ಮೂಡುಬಿದಿರೆ: ನಗರ ಮಾತ್ರವಲ್ಲ ಹಳ್ಳಿಗಳಲ್ಲೂ ಅಪರೂಪವಾಗಿ ಕಾಣಸಿಗುವ ಮುಳಿಹುಳ್ಳಿನ ಮನೆಯದು. ಆ ಮನೆಯಲ್ಲಿ ಇಳಿ ವಯಸ್ಸಿನ ದಂಪತಿ. ಇಬ್ಬರು ಹದಿಹರೆಯ ಹುಡುಗಿಯರು. ಇಬ್ಬ ಎಳೆಯ ಹುಡುಗ. ದಲಿತರಿಗೆ ಸಿಗುವ ಸರ್ಕಾರದ ಸವಲತ್ತುಗಳು ಕಳೆದ ಮೂರು ದಶಕಗಳಿಂದ ಈ ಕುಟುಂಬಕ್ಕೆ ಸಿಕ್ಕಿಲ್ಲ. ಆಡಳಿತ ವ್ಯವಸ್ಥೆಯು ಕಣ್ಣಿದ್ದು ಕುರುಡರಾಗಿರುವುದರಿಂದ ಈ ಕುಟುಂಬ ನಿತ್ಯವೂ ಕಣ್ಣೀರಿಡುವಂತಾಗಿದೆ.
dalita Family (1)

dalita Family (2)

