ಮಹಾಭಾರತ, ಹರಿವಂಶ ಹಾಗೂ ಭಾಗವತ ಇವುಗಳಿಗನುಸಾರ ನಿಶ್ಚಿತಗೊಳಿಸಿರುವ ಕಾಲಗಣನೆಯಂತೆ ಕ್ರಿಸ್ತಪೂರ್ವ 3185ರಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಭಗವಾನ್ ಶ್ರೀಕೃಷ್ಣನ ಜನನವಾಯಿತು. ಈ ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಹಿಂದೂಗಳು ಭಕ್ತಿಭಾವ ಪುರಸ್ಸರವಾಗಿ ಸಡಗರದಿಂದ ಆಚರಿಸುತ್ತಾರೆ. ಈ ದಿನ ಶ್ರೀ ಕೃಷ್ಣ ತತ್ತ್ವವು ವಾತಾವರಣದಲ್ಲಿ ಇತರ ದಿನಗಳಿಗಿಂತ ಸಾವಿರ ಪಟ್ಟು ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಆದುದರಿಂದ ಅದರ ಪೂರ್ತಿ ಲಾಭವನ್ನು ಪಡೆದುಕೊಳ್ಳಲು ನಾವೆಲ್ಲರೂ ಅಂದು “ ಓಂ ನಮೋ ಭಗವತೇ ವಾಸುದೇವಾಯ” ಎಂದು ನಾಮ ಜಪವನ್ನು ಮಾಡಬೇಕು.
ಹಿಂದೂಗಳು ಪೂಜಿಸುತ್ತಿರುವ 33 ಕೋಟಿ ದೇವತೆಗಳ ಪೈಕಿ ಭಗವಾನ್ ಶ್ರೀ ಕೃಷ್ಣನು ಪೂರ್ಣಾವತಾರಿ ಎನಿಸಿದ್ದಾನೆ. ಅಂದರೆ ಅವನು ಸರ್ವಶಕ್ತನೂ, ಸರ್ವವ್ಯಾಪಿಯೂ, ಸರ್ವಜ್ಞನೂ ಆಗಿದ್ದು ಆತನ ಸೌಂದರ್ಯವು ಅದ್ವಿತೀಯವಾದದ್ದಾಗಿತ್ತು. ಆದುದರಿಂದ ಎಲ್ಲರೂ ಆತನ ಸೌಂದರ್ಯದಿಂದ ಮೋಹಿತರಾಗುತ್ತಿದ್ದರು. ಶ್ರೀ ಕೃಷ್ಣನಲ್ಲಿ ಅನೇಕ ಸದ್ಗುಣಗಳು ಮನೆಮಾಡಿದ್ದವು. ಆತನು ಆದರ್ಶ ಪುತ್ರನಾಗಿ ಮಾತಾ ಪಿತೃಗಳಾದ ವಸುದೇವ ದೇವಕಿಯರಿಗೂ, ಪಾಲಕರಾದ ನಂದ – ಯಶೋದೆಯರಿಗೂ ಆನಂದ ನೀಡುತ್ತಿದ್ದನು. ಅಣ್ಣನಾದ ಬಲರಾಮನನ್ನು ಗೌರವಿಸುತ್ತ ಆದರ್ಶ ಬಂಧುವಾಗಿದ್ದನು.
