ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು ಇದಕ್ಕಾಗಿ ಘನತ್ಯಾಜ್ಯ ಘಟಕವನ್ನು ನಿರ್ಮಿಸಬೇಕು, ನಾದುರಸ್ತಿಯಲ್ಲಿರುವ ರಸ್ತೆಗಳನ್ನು ದುರಸ್ತಿಗೊಳಿಸಬೇಕು, ಗೋ ಕಳ್ಳತನವನ್ನು ಸದೆ ಬಡಿಯಬೇಕು ಹಾಗೂ 94ಸಿ ಸಮಸ್ಯೆಯನ್ನು ಸರಿ ಪಡಿಸುವಂತೆ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ ಘಟನೆ ಪುತ್ತಿಗೆಯಲ್ಲಿ ನಡೆದಿದೆ.

ಪುತ್ತಿಗೆ ಗ್ರಾ.ಪಂ ಅಧ್ಯಕ್ಷೆ ಮೋಹಿನಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಈ ಬಗ್ಗೆ ಚರ್ಚೆ ನಡೆಸಿದರು. ನಗರಕ್ಕೆ ಸಮೀಪದಲ್ಲಿರುವ ಪುತ್ತಿಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ಮುಂಬರುವ ದಿನಗಳಲ್ಲಿ ಘನತ್ಯಾಜ್ಯ ನಿರ್ವಹಣೆಯ ಸಮಸ್ಯೆ ಕೆಲವು ಕಡೆ ಸಮಸ್ಯೆಯಾಗುತ್ತಿದ್ದು, ಘಟತ್ಯಾಜ್ಯ ಘಟಕ ಸ್ಥಾಪಿಸಲು ಸರ್ಕಾರಿ ಖಾಲಿ ಜಾಗವನ್ನು ಕಾದಿರಿಸಬೇಕೆಂದು ಗ್ರಾಮಸ್ಥರ ಪರವಾಗಿ ವಾಸುದೇವ ನಾಯಕ್ ಗ್ರಾಮಸಭೆಯಲ್ಲಿ ಆಗ್ರಹಿಸಿದರು.

ಈ ಬಗ್ಗೆ ಗ್ರಾಮಕರಣಿಕ ಕಿಶೋರ್ ಮಾತನಾಡಿ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ನಿವೇಶನ ಸೌಲಭ್ಯ ಒದಗಿಸಲು ಡೀಮ್ಡ್ ಫಾರೆಸ್ಟ್ ಸಮಸ್ಯೆ ಹೆಚ್ಚಾಗಿದೆ. ಇದೀಗ ಈ ಸಮಸ್ಯೆಯು ಶೀಘ್ರದಲ್ಲಿ ಬಗೆಹರಿಯಲಿರುವುದರಿಂದ ಮುಂದೆ ಯಾವುದಾದರೂ ಖಾಲಿ ಜಾಗದಲ್ಲಿ ಘಟಕಕ್ಕೆ ಜಾಗ ಕಾದಿರಿಸಹುದು ಎಂದು ಗ್ರಾಮ ಕರಣಿಕ ಕಿಶೋರ್ ಉತ್ತರಿಸಿದರು.

ಪಂಚಾಯತ್ ವ್ಯಾಪ್ತಿಯ ಹಂಡೇಲು-ಮಾಸ್ತಿಕಟ್ಟೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳು ತಲುಪುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ, ಚರಂಡಿ ಅವ್ಯವಸ್ಥೆಯಿಂದ ಸಮಸ್ಯೆ ಎದುರಿಸುವಂತಾಗಿದೆ ಎಂದು ವಿಲ್ಮಾ ಡಿ’ಸೋಜಾ ಹಾಗೂ ಅಲ್ಲಿನ ನಿವಾಸಿಗಳು ಸಭೆಯ ಮುಂದಿಟ್ಟರು. ಖಾಸಗಿ ಜಾಗದ ಮಧ್ಯೆ ನಳ್ಳಿ ನೀರಿನ ಸಂಪರ್ಕ ಕಲ್ಪಿಸಬೇಕಿರುವುದರಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವಿಳಂಭವಾಗುತ್ತಿದೆ. ಚರಂಡಿ, ರಸ್ತೆ ಅನುದಾನ ಬಂದರೆ ಮೀಸಲಿರಿಸುತ್ತೇವೆ ಎಂದು ವಾರ್ಡ್ ಸದಸ್ಯ ಗಿರೀಶ್ ಪೂಜಾರಿ ಉತ್ತರಿಸಿದರು. ಈ ಪ್ರದೇಶಕ್ಕೆ ಹೋಗಿ ಸಮಸ್ಯೆಗಳನ್ನು ಪರಿಶೀಲಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಮೂಡುಬಿದಿರೆ ಹೋಬಳಿಯ ರೈತ ಸಂಪರ್ಕ ಕೇಂದ್ರವು ಜಾಗದ ಸಮಸ್ಯೆಯಿಂದ ಬಳಲುತ್ತಿದ್ದು, ಪೇಟೆಗೆ ಹತ್ತಿರವಿರುವ ವಿದ್ಯಾಗಿರಿಯಲ್ಲಿ ಸರ್ಕಾರಿ ಖಾಲಿ ಜಾಗವಿದ್ದರೆ ಕೊಡಿಸುವ ಪ್ರಯತ್ನ ಮಾಡಿ ಎಂದು ವಲಯ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ಸಲಹೆಯಿತ್ತರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಪಿಡಿಒ ಮಾರ್ಷಲ್ ಡಿ’ಸೋಜಾ ತಿಳಿಸಿದರು. ಕಂದಾಯ ಇಲಾಖೆ ಹಾಗೂ ಪಂಚಾಯತ್ ಜಂಟಿಯಾಗಿ ರೈತರಿಗೆ `ಕಿಶಾನ್ ಕಾರ್ಡ್’ನ್ನು ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಿದರೆ ರೈತರಿಗೆ ಪ್ರಯೋಜನವಾಗುತ್ತದೆ ಎಂದು ಧನಕೀರ್ತಿ ಬಲಿಪ ತಿಳಿಸಿದರು.

