ಬಜ್ಪೆ: ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಾಜಕೀಯ ವೈಷಮ್ಯದಿಂದ ಪರಸ್ಪರ ಕಾದಾಟ ನಡೆಸಿದ ಘಟನೆ ಕುಪ್ಪೆಪದವು ಸಮೀಪದ ಕಿಲೆಂಜಾರ್ ಮಸೀದಿ ಬಳಿ ಆ.28ರಂದು ನಡೆದಿದೆ. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಮೂರು ಪ್ರತ್ಯೇಕ ದೂರು ದಾಖಲಾಗಿದೆ
ಕಾಂಗ್ರೆಸ್ ಕಾರ್ಯಕರ್ತನಿಗೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಕುಪ್ಪೆಪದವಿನ ಕಿಲೆಂಜಾರ್ ಸಮೀಪದ ಮಸೀದಿ ಬಳಿ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತನಾದ ಹಸನ್ ಬಾವಾ ಎಂಬವರು ಕುಪ್ಪೆಪದವಿನ ಕಿಲೆಂಜಾರ್ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದರು. ಈ ವೇಳೆ ಇನ್ನೋವಾ ಕಾರ್‍ನಲ್ಲಿ ಬಂದ ಆರೋಪಿಗಳಾದ ಇ.ಪಿ.ಹಮ್ಮಬ್ಬ, ಕಜೆ ಶರೀಪ್, ಸುಲೇಮಾನ್ ಚೈಯ್ಯ(ಆಚಾರಿ ಜೋರ್), ಸಪ್ವಾನ್ (ಚಪ್ಪು), ತಾಜುದ್ದೀನ್ ಕಜೆ, ನವಾಜ್ ರೇಷ್ಮಾ ಮಂಜಿಲ್, ಜಬ್ಬರ(ಬೋಜಾ) ಸಮ್ರಾಜ್(ಚಮ್ಮು ಕಾಡಕೇರಿ) ಹಸನ್ ಬಾವಾರನ್ನು ತಡೆದಿದ್ದಾರೆ. ಈ ಪೈಕಿ ಶರೀಫ್ ಎಂಬಾತ ಹಸನ್ ಅವರಲ್ಲಿ, ನೀನು ಕಾಂಗ್ರೆಸ್‍ನ ರಜಾಕನೊಂದಿಗೆ ಸೇರಿ ಗ್ರಾಮ ಸಭೆಯಲ್ಲಿ ನಮ್ಮ ವಿರುದ್ಧ ಬಾರೀ ಮಾತಾಡುತ್ತೀಯಾ? ನಿನ್ನನ್ನು ಕೊಂದು ಮುಗಿಸಿದರೆನೇ ನಿನ್ನ ಪಾರ್ಟಿಯವರು ಸುಮ್ಮನಿರುತ್ತಾರೆ ಎಂದು ಬೆದರಿಕೆಯೊಡ್ಡಿದ್ದಾನೆ.
ಇದೇ ವೇಳೆ ಡಿ.ಪಿ. ಹಮ್ಮಬ್ಬ ಎಂಬಾತ ಚೂಪಾದ ಕಬ್ಬಿಣದ ಸರಳಿನಿಂದ ಹಸನ್ ಅವರ ತಲೆಗೆ ತಿವಿದು ಕೊಲೆಗೆ ಯತ್ನಿಸಿದ್ದಾನೆ. ಇದೇ ವೇಳೆ ಚೈಯಾ @ ಸುಲೇಮಾನ್ ಕಬ್ಬಿಣದ ಎಂಬುವನು ಸರಳಿನಿಂದ ಹಲ್ಲೆ ನಡೆಸಿದ್ದಾನೆ.