19_fullಈ ಕಾಲದಲ್ಲಿ ಶ್ರೀಸಾಮಾನ್ಯನಿಂದ ತನ್ನ ಒಬ್ಬಳು ಪತ್ನಿಯನ್ನು ಸಮಾಧಾನ ಪಡಿಸಲಾಗದಿದ್ದರೂ ಶ್ರೀ ಕೃಷ್ಣನು 16,008 ಮಂದಿ ಪತ್ನಿಯರ ಮನಸ್ಸಂತೋಷವನ್ನು ಕಾಪಾಡುತ್ತಿದ್ದು ಆದರ್ಶ ಪತಿ ಎನಿಸಿದ್ದನು. ತನ್ನ ಬಾಲ್ಯ ಸ್ನೇಹಿತನಾದ ಸುದಾಮನನ್ನು ತಾನು ದ್ವಾರಕಾಧೀಶನಾದ ಮೇಲೂ ಪ್ರೇಮದಿಂದ ಬರಮಾಡಿಕೊಂಡು ಸತ್ಕರಿಸಿ ಅನುಗ್ರಹಿಸಿದನು. ಧರ್ಮಭೀರುಗಳಾದ ಪಾಂಡವರಿಗೆ ಸದಾ ಸಹಾಯ ಹಸ್ತ ನೀಡುತ್ತ ಆದರ್ಶ ಮಿತ್ರನೆನಿಸಿದನು. ತನ್ನ ಮಕ್ಕಳು ಅಯೋಗ್ಯವಾಗಿ ವರ್ತಿಸಿದರೆಂದು ಶ್ರೀಕೃಷ್ಣನು ಅವರವರಲ್ಲೇ ಯಾದವೀ ಕಲಹವನ್ನುಂಟು ಮಾಡಿ ಅವರನ್ನೂ ನಾಶಪಡಿಸಿದನು. ಉಪನಯನವಾದ ಬಳಿಕ ಗುರು ಸಾಂದೀಪನಿಯವರ ಆಶ್ರಮದಲ್ಲಿ ವಿದ್ಯಾಭ್ಯಾಸ ಪಡೆದು, ಕೇವಲ 64 ದಿನಗಳಲ್ಲಿ 14 ವಿದ್ಯೆಗಳನ್ನೂ 64 ಕಲೆಗಳನ್ನೂ ಕಲಿತನು. ಸಾಧಾರಣವಾಗಿ ಒಂದೊಂದು ವಿದ್ಯೆಯನ್ನು ಕಲಿಯಲು ಎರಡರಿಂದ ಎರಡೂವರೆ ವರ್ಷಗಳು ಬೇಕಾಗುತ್ತಿತ್ತು. ಆತನು ಗಾನ ನಾಟ್ಯ ಕೋವಿದನೂ ಆಗಿದ್ದನು. ಇದರಿಂದ ಆತನ ಬುದ್ಧಿಮತ್ತೆಯು ಗಮನಕ್ಕೆ ಬರುತ್ತದೆ. ಆತನು ಉತ್ತಮ ವಾಗ್ಮಿಯಾಗಿ, ಉತ್ತಮ ರಾಜದೂತನಾಗಿಯೂ ಮನಶ್ಶಾಸ್ತ್ರವನ್ನು ಉತ್ತಮ ರೀತಿಯಲ್ಲಿ ಬಳಸಬಲ್ಲವನಾಗಿದ್ದು ರಾಜನೀತಿ ಕುಶಲನೆನಿಸಿದನು. ಚಿಕ್ಕಂದಿನಲ್ಲೇ ಅಘ, ಬಕ, ಪ್ರಲಂಬ, ಪೂತನಿ, ಕಾಕಾಸುರ, ಶಕಟಾಸುರರೇ ಮೊದಲಾದ ದುಷ್ಟ ರಾಕ್ಷಸರನ್ನು ವಧಿಸಿ ತನ್ನ ದೈವಿಕ ಶಕ್ತಿಯನ್ನು ಪ್ರದರ್ಶಿಸಿದನು. ಕೇವಲ ಏಳನೆಯ ವಯಸ್ಸಿನಲ್ಲಿ ಶ್ರೀಕೃಷ್ಣನು ಕಂಸಾಸುರನ ಆಸ್ಥಾನದ ಮಲ್ಲರಾದ ಚಾಣೂರ ಮುಷ್ಟಿಕರನ್ನು