ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡು ಎಂಬಲ್ಲಿ ಕಳೆದ 75ವರ್ಷಗಳಿಗೂ ಮಿಕ್ಕಿ ವರ್ಷ ಸಹಸ್ರಾರು ಮಂದಿಗೆ ಪ್ರಾಥಮಿಕ ಶಿಕ್ಷಣ ನೀಡಿ ಇದೀಗ ಕೇವಲ 30 ಮಂದಿ ವಿದ್ಯಾರ್ಥಿಗಳನ್ನು ಹೊಂದಿ ಮುಚ್ಚುವ ಭೀತಿ ಎದುರಿಸುತ್ತಿರುವ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಇಲ್ಲಿನ ಕರೆಂಕಿ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ದತ್ತು ಸ್ವೀಕರಿಸಿ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಸಿದ್ಧತೆ ನಡೆಸಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ ಅಂಚನ್ ಹೇಳಿದ್ದಾರೆ.
11btl-Daddalkaduಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್‍ನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈಗಾಗಲೇ ಸಂಘವು ಆರಂಭಿಸಿರುವ ‘ನಮ್ಮ ಆದ್ಯತೆ ನಮ್ಮ ಸ್ವಚ್ಛತೆ’ ಎಂಬ ಮಾಸಿಕ ಶ್ರಮದಾನ ಯೋಜನೆಯಡಿ ಅಮ್ಟಾಡಿ ಗ್ರಾಮದ ನಲ್ಕೆಮಾರ್, ರಾಯಿ ಮತ್ತು ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಸ್ವಚ್ಛಗೊಳಿಸುವದರ ಜೊತೆಗೆ ರೂ 50ಸಾವಿರ ಮೊತ್ತದ ತಡೆಗೋಡೆ, ಆವರಣಗೋಡೆ ಮತ್ತಿತರ ಕಾಮಗಾರಿಗಳನ್ನು ಶ್ರಮದಾನ ಮೂಲಕ ನಡೆಸಲಾಗಿದೆ.
ಇದೇ 13ರಂದು ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾತಮಿಕ ಶಾಲೆಯನ್ನು ದತ್ತು ಸ್ವೀಕರಿಸಿ, ಮಕ್ಕಳಿಗೆ ಗುಣಮಟ್ಟದ ಆಂಗ್ಲಮಾಧ್ಯಮ ಶಿಕ್ಷಣ ನೀಡಲಾಗುತ್ತದೆ. ಇದಕ್ಕಾಗಿ ನಾಲ್ವರು ಗುತ್ತಿಗೆ ಆಧಾರಿತ ಶಿಕ್ಷಕಿಯರನ್ನು ನೇಮಕಗೊಳಿಸಲಾಗಿದ್ದು, ಎಲ್‍ಕೆಜಿ ಮತ್ತು ಯುಕೆಜಿ ಆರಂಭಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಅವರು ಒಪ್ಪಿಗೆ ಸೂಚಿಸಿದ್ದಾರೆ. ಇಲ್ಲಿನ ದಾನಿಗಳನ್ನು ಗುರುತಿಸಿ ಶಾಲಾಭಿವೃದ್ಧಿ ಸಮಿತಿಯೊಂದನ್ನು ರಚಿಸುವ ಮೂಲಕ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಂಘವು ಪಣತೊಟ್ಟಿದೆ ಎಂದರು. ಈಗಾಗಲೇ ದುರ್ಗಾ ಫ್ರೆಂಡ್ಸ್ ಕ್ಲಬ್ಬಿನ ಸದಸ್ಯರ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಿಂದ ಈ ಶಾಲೆಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದರು. ಇದೇ ರೀತಿ ರಾಜ್ಯದೆಲ್ಲೆಡೆ ವಿವಿಧ ಸಂಘ ಸಂಸ್ಥೆಗಳು ಮುಂದಾದರೆ ಎಲ್ಲಾ ಸರ್ಕಾರಿ ಶಾಲೆ ಉಳಿಸಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪೂವಪ್ಪ ಮೆಂಡನ್, ಸಂಘದ ಪದಾಧಿಕಾರಿಗಳಾದ ರಾಮಚಂದ್ರ, ಯಶೋಧರ, ಪುರುಷೋತ್ತಮ ಅಂಚನ್, ಮುಖ್ಯಶಿಕ್ಷಕ ಮೌರಿಸ್ ಡಿಸೋಜ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

By Suddi9

Leave a Reply

Your email address will not be published. Required fields are marked *