ಮಂಗಳೂರು: ಅಬ್ಬಾ! ನಿಜಕ್ಕೂ ಒಂದು ಅದ್ಭುತವೇ. ಎಲ್ಲರೂ ತುಚ್ಛ ಭಾವನೆಯಿಂದ ನೋಡುತ್ತಿದ್ದ, ಎಲ್ಲರೂ ನಾಟಕ ಎಂದೇ ಹೇಳಿಕೊಳ್ಳುತ್ತಾ ಮೂಗು ಮುರಿಯುತ್ತಿದ್ದ ತುಳು ಸಿನಿಮಾರಂಗಕ್ಕೆ ಒಂದು ಅತ್ಯದ್ಭುತ ಪ್ರತಿಕ್ರಿಯೆ, ಎಲ್ಲೆಡೆಗಳಿಂ ದಲೂ ಶಹಬ್ಬಾಸ್‍ಗಿರಿ ತಂದು ಕೊಟ್ಟಿರುವ ಸೂಪರ್ ಹಿಟ್ ಸಿನಿಮಾ ಚಾಲಿಪೋಲಿಲು (ಆಗೋಸ್ಟ್ 26ಕ್ಕೆ) 300 ದಿನಗಳ ಪ್ರದರ್ಶನ ಕಾಣುವ ಮೂಲಕ ಮಹಾ ಸಾಧನೆ ಮೆರೆಯುತ್ತಿರುವುದು ತುಳುವರೆಲ್ಲರೂ ಸಂಭ್ರಮಿಸಬೇಕಾದ ವಿಷಯ. ಈಗಲೂ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾವು ಒಂದು ವರ್ಷ ಪ್ರದರ್ಶನ ಕಾಣುವ ಎಲ್ಲಾ ಸಾಧ್ಯತೆಗಳೂ ಇವೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಅವರು ಮಂಗಳೂರಿನ ಚಿತ್ರಮಂದಿರದಲ್ಲಿ ವೀಕ್ಷಿಸಿದ ಮೊದಲ ಸಿನಿಮಾ ಎಂದೂ ದಾಖಲಾಗಿರುವ ಚಾಲಿಪೋಲಿಲು, ಖ್ಯಾತ ಜಾನಪದ ವಿದ್ವಾಂಸ ಪ್ರೊ. ಬಿ.ಎ.ವಿವೇಕ್ ರೈ ಅವರಂಥವರಿಂದಲೂ ಮೆಚ್ಚುಗೆಗೆ ಪಾತ್ರವಾಗಿರುವುದು ಆ ಸಿನಿಮಾ ತಂಡಕ್ಕೆ ಹೆಮ್ಮೆಯ ವಿಷಯವಾಗಿದೆ. ಈಗಾಗಲೇ ಅಬುದಾಬಿ ಮತ್ತು ಆಸ್ಟ್ರೇಲಿಯಾದಲ್ಲಿ ಪ್ರದರ್ಶನ ಕಂಡಿರುವ ಚಾಲಿಪೋಲಿಲು, ಮುಂದಿನ ದಿನಗಳಲ್ಲಿ ನ್ಯೂಜಿಲ್ಯಾಂಡ್, ಸಿಂಗಾಪುರ, ಕೆನಡ, ದುಬೈಯಂಥ ಪ್ರಮುಖ ದೇಶಗಳ ಪ್ರತಿಷ್ಠಿತ ಚಿತ್ರ ಮಂದಿರಗಳಲ್ಲೂ ಪ್ರದರ್ಶನ ನೀಡಲಿದೆ. ಇದೂ ಕೂಡ ತುಳು ಸಿನಿಮಾ ರಂಗದ ಮಟ್ಟಿಗೆ ಒಂದು ಹೊಸ ದಾಖಲೆ ಎಂದು ಹೇಳಬೇಕಾಗುತ್ತದೆ.