ಮಲ್ಲ ಯುದ್ಧದಲ್ಲಿ ಕೊಂದು ತದನಂತರ ಕಂಸಾಸುರನ ವಧೆಯನ್ನು ಮಾಡಿ ಸಮಸ್ತ ಲೋಕಕ್ಕೆ ಬಂದಿದ್ದ ಕಂಟಕವನ್ನು ನಿವಾರಿಸಿದನು. ಆತನು ಮಲ್ಲವಿದ್ಯೆಯಲ್ಲೂ ಧನುರ್ವಿದ್ಯೆಯಲ್ಲೂ ಗದಾಯುದ್ಧದಲ್ಲೂ ನಿಷ್ಣಾತನಾಗಿದ್ದು ಅನೇಕ ದುಷ್ಟ ಮಾಯಾವಿ ರಾಕ್ಷಸರನ್ನು ಕೊಂದನು. ಜರಾಸಂಧ ಮತ್ತು ಕಾಲಯವನರಂತಹ ಬಲಾಢ್ಯ ರಾಜರೀರ್ವರೂ ಒಟ್ಟಿಗೆ ಆಕ್ರಮಣಮಾಡಿದಾಗಲೂ ಎದೆಗುಂದದೆ ಯಾದವರನ್ನು ರಕ್ಷಿಸಿದನು. ಬಲಾಢ್ಯನಾಗಿದ್ದ ನರಕಾಸುರನನ್ನು ವಧಿಸಿ ಆತನು ಬಂಧನದಲ್ಲಿರಿಸಿದ್ದ 16 ಸಾವಿರ ಮಂದಿ ಅವಿವಾಹಿತ ತರುಣಿಯರನ್ನು ಬಂಧಮುಕ್ತಗೊಳಿಸಿ ಅವರಿಗೆ ಕಳಂಕ ಉಂಟಾಗದಂತೆ ಅವರನ್ನು ವಿವಾಹವಾದನು. ಆದರೂ ಆತನು ವಿಷಯ ಲಂಪಟನಾಗದೆ, ಇಂದ್ರಿಯಗಳ ದಾಸನಾಗದೆ ಜಿತೇಂದ್ರಿಯನಾಗಿಯೇ ಉಳಿದನು. ಯಮುನಾ ನದಿಯಲ್ಲಿ ಗೋವುಗಳಿಗೂ ಗೋಪಾಲಕರಿಗೂ ತೊಂದರೆ ಉಂಟುಮಾಡುತ್ತಿದ್ದ ಕಾಳಿ ಎಂಬ ಭಯಂಕರ ಸರ್ಪದ ಹೆಡೆಗಳ ಮೇಲೆ ನರ್ತನಗೈದು ಅದರ ಸೊಕ್ಕನ್ನು ಅಡಗಿಸಿದನು.
ತನ್ನನ್ನು ಆರಾಧಿಸುತ್ತಿದ್ದ ಗೋಕುಲದಲ್ಲಿನ ಗೋಪಿಕೆಯರನ್ನು ಅನುಗ್ರಹಿಸಿ ಅವರೊಂದಿಗೆ ಶರದ್ ಋತುವಿನ ಹುಣ್ಣಿಮೆಯ ರಾತ್ರಿ ರಾಸಕ್ರೀಡೆಯಾಡಿ ಅವರಿಗೆ ಬ್ರಹ್ಮಾನಂದವನ್ನು ನೀಡಿದನು. ಯಶೋದೆಗೆ ತನ್ನ ಬಾಯಿಯಲ್ಲಿ ವಿಶ್ವರೂಪ ದರ್ಶನ ಮಾಡಿಸಿದನು. ಜಾಂಬವಂತನೆಂಬ ಭಲ್ಲೂಕ ರಾಜನು ಕೃಷ್ಣನೊಂದಿಗೆ ಯುದ್ಧದಲ್ಲಿ ಸೋತು ತನ್ನ ಮಗಳಾದ ಜಾಂಬವತಿಯನ್ನು ವಿವಾಹವಾಗಬೇಕೆಂದು ಪ್ರಾರ್ಥಿಸಿದಾಗ ಎಲ್ಲರ ವಿರೋಧದ ನಡುವೆಯೂ ಅವಳನ್ನು ವರಿಸಿ ಪ್ರಾಣಿಮಾತ್ರರ ಮೇಲಿನ ಪ್ರೀತಿಯನ್ನು ಪ್ರದರ್ಶಿಸಿದನು.