ಇದೇ ವೇಳೆ ಆದಮ್ ಎಂಬವರು ಮಸೀದಿಗೆ ಬರುತ್ತಿರುವುದನ್ನು ಕಂಡ ಆರೋಪಿಗಳು, `ಈತನು ಕೂಡಾ ಹಸನ್‍ನ ಜನ’ ಎಂದು ಬೈದು ಅವರಿಗೂ ಸರಳಿನಿಂದ ಹೊಡೆದು ಕೊಲೆಯತ್ನ ನಡೆಸಿದ್ದಾರೆ ಎಂದು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆಡಿಎಸ್ ಕಾರ್ಯಕರ್ತರಿಂದ
ಕಾಂಗ್ರೆಸಿಗನಿಗೆ ಹಲ್ಲೆ
ಇದೇ ಘಟನೆಯ ಮುಂದುವರಿದ ಭಾಗವಾಗಿ ಕುಪ್ಪೆಪದವಿನ ಕಿಲೆಂಜಾರೆ ನಿವಾಸಿ ಸಫ್ವಾನ್ ಎಂಬವರ ಅಂಗಡಿಗೆ ನುಗ್ಗಿದ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಆರೋಪಿಗಳಾದ ಜಾಬಿರ್, ಯೂನಸ್, ಆಸ್ಪಕ್, ಇಕ್ಬಾಲ್, ನಿಶಾನ್, ಅಬ್ಬಾಸ್, ಕಬೀರ್, ಹಾಗೂ ಶಾನಿಬ್ ಎಂಬವರು ಸಫ್ವಾನ್ ಅವರ ಅಂಗಡಿಗೆ ನುಗ್ಗಿ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಂಗಡಿಯಲ್ಲಿಟ್ಟಿದ 48 ಸಾವಿರ ಹಣ ಹಾಗೂ ಇನ್ನೊಬ್ಬರಿಗೆ ಕೊಡಲೆಂದು ಇಟ್ಟಿದ್ದ 1500 ರೂ. ಹಣವನ್ನು ತೆಗೆದುಕೊಂಡಿದ್ದಾರೆ. ಈ ವೇಳೆ ಆರೋಪಿಗಳು ನೀನು ಜನತಾದಳದ ಡಿ.ಪಿ. ಹಮ್ಮಬ್ಬನಿಗೆ ಸಪೋರ್ಟ್ ಮಾಡಿದ್ರೆ ಬಿಡುವುದಿಲ್ಲ ಎಂದು ಬೆದರಿಸಿ ಪರಾರಿಯಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕುಪ್ಪೆಪದವಿನ ಕಿಲೆಂಜಾರ್ ಮಸೀದಿಗೆ ನಮಾಜಿಗೆ ಹೋಗುತ್ತಿದ್ದ ಹಮ್ಮಬ್ಬಾ ಅವರಿಗೆ ಇನ್ನೋವಾ ಕಾರ್‍ನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಹಮ್ಮಬ್ಬಾ ಅವರನ್ನು ಆರೋಪಿಗಳಾದ ಅಬ್ದುಲ್ ರಜಾಕ್, ರಫೀಕ್, ಸುಲೈಮಾನ್, ಅಬ್ದುಲ್ ಘನಿ, ತಾಶೀರ್, ಹಸನ್ ಬಾವ, ಆದಮ್ ಹಳೇನೀರು, ಅಸ್ಪಕ್, ಆಚಾರಿ ಜೋರ್ ಮತ್ತು ಇತರರು, ನೀನು ದೊಡ್ಡ ಲೀಡರಾ, ನಿನಗೆ ಹೊಡೆದ ಜೈಲಿಗೆ ಹೋದರೂ ಪರವಾಗಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.
ಇದೇ ವೇಳೆ ಮಸೀದಿಗೆ ಬರುತ್ತಿದ್ದ ಅಬ್ದುಲ್ ಜಬ್ಬರ್ ಮತ್ತು ಅಬ್ದುಲ್ ರಿಯಾಜ್ ಎಂಬವರು ತಡೆಯಲೆಂದು ಹೋದಾಗ ಇವರಿಬ್ಬರೂ ಕೂಡಾ ಹಮ್ಮಬ್ಬಾ ಅವರಿಗೆ ಸಪೋರ್ಟ್ ಮಾಡುವವರೆಂದು ಬೈದು ಯದ್ವಾತದ್ವಾ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಹಿನ್ನೆಲೆ:
ಕಳೆದ ಕೆಲ ದಿನಗಳ ಹಿಂದೆ ಕುಪ್ಪೆಪದವಿನಲ್ಲಿ ಗ್ರಾಮ ಸಭೆ ನಡೆದಿತ್ತು. ಈ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು ರಾಜಕೀಯ ವೈಷಮ್ಯ ಬೆಳೆದಿತ್ತು. ಇದರಿಂದ ಕುಪಿತಗೊಂಡ ಇತ್ತಂಡಗಳ ಸದಸ್ಯರು ಕಿಲೆಂಜಾರ್ ಮಸೀದಿ ಸಮೀಪ ಕಾದಾಟ ನಡೆಸಿದ್ದಾರೆ ಎನ್ನಲಾಗಿದೆ.