ಹಲವು ಪ್ರಥಮಗಳ ಸರದಾರ ಎಂದು ಗುರುತಿಸಿಕೊಂಡಿರುವ ಚಾಲಿಪೋಲಿಲು ಸಿನಿಮಾವು ಅತ್ಯುಚ್ಚ ಗುಣಮಟ್ಟದಿಂದ ನಿರ್ಮಾಣವಾಗಿದ್ದು, ತುಳುನಾಡಿನ ಜನತೆಯ ನಾಡಿಮಿಡಿತಕ್ಕೆ ಒಗ್ಗಿಕೊಂಡು ರೂಪು ಪಡೆದಿರುವುದು, ಎಲ್ಲ ವರ್ಗದ ಮತ್ತು ಎಲ್ಲ ಸಮುದಾಯದವರಿಗೂ ಸಮಾನ ಆದ್ಯತೆ ನೀಡಿ ಅವರ ಒಲವು ಗಳಿಸಲು ಶಕ್ತವಾಗಿರುವುದು, ಕೆಲವು ಅತ್ಯುತ್ತಮ ಸಂದೇಶಗಳೊಂದಿಗೆ ತುಳುನಾಡಿನ ಪ್ರಕೃತಿ ಶ್ರೀಮಂತಿಕೆಯನ್ನು ಸೆರೆ ಹಿಡಿದು ಪ್ರೇಕ್ಷಕರಿಗೆ ತೋರಿಸಿರುವುದು, ಉತ್ತಮ ಸಂಗೀತ ಮತ್ತು ಹಾಡುಗಳು… ಇತ್ಯಾದಿ ಈ ಸಿನಿಮಾದಲ್ಲಿ ಹಲವಾರು ಗುಣಾತ್ಮಕ ಅಂಶಗಳಿವೆ. ಆದ್ದರಿಂದಲೇ ಇದು ಒಂದು ಸೂಪರ್ ಹಿಟ್ ಸಿನಿಮಾ ಆಗಿರುವುದು ಎಂಬುದು ನಿಸ್ಸಂಶಯ.
5 ಸಿನಿಮಾ ಮಂದಿರಗಳಲ್ಲಿ 75 ದಿನ, 3 ಸಿನಿಮಾ ಮಂದಿರದಲ್ಲಿ 100 ದಿನಗಳ ಪ್ರದರ್ಶನ ಕಂಡಿರುವ ಚಾಲಿಪೋಲಿಲು, ಪಿವಿಆರ್ ಮಲ್ಟಿಪ್ಲೆಕ್ಸ್‍ನಲ್ಲಿ 300 ದಿನಗಳ ಪ್ರದರ್ಶನ ಕಾಣುತ್ತಿದೆ. ಪಿವಿಆರ್‍ನ ದೇಶದ ಯಾವುದೇ ಚಿತ್ರಮಂದಿರದಲ್ಲೂ ಪ್ರಾದೇಶಿಕ ಭಾಷೆಯ ಸಿನಿಮಾವೊಂದು 200 ದಿನಗಳ ಪ್ರದರ್ಶನ ಕಂಡಿರುವ ಉದಾಹರಣೆ ಇಲ್ಲ. ಹಾಗಿರುವಾಗ ಚಾಲಿಪೋಲಿಲು 300 ದಿನಗಳ ಪ್ರದರ್ಶನ ಕಾಣುತ್ತಿರುವುದು ಸಣ್ಣ ಸಾಧನೆಯೇನಲ್ಲ. ಇದಕ್ಕಾಗಿ ಇಂಥ ಸಿನಿಮಾವೊಂದನ್ನು ತುಳುವರಿಗೆ ಮತ್ತು ತುಳು ಚಿತ್ರರಂಗಕ್ಕೆ ನೀಡಿರುವ ಜಯಕಿರಣ ಫಿಲಂಸ್‍ನ ಪ್ರಕಾಶ್ ಪಾಂಡೇಶ್ವರ ಮತ್ತು ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಹಾಗೂ ತಂಡಕ್ಕೆ ಅಭಿನಂದನೆ ಸಲ್ಲಲೇಬೇಕಾಗಿದೆ.
ಚಾಲಿಪೋಲಿಲು ತಂಡದಿಂದ ಸಪ್ಟೆಂಬರ್ 14ರಂದು ಪ್ರಕಾಶ್ ಪಾಂಡೇಶ್ವರ ನಿರ್ದೇಶನದಲ್ಲಿ ‘ದಬಕ್ ದಬ ಐಸಾ’ ಹೊಸ ತುಳು ಚಿತ್ರ ಸೆಟ್ಟೇರಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮಂಗಳೂರಿನ ಚಿತ್ರಮಂದಿರದಲ್ಲಿ ವೀಕ್ಷಿಸಿದ ಮೊದಲ ಸಿನಿಮಾ ಎಂದೂ ದಾಖಲಾಗಿರುವ ಚಾಲಿಪೋಲಿಲು, ಖ್ಯಾತ ಜಾನಪದ ವಿದ್ವಾಂಸ ಪ್ರೊ.ಬಿ.ಎ. ವಿವೇಕ್ ರೈ ಅವರಂಥವರಿಂ ದಲೂ ಮೆಚ್ಚುಗೆಗೆ ಪಾತ್ರವಾಗಿರುವುದು ಆ ಸಿನಿಮಾ ತಂಡಕ್ಕೆ ಹೆಮ್ಮೆಯ ವಿಷಯವಾಗಿದೆ.