dalita Family (3)ಇದು ಯಾವುದೋ ಕುಗ್ರಾಮದಲ್ಲಿರುವ ಕುಟುಂಬ ಸ್ಥಿತಿಯಲ್ಲ. ಹಲವಾರು ವಿಧದಲ್ಲಿ ಅಭಿವೃದ್ಧಿಯ ಪಥ ಹಿಡಿದಿರುವ ಮೂಡುಬಿದರೆ ನಗರದ ಕೇಂದ್ರದಿಂದ ಕೇವಲ 1 ಕೀ.ಮೀ ದೂರದಲ್ಲಿ, ಅದೂ ರಾಜ್ಯ ಸರ್ಕಾರ ಮೀನುಗಾರಿಕ, ಯುವಜನಸೇವಾ ಸಚಿವರ ಮನೆಯಿಂದ ಸುಮಾರು 500 ಮೀ ದೂರವಿರುವ ಆದಿ ದ್ರಾವಿಡ ಸಮುದಾಯದ ಕುಟುಂಬದ ಶೋಚನೀಯ ಬದುಕು.ಅದಕ್ಕಿಂತ ಮುಖ್ಯವಾಗಿ 10 ವರ್ಷಗಳ ಹಿಂದೆ ಪುರಸಭೆಯಲ್ಲಿ ಸದಸ್ಯನಾಗಿ, ದಲಿತ ಸಮುದಾಯದ ಮುಖಂಡನಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ, ದಿವಂಗತ ಗೋಪಾಲ ನಾರಂಪಾಡಿ ಅವರ ಕುಟುಂಬದ ಪ್ರಸ್ತುತ ಸ್ಥಿತಿಯಿದು.
ಮೂಡುಬಿದರೆ-ನಾರಾವಿ ರಸ್ತೆಯ ಪಕ್ಕದಲ್ಲಿ, ಮೂಡುಬಿದರೆ ಪುರಸಭಾ-ಮಾರ್ಪಾಡಿ ಗ್ರಾಮದ ಜೈನಪೇಟೆಯ ಸಮೀಪ ನಾರಾಂಪಡಿ ಕಾಲೋನಿಯಲ್ಲಿ ಈ ದಲಿತ ಕುಟುಂಬವಿದೆ. ಅಕ್ಕಪಕ್ಕದಲ್ಲಿರುವ 10ಕ್ಕೂ ಅಧಿಕ ಮನೆಗಳಿಗೆ ಸವಲತ್ತುಗಳ ಬೆಳಕು ಸಿಕ್ಕಿದರೆ, ಈ ಕುಟುಂಬ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ರಾತ್ರಿ ಮಾತ್ರವಲ್ಲ ಹಗಲಲ್ಲೂ ಕತ್ತಲಿನಂತೆ ಬದುಕುವ ಪರಿಸ್ಥಿತಿಯಿದೆ. ಜಾಗದ ಬಗ್ಗೆ ಇರುವ ತಕರಾರೇ ಈ ಕುಟುಂಬವನ್ನು ಶೋಚನೀಯ ಪರಿಸ್ಥಿತಿಯಲ್ಲಿರಿಸಿದೆ.
ಅವಿವಾಹಿತರಾಗಿದ್ದ ದಿ.ಗೋಪಾಲ ನಾರಂಪಾಡಿಯ ತಾಯಿ ಬೈದು, ತಂದೆ ಆನಂದ ಮನೆಯಲ್ಲಿ ಬದುಕುತ್ತಿದ್ದಾರೆ. ಗೋಪಾಲ ಅವರ ಸಹೋದರಿ ತೀರಿದ ಬಳಿಕ ಆಕೆಯ ಇಬ್ಬರು ಹೆಣ್ಣು ಮಕ್ಕಳು, ಗಂಡು ಮಗ ಇದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. 70 ವರ್ಷ ದಾಟಿದ ಆನಂದ ಅನಾರೋಗ್ಯದಿಂದ ಬಳಲುತ್ತಿದ್ದು, 65 ವಯಸ್ಸಿನ ಬೈದು ಅವರು ಮಾಡುವ ಕೂಲಿಯೇ ಈ ಮನೆಗೆ ಆಧಾರ. ಹಿರಿಯ ಮೊಮ್ಮಗಳು ಇತ್ತೀಚೆಗೆ ಗೇರು ಕಾರ್ಖಾನೆಗೆ ಹೋಗುತ್ತಿರುವುದರಿಂದ ತುಸು ನೆಮ್ಮದಿ ತರಿಸಿದರೂ, ಬದುಕು ಮಾತ್ರ ದುಸ್ತರ. ಈ ಯುವತಿಯ ತಂಗಿ ಸ್ಥಳೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ತಮ್ಮ ಶಾಲೆಗೆ ಹೋಗುತ್ತಾನೆ.
ಕುಟುಂಬಕ್ಕೆ ಪಡಿತರ ಚೀಟಿ, ಮತದಾರರ ಚೀಟಿ ಹಾಗೂ ಆಧಾರ ಕಾರ್ಡ್ ಈಗಿರುವ ಮನೆಯ ಹೆಸರಲ್ಲೇ ಇದೆ. ಪಡಿತರ ಸೌಲಭ್ಯ, ದಂಪತಿಗೆ ಮತದಾನದ ಹಕ್ಕು ಬಿಟ್ಟರೆ ಉಳಿದ ಯಾವುದೇ ಸರ್ಕಾರದ ಸವಲತ್ತು ಈ ಮನೆಯನ್ನು ಇಷ್ಟರವರೆಗೆ ಸೋಕಿಲ್ಲ. ಕಾನೂನು ರೀತಿಯ ಹೋರಾಟ ಮಾಡಿ ಸವಲತ್ತು ಪಡೆಯುವಲ್ಲೂ ಕುಟುಂಬ ಅಶಕ್ತವಾಗಿದೆ.
ಅತ್ತ ಸಣ್ಣ ಮನೆಯೂ ಅಲ್ಲ, ಇತ್ತ ಜೋಪಡಿಯೂ ಅಲ್ಲ ಎನ್ನುವ ರೀತಿಯಲ್ಲಿರುವ ಮನೆ ಮಣ್ಣಿನ ಗೋಡೆ ಹಾಗೂ ಮುಳ್ಳಿಹುಲ್ಲಿನಿಂದ ಮಾಡಲಾಗಿದ್ದು, ಯಾವುದೇ ಸಂದರ್ಭದಲ್ಲಿ ಧರೆಗುರುಳಬಹುದಾದ ಸಂದರ್ಭವಿದೆ. ಕಿರಿದಾದ ಜಾಗದಲ್ಲಿ ಮನೆಯ ವಿದ್ಯುತ್ ಸಂಪರ್ಕ,ನೀರಿನ ಸಂಪರ್ಕವಿಲ್ಲ. ರಾತ್ರಿ ಮಾತ್ರವಲ್ಲದೇ ಹಗಲಲ್ಲೂ ಈ ಮನೆ ತುಂಬ ಕತ್ತಲೇ ಅವರಿಸಿತ್ತದೆ. ಮನೆಯವರು ಚಿಮುಣಿ ಬೆಳಕನ್ನೇ ಆಶ್ರಯಿಸಬೇಕಾಗಿದೆ. ಕಾಲೇಜು-ಶಾಲೆಗೆ ಹೋಗುವ ಮಕ್ಕಳು ಇರುವುದರಿಂದ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಹದಿಹರೆಯದ ಹುಡುಗಿಯರಿರುವ ಈ ಮನೆಯಲ್ಲಿ ಶೌಚಾಗೃಹವಾಗಲಿ, ಸ್ನಾನದ ಗೃಹವಾಗಲಿ ಇಲ್ಲ. ಹುಡುಗಿಯರು ತಮ್ಮ ನಿತ್ಯಕರ್ಮ ಪೂರೈಸಲು ಪಕ್ಕದ ಮನೆಯನ್ನೇ ಆಶ್ರಯಿಸಬೇಕಾದ ಅನಿವಾರ್ಯತೆಯಿದೆ. ಮನೆಯ ಮುಂದೇ ಬಟ್ಟೆಯನ್ನು ಅಡ್ಡ ಕಟ್ಟಿ ವೃದ್ಧ ದಂಪತಿ, ಬಾಲಕ ಸ್ನಾನ ಮಾಡುತ್ತಾರೆ. ಕ್ಷಣ ಕ್ಷಣವೂ ಈ ಮನೆಯಲ್ಲಿ ಅಸುರಕ್ಷತೆ ಕಾಡುತ್ತಿದೆ. ನಗರ ಪ್ರದೇಶವಾಗಿರುವ ನಾರಂಪಡಿ ಏರಿಯದಲ್ಲಿ ಬಹುಮಹಡಿ ಕಟ್ಟಡಗಳು ಹೆಚ್ಚಾಗುತ್ತಿದೆ, ಆದರೆ ಇನ್ನೂ ಎಚ್ಚರವಾಗದ ಆಡಳಿತ ವ್ಯವಸ್ಥೆಯನ್ನು ದಲಿತ ಕುಟುಂಬದ ಪರಿಸ್ಥಿತಿ ಆಡಳಿತ ವ್ಯವಸ್ಥೆಯ ಸ್ಥಿತಿಯನ್ನು ಅಣಕಿಸುವಂತಿದೆ.

By suddi9

Leave a Reply

Your email address will not be published. Required fields are marked *