ಯಂತ್ರ ನಾರ್ಯಸು ಪೂಜ್ಯಂತೆ ರಮಂತೆ ತತ್ರು ದೇವತ: ಎಂಬ ಮನು ಉಕ್ತಿಯು ನಮ್ಮೆಲ್ಲರ ನಡುವೆ ಜನಜನಿತ. ಎಲ್ಲಿ ನಾರಿಯರು ಪೂಜ್ಯ ಮತ್ತು ಗೌರವಾಧಾರಗಳಿಂದ ನಡೆಸಿಕೊಳ್ಳುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂದು ಈ ವಾಕ್ಯದ ಅಂತರಾರ್ಥ ತಿಳಿದವರು ನಾವು. ಆದರೆ ಇದರ ಅಳವಡಿಕೆಯಲ್ಲಿ ಭಾರತೀಯರಾದ ನಾವು ಹಿಂದೆ ಉಳಿದಿರುವ ಕಾರಣ ಹುಡುಕುವ ಕಾಲವು ಸನ್ನಿಹಿತವಾಗಿದೆ.
ಪ್ರತಿದಿನ ದಿನ ಪತ್ರಿಕೆಯ ಒಂದಲ್ಲ ಒಂದು ಪುಟದಲ್ಲಿ ಮಹಿಳೆಯ ಸಾಮೂಹಿಕ ಅತ್ಯಾಚಾರ, ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕಛೇರಿಯಲ್ಲಿ ಮಹಿಳಾ ನೌಕರಳ ಮೇಲೆ ಲೈಂಗಿಕ ದೌರ್ಜನ್ಯ, ವೃದ್ದೆಯ ಅತ್ಯಾಚಾರ ಮತ್ತು ಕೊಲೆ, ಹೀಗೆ ಒಂದಲ್ಲ ಒಂದು ಮಹಿಳೆಯ ವಿರುದ್ಧದ ದೌರ್ಜನ್ಯ ಪ್ರಕರಣಗಳು ವರದಿಯಾಗುವುದನ್ನು ಗಮನಿಸಿದ್ದೇವೆ. ವಿವಿಧ ಟಿ.ವಿ ಚಾನೆಲ್ಗಳು ಗಂಟೆಗಟ್ಟಲೆ, ದಿನಗಟ್ಟಲೆ, ಸರಣಿ ವರದಿಯನ್ನು ಪ್ರಸಾರ ಮಾಡುವುದನ್ನು ಗಮನಿಸಿದ್ದೇವೆ. ದಿನ ಉರುಳಿದ ಹಾಗೆ ಈ ಘಟನೆಗಳು ಮರೆತು ಹೋಗುತ್ತವೆ. ಮತ್ತೊಂದು ಘಟನೆ ವರದಿಯಾದಾಗ ಮತ್ತೆ ಅದೇ ಪುನರಾವರ್ತನೆ! ಹಾಗಾದರೆ ಈ ಕೃತ್ಯಗಳಿಗೆ ಕೊನೆಯಿಲ್ಲವೇ? ಇದೆ ಎಂಬ ಉತ್ತರ ಹುಡುಕಿ ಹೊರಟರೆ ವಿವಿಧ ದಾರಿಗಳು ತೆರೆದುಕೊಳ್ಳುತ್ತವೆ.
ಭಾರತ ಒಂದು ವೈವಿಧ್ಯಮಯ ರಾಷ್ಟ್ರ, ವಿವಿಧ ಭಾಷೆ, ಧರ್ಮ, ಜನಾಂಗ, ಜಾತಿ, ಸಂಪ್ರದಾಯ, ಆಚರಣೆಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡು ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆದ ಹೆಮ್ಮೆಯ ಭರತ ಖಂಡ ನಮ್ಮದು. ಸ್ತ್ರೀಯರನ್ನು ಗೌರವಾಧಾರಗಳಿಂದ, ಪೂಜ್ಯಭಾವನೆಯಿಂದ ಕಂಡ ಪೂಜ್ಯ ಭೂಮಿ ನಮ್ಮದು. ವೇದಗಳು, ಉಪನಿಷತ್ತು, ಭಗವದ್ಗೀತೆ, ರಾಮಾಯಣ, ಮಹಾಭಾರತದಂತಹ ಮಹತ್ವದ ಬರವಣಿಗೆಗಳಲ್ಲಿ ಸ್ತ್ರೀಯರನ್ನು ಪೂಜ್ಯ ಭಾವನೆಯಿಂದ ನಡೆಸಿಕೊಂಡದ್ದಕ್ಕೆ ಪುರಾವೆಗಳಿವೆ. ಗಾರ್ಗಿ ಮೈತ್ರೇಯಿರಂತಹ ಮಹಿಳಾ ಪಂಡಿತರು, ಸ್ವಯಂವರ, ವೃತಗಳಲ್ಲಿ ಪತಿಯೊಡನೆ ಪತ್ನಿಯ ಸಮಾನ ಭಾಗವಹಿಸುವಿಕೆ ಮುಂತಾದ ವಿಚಾರಗಳು ಪುರಾತನ ಭಾರತದಲ್ಲಿ ಮಹಿಳೆಯರ ಸ್ಥಾನಮಾನಗಳಿಗೆ ಹಿಡಿದ ಕೈಗನ್ನಡಿಯಂತಿವೆ.
ಕಾಲಕ್ರಮೇಣ ಭಾರತದ ಸಂಸ್ಕøತಿಯ ಮೇಲೆ ನಿರಂತರ ದಾಳಿಗಳು, ಆಕ್ರಮಣಗಳು ಹಾಗೂ ಅತಿಕ್ರಮಣಗಳು ನಡೆದವು. ಇದರಿಂದ ನಮ್ಮ ಭವ್ಯ ಭಾರತದ ಹಿನ್ನೆಲೆ, ವೈಭವ, ಸಂಸ್ಕøತಿ, ಆಚಾರ-ವಿಚಾರಗಳು, ಮೌಲ್ಯಗಳು ಈ ದಾಳಿಗಳಿಗೆ ಹಂತ ಹಂತವಾಗಿ ನಲುಗಿದವು. ಕ್ರಿ.ಪೂ 500ರ ನಡುವಿನಲ್ಲಾದ ಮುಸಲ್ಮಾನರ ದಾಳಿ, ಮೊಗಲ್ ಸಾಮ್ರಾಜ್ಯದ ಆಡಳಿತ ವೈಖರಿ, ಭಾರತಕ್ಕೆ ಬ್ರಿಟೀಷರ ಆಗಮನ, ಕ್ರೈಸ್ತ ಧರ್ಮದ ಪಸರಿಸುವಿಕೆಯಿಂದ ಮಹಿಳೆಯರ ಸ್ಥಾನಮಾನಕ್ಕೆ ಧಕ್ಕೆಯುಂಟಾಯಿತು. ಮಹಿಳೆಯರ ಹಕ್ಕು, ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಕಸಿದುಕೊಳ್ಳಲಾಯಿತು. ಅನೇಕ ಮಹಿಳಾ ವಿರೋಧಿ ಅನಿಷ್ಟ ಪದ್ಧತಿಗಳು ಆಚರಣೆ ಬಂದವು. ಅವುಗಳಲ್ಲಿ ಸತಿಪದ್ಧತಿ, ಪರದಾ ಪದ್ಧತಿ, ನಗರ ವಧು ಪದ್ಧತಿ, ದೇವದಾಸಿ ಪದ್ಧತಿ, ಜವಾರ್ ಪದ್ಧತಿ, ಬಾಲ್ಯವಿವಾಹ, ಪುನರ್ವಿವಾಹ ತಡೆ, ಬಹುಪತ್ನಿತ್ವ ಇತ್ಯಾದಿ ಅನಿಷ್ಟ ಆಚರಣೆಗಳು ಪ್ರತ್ಯಕ್ಷವಾದವು.
ಇಂತಹ ಪ್ರಕ್ಷುಬ್ದ ವಾತಾವರಣವನ್ನು ಹೋಗಲಾಡಿಸಿ, ಮಹಿಳೆಯ ಸ್ಥಾನಮಾನವನ್ನು ಮತ್ತೆ ಉದ್ಧೀಪನಗೊಳಿಸಲು ಭಾರತದಲ್ಲಿ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಸುಧಾರಣಾವಾದಿಗಳ ಉಗಮವಾಯಿತು. ರಾಜಾರಾಮ ಮೋಹನರಾಯ್ರವರ ಹೋರಾಟದ ಫಲವಾಗಿ ಸತಿ ಪದ್ದತಿ ನಿಷೇಧ ಕಾಯ್ದೆ-1829, ಈಶ್ವರ ಚಂದ್ರ ವಿದ್ಯಾಸಾಗರ ಪ್ರಯತ್ನದ ಫಲವಾಗಿ ವಿಧವಾ ಪುರ್ನವಿವಾಹ ಕಾಯ್ದೆ-1856, ಮಹಮ್ಮದ್ ಆಲಿ ಜಿನ್ನಾರವರ ಕಾರ್ಯಚಟುವಟಿಕೆಗಳಿಂದ ಬಾಲ್ಯವಿವಾಹ ನಿಷೇಧ ಕಾಯ್ದೆ-1927 ಜಾರಿಗೆ ಬಂದಿತು. ಇಂತಹ ಮಹಿಳಾವಾದಿ ಕ್ರಮಗಳು ಹಾಗೂ ಕಾನೂನಿಂದ ಮಹಿಳೆಯರ ಹಕ್ಕು ಮತ್ತು ಸಮಾನತೆಗೆ ಅವಕಾಶ ದೊರೆಯಿತು. ಜೊತೆಗೆ ಮಹಾತ್ಮ ಗಾಂಧೀಜಿಯವರು ಯುವ ಜನಾಂಗವನ್ನು ಬಾಲಿಕಾ ವಿಧವೆಯರನ್ನು ವಿವಾಹವಾಗುವಂತೆ ಒತ್ತಾಯಿಸಿದ್ದರು.
