋರಾವಸ್ಥೆಯಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಬದಲಾವಣೆಗೊಳ್ಳುವ ಒಂದು ಘಟ್ಟ ಈ ಸಮಯದಲ್ಲಿ ಅತ್ಯಂತ ಜಾಗರೂಕರಾಗಿರಬೇಕು. ವೈಜ್ಞಾನಿಕ ಬೆಳವಣಿಗೆಯಿಂದ ದಾರಿ ತಪ್ಪುವ ಹಲವು ಅವಕಾಶಗಳಿವೆ. ಮೊಬೈಲ್, ಇಂಟರ್ನೆಟ್ ಸೌಲಭ್ಯಗಳು ನಮಗೆ ಉಪಯೋಗದ ಜೊತೆಗೆ ಕೆಡುಕನ್ನು ಉಂಟುಮಾಡುವ ಹಲವು ಅಂಶಗಳಿವೆ. ಆ ದಾರಿಯಲ್ಲಿ ಎಡವದೇ ನಮ್ಮ ಚಿಂತನೆಯಲ್ಲಿ ತೊಡಗಿಕೊಂಡಾಗ ಭವಿಷ್ಯವು ಉಜ್ವಲವಾಗುವುದು. ಕಿಶೋರಾವಸ್ಥೆಯ ಶಿಕ್ಷಣವು ಮಾನಸಿಕವಾಗಿ ಹೆಚ್ಚು ಪ್ರೇರಣೆ ನೀಡುವಂತಾಗಿರಬೇಕು ಎಂದು ತಿಳಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ರೂಪಿಸುವಲ್ಲಿ ದಾರಿ ತಪ್ಪದಂತೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯಕರ ವಿಚಾರಗಳನ್ನು ರೂಢಿಸುವಲ್ಲಿ ಸ್ವಾಸ್ಥ್ಯ ಸಂಕಲ್ಪವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಕಲ್ಲಡ್ಕ ವಲಯದ ಮೇಲ್ವಿಚಾರಕರಾದ ಶ್ರೀಯುತ ಶಿವಪ್ಪ ಎಂಕೆ. ಗೋಳ್ತಮಜಲು ಎ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ತುಳಸಿ ಉಮೇಶ ಗೌಡ, ಸೇವಾಪ್ರತಿನಿಧಿ ಎವ್ಲೀನ್ ಹಾಗೂ ಗೋಳ್ತಮಜಲು ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಯುತ ಸೀತಾರಾಮ ಭಟ್ ರವರು ಭಾಗವಹಿಸಿದ್ದರು. ಕಲ್ಲಡ್ಕ ವಲಯದ ತಾಂತ್ರಿಕ ತರಬೇತಿ ಸಹಾಯಕಿಯಾದ ಶ್ರೀಮತಿ ಸುಲೋಚನಾ ರಮೇಶ್ ಸ್ವಾಗತಿಸಿ ಶ್ರೀಮತಿ ಮಂಜುಳಾ ಧನ್ಯವಾದವನ್ನಿತ್ತರು. ಗೋಳ್ತಮಜಲು ಬಿ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ ಮಾಲತಿ ರತ್ನಾಕರ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ಲಕ್ಷ್ಮೀ ಹಾಗೂ ಶ್ರೀಮತಿ ವಿದ್ಯಾಲತಾರವರು ಸಹಕರಿಸಿದರು.