ಗೋಕುಲದಲ್ಲಿ ಗೋಪಬಾಲಕರೊಂದಿಗೆ ಗೋವುಗಳನ್ನು ಮೇಯಿಸಿದನು. ಪಾಂಡವರ ಮನೆಯಲ್ಲಿ ಕುದುರೆಗಳನ್ನು ತೊಳೆದು ಶೂದ್ರ ಸೇವೆಯು ಹೀನವಲ್ಲವೆಂಬುದನ್ನು ಜಗತ್ತಿಗೆ ತೋರಿಸಿದನು. ಗೋಕುಲದಲ್ಲಿ ಹಾಲು ಬೆಣ್ಣೆಯ ವ್ಯಾಪಾರದಿಂದ ವೈಶ್ಯ ಸೇವೆಯನ್ನೂ ಅನ್ಯಾಯವಂತರೂ ಅಧರ್ಮಿಗಳೂ ಆಗಿದ್ದ ದುಷ್ಟ ರಾಜರುಗಳನ್ನೂ ಬಲಾಢ್ಯ ರಾಕ್ಷಸರನ್ನೂ ವಧಿಸಿ ಕ್ಷತ್ರಿಯ ಸೇವೆಯನ್ನು ಮಾಡಿದನು. ಅಂತಿಮವಾಗಿ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನು ತಾತ್ಕಾಲಿಕವಾಗಿ ಮಾಯೆಗೊಳಗಾಗಿ ತನ್ನ ಗುರುಹಿರಿಯರು ದಾಯಾದಿಗಳೊಂದಿಗೆ ಯುದ್ಧ ಮಾಡಲಾರೆನೆಂದು ತನ್ನ ಬಿಲ್ಲು ಬಾಣಗಳನ್ನು ಕೆಳಗಿರಿಸಿ ಕೈಚೆಲ್ಲಿ ಕುಸಿದು ಕುಳಿತಾಗ ಆತನಿಗೆ ಶಬ್ದಗಳ ಮೂಲಕ ಅಮೂಲ್ಯವಾದ ಗೀತೋಪದೇಶವನ್ನು ಮಾಡಿ ಜ್ಞಾನಮುದ್ರೆಯನ್ನು ತೋರಿ ಆತನ ವಿಕಲ್ಪವನ್ನು ದೂರಮಾಡಿ ಅರ್ಜುನನನ್ನು ಯುದ್ಧಕ್ಕೆ ಅಣಿಗೊಳಿಸಿದನು. ಹೀಗೆ ಬ್ರಾಹ್ಮಣ ವರ್ಣದ ಸೇವೆಯನ್ನೂ ಮಾಡಿದನು. ಅಂತಿಮವಾಗಿ ಅಧರ್ಮಿಗಳಾಗಿದ್ದ ಕೌರವರನ್ನು ಸೂಕ್ಷ್ಮದಲ್ಲಿ ತಾನೇ ನಾಶಗೊಳಿಸಿದರೂ ಅದರ ಯಶಸ್ಸು ಅರ್ಜುನನಿಗೆ ಸಿಗುವಂತೆ ಮಾಡಿದನು. ಶ್ರೀ ಕೃಷ್ಣನು ಹೇಳಿರುವ ತತ್ವ ಜ್ಞಾನವು ಗೀತೆಯಲ್ಲಿದ್ದು ಜನಸಾಮಾನ್ಯರ ದುಃಖವನ್ನು ತೊಡೆದು ಹಾಕಲು ಎಲ್ಲರಿಗೂ ಎಲ್ಲ ಕಾಲಗಳಲ್ಲೂ ದಾರಿದೀಪವಾಗಿದೆ. ಇಂತಹ ಅಮೂಲ್ಯವಾದ ಶ್ರೀ ಕೃಷ್ಣ ಚರಿತಾಮೃತವನ್ನು ಶಬ್ದಗಳಲ್ಲಿ ವರ್ಣಿಸಲು ಶ್ರೀ ಸಾಮಾನ್ಯನಿಂದ ಸಾಧ್ಯವೇ ಇಲ್ಲ.
