ಉಳ್ಳಾಲ: ಪಾಳುಬಿದ್ದ ಮನೆಯಲ್ಲಿ ಮಹಿಳೆ ಸೇರಿದಂತೆ ಐವರು ಪುರುಷರು ಅನೈತಿಕ ಚಟುವಟಿಕೆಯಲ್ಲಿ ನಿರತರಾಗಿರುವುದರ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ. ದಾಳಿ ವೇಳೆ ಉಳ್ಳಾಲ ಪೊಲೀಸ್ ಪೇದೆ ಮಹೇಶ್ ಎಂಬವರಿಗೆ ಆರೋಪಿಯೋರ್ವ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆಯೂ ನಡೆದಿದೆ.


ನ್ಯೂಉಚ್ಚಿಲ ನಿವಾಸಿ ರಾಕೇಶ್(34), ಬೀರಿ ನಿವಾಸಿ ಮಹಮ್ಮದ್ ಸಿರಾಜ್(30) ಹಾಗೂ ಅಸೈಗೋಳಿ ನಿವಾಸಿ 35ರ ಹರೆಯದ ವಿವಾಹಿತೆ ಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ದಾಳಿ ಸಂಬಂಧ ಬೀರಿ ನಿವಾಸಿ ಅಬ್ಬಾಸ್, ಮುಕ್ಕಚ್ಚೇರಿಯ ಜಾಫರ್ ಎಂಬವರು ಪರಾರಿಯಾಗಿದ್ದಾರೆ.
ಸೋಮೇಶ್ವರದಲ್ಲಿರುವ ಉಳ್ಳಾಲ ರೈಲ್ವೇ ನಿಲ್ದಾಣ ಸಮೀಪದ ಪಾಳುಬಿದ್ದ ಮನೆಯಲ್ಲಿ ಜನರು ಇರುವುದರ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಉಳ್ಳಾಲ ಎಸ್.ಐ ಭಾರತಿ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿತ್ತು. ಈ ವೇಳೆ ಇಬ್ಬರು ಕಂಪೌಂಡ್ ಹಾರಿ ಪರಾರಿಯಾದರೆ , ಮೂವರನ್ನು ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪೇದೆಗೆ ಹಲ್ಲೆ : ಇಬ್ಬರು ಆರೋಪಿಗಳು ಕಂಪೌಂಡ್ ಹಾರಿ ಪರಾರಿಯಾಗುತ್ತಿದ್ದಂತೆ, ಇನ್ನೋರ್ವ ಆರೋಪಿ ರಾಕೇಶ್ ಕೂಡಾ ಅದೇ ದಾರಿಯಲ್ಲಿ ಪರಾರಿಯಾಗುತ್ತಿದ್ದನು. ಇದನ್ನು ಕಂಡ ಎಸ್.ಐ ಭಾರತಿ ಅವರಿಗೆ ಚಾಲಕರಾಗಿರುವ ಪೊಲೀಸ್ ಪೇದೆ ಮಹೇಶ್ ಗಟ್ಟಿ ಅವರು ಕಂಪೌಂಡ್ ಜಿಗಿದು ಆತನನ್ನು 10 ನಿಮಿಷಗಳ ಕಾಲ ಬೆನ್ನಟ್ಟಿ ಬಳಿಕ ಹಿಡಿಯುವಲ್ಲಿ ಯಶಸ್ವಿಯಾದರು. ಆದರೂ ಪಟ್ಟು ಬಿಡದ ಆರೋಪಿ ರಾಕೇಶ್ , ಪೇದೆ ಮಹೇಶ್ ಅವರ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿ, ಉರುಳಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ. ದೃಢಕಾಯ ಶರೀರದ ಆರೋಪಿಯನ್ನು ಹತೋಟಿಯಲ್ಲಿಡಲು ಮಹೇಶ್ ಅವರಿಗೆ ಸರಾಸರಿ 15 ನಿಮಿಷಗಳ ಕಾಲಾವಧಿ ತಗಲಿತು. ಹಲ್ಲೆಗೊಳಗಾದ ಮಹೇಶ್ ಅವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