ಒಂಟಿಕಟ್ಟೆ-ಪುತ್ತಿಗೆ ಗ್ರಾ.ಪಂ ರಸ್ತೆ, ಗುಡ್ಡೆಯಂಗಡಿ-ಆನ್ನಡ್ಕ, ವಿದ್ಯಾಗಿರಿ-ಪರಾಡಿ ರಸ್ತೆಗಳ ನಾದುರಸ್ತಿ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಹುಚ್ಚುನಾಯಿ ಕಡಿತದಿಂದ ಬರುವ ಕಾಯಿಲೆಯನ್ನು ತಡೆಯಲು ನಾಯಿಗಳಿಗೆ ವಾರ್ಡ್‍ವೊಂದರಲ್ಲಿ 5 ಕಡೆ ಚುಚ್ಚುಮದ್ದು ಶಿಬಿರ ನಡೆಸಿದರೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಪಂಚಾಯತ್‍ನವರು ಈ ಕುರಿತು ಆಸಕ್ತಿ ವಹಿಸಬೇಕೆಂದು ಪಶುವೈದ್ಯ ಡಾ.ಜಗನ್ನಾಥ್ ಸಭೆಯಲ್ಲಿ ತಿಳಿಸಿದರು.

ಗ್ರಾ.ಪಂ ವ್ಯಾಪ್ತಿಯಲ್ಲಿ ಜಾನುವಾರುಗಳ ಕಳ್ಳತನ ನಡೆಯುತ್ತಿದ್ದು ಈ ಪೊಲೀಸ್ ಇಲಾಖೆ ಸರಿಯಾದ ಕ್ರಮವನ್ನು ಕೈಗೊಳ್ಳುತ್ತಿಲ್ಲವೆಂದು ಕೃಷಿಕರು ಗ್ರಾಮಸಭೆಯಲ್ಲಿ ಆರೋಪಿಸಿದರು. ಜಾನುವಾರು ದೊಡ್ಡಿ ಮಾಡಿ ಅದಕ್ಕೆ ಸುರಕ್ಷತೆಯನ್ನು ಒದಗಿಸಿದರೆ ಗೋ ಕಳ್ಳತನ ನಿಯಂತ್ರಿಸಬಹುದು ಎಂದು ಧನಕೀರ್ತಿ ಬಲಿಪ ಸಲಹೆಯಿತ್ತರು. ಕಳ್ಳತನವಾದ ಗೋವಿಗೆ ಯಾವುದಾದರೂ ಯೋಜನೆಯಲ್ಲಿ ವಿಮೆ ಸೌಲಭ್ಯವಿದೆಯೇ ಎಂದು ಪಶುವೈದ್ಯರನ್ನು ಶ್ರೀನಿವಾಸ್ ರಾವ್ ಪ್ರಶ್ನಿಸಿದರು. ಅಂತಹ ಮಾದರಿಯಲ್ಲಿ ಸರ್ಕಾರದಿಂದ ಯಾವುದೇ ಯೋಜನೆ ಬಂದಿಲ್ಲ ಎಂದು ಪಶುವೈದ್ಯಾಧಿಕಾರಿ ಉತ್ತರಿಸಿದರು.
.
ಸನ್ಮಾನ: 12 ಲಕ್ಷ ವೆಚ್ಚದಲ್ಲಿ ಸಾರ್ವಜನಿಕರಿಗೆ ರಸ್ತೆ ಸಂಪರ್ಕ ಕಲ್ಪಿಸಿದ ಮಡ್ಮಣಾಯ ಕಟುಂಬದ ಪರವಾಗಿ ವಾದಿರಾಜ ಮಡ್ಮಣಾಯ ಅವರನ್ನು ಸನ್ಮಾನಿಸಲಾಯಿತು.

25 mood puthhige gramasabhe

ಉಪಾಧ್ಯಕ್ಷೆ ಶುಭಾ ಆರ್ ಹೆಬ್ಬಾರ್,ತಾ.ಪಂ ಸದಸ್ಯ ಪ್ರಕಾಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಸುನೀತಾ, ನೋಡೆಲ್ ಅಧಿಕಾರಿಯಾಗಿದ್ದರು. ಸದಸ್ಯರಾದ ನಾಗವರ್ಮ ಜೈನ್, ಶಶಿಧರ ನಾಯಕ್, ಗ್ರಾಮಸ್ಥರಾದ ಯಾದವ ಶೆಟ್ಟಿ, ವಾದಿರಾಜ ಭಟ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

 

By suddi9

Leave a Reply

Your email address will not be published. Required fields are marked *