ಪ್ರಸ್ತುತ ಕಾಲದಲ್ಲಿ ನಾವು ಮೊಸರು ಕುಡಿಕೆ ಉತ್ಸವವನ್ನು ಕೇವಲ ಮನೋರಂಜನೆಯ ಕಾರ್ಯಕ್ರಮವಾಗಿ ಆಚರಿಸುತ್ತಿದ್ದೇವೆ. ಈ ಉತ್ಸವದ ಧಾರ್ಮಿಕ ಮಹತ್ವವು ಲೋಪವಾಗಿ ಅದಕ್ಕೆ ಮನೋರಂಜನೆಯ ವಿಕೃತ ಸ್ವರೂಪ ಬಂದಿದೆ. ಧರ್ಮದ ಕಾರ್ಯಕ್ಕಾಗಿ ಸಂಘಟಿತರಾಗಬೇಕಾದ ಹಿಂದೂ ಯುವಕರು ತಮ್ಮ ಉದ್ದೇಶವನ್ನು ಮರೆತು ರಾಜಕೀಯ ಲಾಭಕ್ಕಾಗಿ ಧರ್ಮ ವಿರೋಧಿಗಳನ್ನು ಸೇರಿಸಿಕೊಂಡು ಈ ಉತ್ಸವವನ್ನು ಆಚರಿಸುತ್ತಾರೆ. ಅಲ್ಲದೆ ಮದ್ಯ ವ್ಯಾಪಾರಿಗಳು ಲಾಭದ ಉದ್ದೇಶದಿಂದ ಇಂತಹ ಉತ್ಸವಗಳನ್ನು ಆಯೋಜಿಸಿ ಬಹುಮಾನಗಳನ್ನಿಟ್ಟು ಮದ್ಯದ ವ್ಯಾಪಾರವನ್ನು ಮಾಡುತ್ತಾರೆ. ಕಾರ್ಯಕ್ರಮದಲ್ಲಿ ಬಾರಿಸಲಾಗುವ ಕರ್ಣಕರ್ಕಶ ತಮ್ಮಟೆ ವಾದ್ಯಗಳಿಂದ , ಧ್ವನಿವರ್ಧಕಗಳಿಂದ ಪರಿಸರದಲ್ಲಿ ರಜ ತಮ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲಿನ ಜನಸಂದಣಿಯಿಂದ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತದೆ. ಹಿಂದೂ ಧರ್ಮ ಮತ್ತು ಸಂಸ್ಕøತಿಯ ಆಚರಣೆಗಳಲ್ಲಿ ಭಕ್ತಿಭಾವದ ಬದಲಿಗೆ ವಿಕೃತಸ್ವರೂಪವು ನಿರ್ಮಾಣವಾಗಿ ಧರ್ಮಹಾನಿಯನ್ನು ನಾವೇ ಮಾಡುತ್ತಿದ್ದೇವೆ. ಮೆಕಾಲೆ ಶಿಕ್ಷಣ ಪದ್ಧತಿಯ ಪ್ರಭಾವದಿಂದ ಇಂದಿನ ಬಾಲಕ ಬಾಲಕಿಯರು ಹಾಗೂ ಯುವ ಜನತೆಯು ರಾಮಾಯಣ, ಮಹಾಭಾರತ. ಭಾಗವತಗಳಂತಹ ದಿವ್ಯ ಕಾವ್ಯ ಗ್ರಂಥಗಳ ಮಹತ್ವವನ್ನು, ಅವುಗಳಲ್ಲಿನ ಮಹಾನ್ ಪಾತ್ರಗಳ ಸಂದೇಶವನ್ನು, ಗೀತೆಯ ಸಾರವನ್ನು ಅರಿಯದವರಾಗಿದ್ದೇವೆ. ಧರ್ಮಾಚರಣೆಯನ್ನು ಕೈಬಿಟ್ಟು ಅಧರ್ಮಾಚರಣೆಯಲ್ಲಿ, ಭೋಗ ಜೀವನದಲ್ಲಿ ಆಸಕ್ತರಾಗಿದ್ದೇವೆ.
