ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್-ಕೊಣಾಜೆ ರಸ್ತೆ ನಡುವಿನ ಕಂದೂರು ಎಂಬಲ್ಲಿ ಗುರುವಾರ ತಡರಾತ್ರಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಕೂಲಿ ಕಾರ್ಮಿ ಕ ನಾಸಿರ್ (30) ಎಂಬವರನ್ನು ತಲವಾರಿನಿಂದ ಕಡಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ನೇತೃತ್ವದ ಬಂಟ್ವಾಳ ನಗರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದ ಮೂವರು ಆರೋಪಿಗಳನ್ನು ಸೋಮವಾರ ರಾತ್ರಿ ಬಿ.ಸಿ.ರೋಡ್ನ ಜೆಎಂಎಫ್ಸಿ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಿದ್ದಾರೆ.
10btl-Nasir

10btl-Aropy
ಆರೋಪಿಗಳನ್ನು ಬಂಟ್ವಾಳ ತಾಲ್ಲೂಕಿನ ಮಂಚಿ ಬಾವ ನಿವಾಸಿ ವಿಠಲ ಅಡ್ಯಂತಾಯ ಎಂಬವರ ಪುತ್ರ ವಿಜಿತ್ ಕುಮಾರ್(22), ವಾಮಂಜೂರು ಸಮೀಪದ ತಿರುವೈಲು ದ್ವಾರ ಬಳಿ ನಿವಾಸಿ ಸದಾನಂದ ಪೂಜಾರಿ ಎಂಬವರ ಪುತ್ರ ಅನೀಶ್ ಯಾನೆ ಧನು(23) ಮತ್ತು ಮಂಗಳೂರಿನ ಬಡಗೋಳಿಪಾಡಿ ವಳಂಮಟ್ಟಿ ಮನೆ ನಿವಾಸಿ ಶೇಖರ ಪೂಜಾರಿ ಎಂಬವರ ಪುತ್ರ ಕಿರಣ್ ಪೂಜಾರಿ (24) ಎಂದು ಗುರುತಿಸಲಾಗಿದ್ದು, ಇವರಿಗೆ 15 ದಿನಗಳತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಳಿದಂತೆ ಇನ್ನೊಬ್ಬ ಮಂಗಳೂರಿನ ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಇದೇ 5ರಂದು ಗುರುವಾರ ರಾತ್ರಿ ಸುಮಾರು ಹತ್ತೂವರೆ ಗಂಟೆಗೆ ಮಂಚಿ ಎಂಬಲ್ಲಿ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಇಲ್ಲಿನ ನಿವಾಸಿ ವಿಠಲ ಅಡ್ಯಂತಾಯ ಎಂಬವರ ಪುತ್ರ ವಿಜಿತ್ ಕುಮಾರ್ ಮತ್ತು ಅಭಿಜಿತ್ ಎಂಬವರು ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮುಸ್ಲಿಂ ಯುವಕರ ತಂಡವೊಂದು ಅಡ್ಡಗಟ್ಟಿ ಇವರಿಗೆ ಹಲ್ಲೆ ನಡೆಸಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದಕ್ಕೆ ಪ್ರತಿಯಾಗಿ ವಿಜಿತ್ ಕುಮಾರ್ ಗುರುವಾರ ರಾತ್ರಿ ಮತ್ತೆ ಮಂಗಳೂರಿನಿಂದ ತನ್ನ ಮೂವರು ಸ್ನೇಹಿತರನ್ನು ಕರೆಸಿಕೊಂಡು ಮೆಲ್ಕಾರ್ನಲ್ಲಿ ಪ್ರತೀಕಾರ ನಡೆಸಲು ಕಾದು ಕುಳಿತಿದ್ದರು ಎನ್ನಲಾಗಿದೆ. ಇದೇ ವೇಳೆ ಇಲ್ಲಿನ ಸಜಿಪಮುನ್ನೂರು ಸಮೀಪದ ಆಲಾಡಿ ಮಸೀದಿ ಬಳಿ ನಿವಾಸಿ ರಿಕ್ಷಾ ಚಾಲಕ ಮುಸ್ತಾಫ ಎಂಬವರು ತನ್ನ ಸಂಬಂಧಿ ಮಹಿಳೆಯೊಬ್ಬರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ತುರ್ತಾಗಿ ಸಾಗಿಸಿದ್ದಾರೆ. ಅಂದು ಅಲ್ಲಿನ ವೈದ್ಯರ ಸಲಹೆಯಂತೆ ಮಹಿಳೆಯನ್ನು ಮತ್ತೆ ಆಂಬುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ವಾಪಾಸು ಅದೇ ಅಂಬುಲೆನ್ಸ್ನಲ್ಲಿ ಬಂಟ್ವಾಳಕ್ಕೆ ಬಂದಿದ್ದಾರೆ. ಆ ಬಳಿಕ ತನ್ನ ರಿಕ್ಷಾದಲ್ಲಿ ಮೆಲ್ಕಾರ್ನಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ಪರಿಚಿತ ವ್ಯಕ್ತಿಯಾಗಿದ್ದ ಕೂಲಿ ಕಾರ್ಮಿಕ ನಾಸೀರ್ನನ್ನು ಕೂರಿಸಿಕೊಂಡು ಮನೆ ಕಡೆಗೆ ಹೋಗಿದ್ದಾರೆ. ಇದೇ ವೇಳೆ ವಿಜಿತ್ ಕುಮಾರ್ ಮತ್ತು ಆತನ ಸ್ನೇಹಿತರು ಎರಡು ಬೈಕಿನಲ್ಲಿ ರಿಕ್ಷಾವನ್ನು ಹಿಂಬಾಲಿಸಿಕೊಂಡು ಬರುವಾಗ ಕಂದೂರು ಎಂಬಲ್ಲಿ ರಿಕ್ಷಾ ತಡೆದು ನಿಲ್ಲಿಸಿ ಪಣೋಲಿಬೈಲು ಸಮೀಪದ ಬೊಳ್ಳಾಯಿ ಎಲ್ಲಿ…? ಎಂದು ಪ್ರಶ್ನಿಸಿದ್ದಾರೆ. ರಿಕ್ಷಾ ಚಾಲಕ ಮುಸ್ತಾಫ ರಸ್ತೆ ತೋರಿಸುತ್ತಿದ್ದಂತೆಯೇ ಆತನ ಕೈಗೆ ತಲವಾರಿನಿಂದ ಕಡಿದ ಆರೋಪಿಗಳು ಬಳಿಕ ರಿಕ್ಷಾದಿಂದ ನಾಸಿರ್ನನ್ನು ಎಳೆದು ಹಾಕಿ ಹತ್ಯೆ ಮಾಡಿ ಪರಾರಿಯಾಗಿರುವುದನ್ನು ಪೊಲೀಸರ ತನಿಖೆ ವೇಳೆ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಪೈಕಿ ವಿಜಿತ್ ಕುಮಾರ್ ಇಲ್ಲಿನ ಕಾಮಾಜೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಹಲ್ಲೆ ಮತ್ತಿತರ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ಸುಮಾರು ಎಂಟಕ್ಕೂ ಮಿಕ್ಕಿ ಪ್ರಕರಣ ದಾಖಲಾಗಿದೆ. ಉಳಿದಂತೆ ಇತರ ಮೂವರು ಈ ವೃತ್ತಿಗೆ ಹೊಸಬರು ಎನ್ನುತ್ತಾರೆ ಪೊಲೀಸರು.
ಇವರಿಂದ ಹತ್ಯೆಗೀಡಾದ ನಾಸಿರ್ ಶ್ರಮಜೀವಿಯಾಗಿದ್ದು, ತುಂಬು ಗರ್ಭಿಣಿ ಪತ್ನಿ ಮತ್ತು ಪುತ್ರನ ವಿದ್ಯಾಭ್ಯಾಸಕ್ಕಾಗಿ ರಾತಿ-ಹಗಲೆನ್ನದೆ ವಿವಿಧ ಕೂಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆರೋಪಿಗಳನ್ನು ಬಂಧಿಸುವಲ್ಲಿ ಎಸ್ಪಿ ಡಾ.ಶರಣಪ್ಪ ಮತ್ತು ಎಎಸ್ಪಿ ರಾಹುಲ್ ಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ನಗರ ಮತ್ತು ಗ್ರಾಮಾಂತರ ಠಾಣಾಧಿಕಾರಿ ನಂದಕುಮಾರ್ ಮತ್ತು ರಕ್ಷಿತ್ ಕುಮಾರ್, ಎಎಸೈ ಸಂಜೀವ, ಡಿಸಿಐಬಿ ಎಎಸೈ ಸಂಜೀವ ಪುರುಷ ಮತ್ತಿತರರು ಕಾರ್ಯಚರಣೆ ನಡೆಸಿದ್ದರು.

By Suddi9

Leave a Reply

Your email address will not be published. Required fields are marked *