ಪ್ರಸ್ತುತ ಕಾಲದಲ್ಲಿ ಸಾಧಕರ ರಕ್ಷಣೆಗಾಗಿ ಮತ್ತು ಧರ್ಮದ ಪುನರುತ್ಥಾನಕ್ಕಾಗಿ ಶ್ರೀ ಕೃಷ್ಣನು ಮತ್ತೊಮ್ಮೆ ಅವತಾರ ತಾಳಿ ಬರುವುದು ಅವಶ್ಯವಾಗಿದೆ. ಆದುದರಿಂದ ಹಿಂದೂಗಳಾದ ನಾವೆಲ್ಲರೂ ಶ್ರೀಕೃಷ್ಣನಲ್ಲಿ ಭಕ್ತಿಭಾವವನ್ನು ವೃದ್ಧಿಸಿಕೊಂಡು ಆತನ ಭಕ್ತರಾಗಿ ಆತನ ಕೃಪೆಯನ್ನು ಗಳಿಸಬೇಕು. ಆಗಲೇ ಮುಂದಿನ 10 ವರ್ಷಗಳಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲು ಸಾಧ್ಯ. ಧರ್ಮರಕ್ಷಣೆಗಾಗಿ, ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ನಾವೆಲ್ಲರೂ ಕಟಿ ಬದ್ಧರಾಗೋಣ. ಅದಕ್ಕಾಗಿ ಶ್ರೀಕೃಷ್ಣನಲ್ಲಿ ಈ ರೀತಿ ದಿನಾಲೂ ಪ್ರಾರ್ಥನೆ ಮಾಡೋಣ “ ಹೇ, ಶ್ರೀ ಕೃಷ್ಣಾ, ನಮ್ಮೆಲ್ಲರನ್ನೂ ನಿನ್ನ ಭಕ್ತರನ್ನಾಗಿಸು. ನಮಗೆ ಸದ್ಭುದ್ಧಿ ಕೊಟ್ಟು ಧರ್ಮದ ರಕ್ಷಣೆಯ ಹಾಗೂ ಹಿಂದೂರಾಷ್ಟ್ರದ ಸ್ಥಾಪನೆಯ ಮಹತ್ಕಾರ್ಯದಲ್ಲಿ ನಮ್ಮನ್ನು ಒಗ್ಗೂಡಿಸು. ನಮಗೆ ಸದಾ ನಿನ್ನ ಶ್ರೀ ರಕ್ಷೆ ಇರಲಿ”. ಅದರಿಂದ ಹಿಂದೂ ರಾಷ್ಟ್ರವು ಅತೀ ಶೀಘ್ರವಾಗಿ ನಿರ್ಮಾಣವಾಗಿ ಅದು ಜಗದ್ಗುರು ಆಗಿ ಸನಾತನ ಧರ್ಮದ ಗತವೈಭವವು ಪುನಸ್ಥಾಪನೆ ಆಗಲಿ.
ಆಧಾರ ಗ್ರಂಥ : ಸನಾತನ ಸಂಸ್ಥೆಯ ಕಿರುಗ್ರಂಥ “ಶ್ರೀಕೃಷ್ಣ”.

By suddi9

Leave a Reply

Your email address will not be published. Required fields are marked *