ಸ್ವಾತಂತ್ರೋತ್ತರ ಭಾರತದಲ್ಲಿ ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸುವ ಹಲವು ಪ್ರಯತ್ನಗಳಾದವು. ನಮ್ಮ ಘನ ಸಂವಿಧಾನವು ಮಹಿಳೆಯರಿಗೆ ಮೂಲಭೂತ ಹಕ್ಕುಗಳು, ಸಮಾನತೆ, ತಾರತಮ್ಯ ವಿರುದ್ಧ ರಕ್ಷಣೆ, ಸಮಾನ ವೇತನ ಮೊದಲಾದ ಅವಕಾಶಗಳನ್ನು ನೀಡಿದೆ. ಸರ್ಕಾರವು ವಿವಿಧ ಕಾನೂನು ಸ್ವರೂಪದ ರಕ್ಷಣೆಗಳನ್ನು ಮಹಿಳೆಗೆ ಕರುಣಿಸಿವೆ. ಅವುಗಳಲ್ಲಿ ಅನೈತಿಕ ಮಾರಾಟವು (ನಿಯಂತ್ರಣ) ಕಾಯ್ದೆ, ವರದಕ್ಷಿಣೆ ವಿರೋಧ ಕಾಯ್ದೆ, ಮಹಿಳೆಯ ಕೌಟುಂಬಿಕ ಹಿಂಸೆ ನಿಯಂತ್ರಣ ಕಾಯ್ದೆ, ಹಿಂದೂ ಉತ್ತರಾಧಿಕಾರತ್ವ ಕಾಯ್ದೆಗೆ ತಿದ್ದುಪಡಿ, ಮಹಿಳಾ ಮೀಸಲಾತಿ ಮಸೂದೆ, ಸಂವಿಧಾನಕ್ಕೆ 73ನೇ ಮತ್ತು 74ನೇತಿದ್ದುಪಡಿಗಳ ಮೂಲಕ ನೀಡಿದೆ.
ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಭಾರತದಲ್ಲಿ ಮಹಿಳಾವಾದಿಗಳ ಬಾಯಲ್ಲಿ ಮಹಿಳಾಪರ ಆಲೋಚನೆಗಳು, ಚಿಂತನೆಗಳು ಮತ್ತು ಸಬಲೀಕರಣದ ಕೂಗುಗಳು ಕೇಳಿಬರುತ್ತಿವೆ. ಭಾರತವು ಪುರುಷ ಪ್ರಧಾನ ಸಮಾಜ ಹಾಗೂ ಪುರುಷರು ಶ್ರೇಷ್ಟ್ರರೆಂಬ ಭಾವನೆ ಬಹಳ ಆಳವಾಗಿ ಬೇರೂರಿದೆ. ಯಾವುದೇ ಕಾನೂನು, ಮಸೂದೆ ಅಥವಾ ಯೋಜನೆಗಳು ಮಾತ್ರ ಮಹಿಳೆಯ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಉನ್ನತಿಗೆ ಕಾರಣವಾಗಲಾರದು. ಇದಕ್ಕೆ ಪುರುಷರು ಬದಲಾಗಬೇಕು. ಮಹಿಳೆಯರ ಬಗೆಗಿನ ಆಲೋಚನೆಯನ್ನು ಬದಲಿಸಿಕೊಂಡು ವರ್ತಿಸಿದರೆ, ಮಹಿಳೆಯರು ನಿರಾಂತಕವಾಗಿ ಬದುಕಲು, ನೆಮ್ಮದಿಯ ಜೀವನ ಸಾಗಿಸಲು ಹಾಗೂ ರಕ್ಷಿಸಿಕೊಳ್ಳಲು ಹೆಣಗಾಡಬೇಕಾದ ಅವಶ್ಯಕತೆಯಿತ್ತೇ? ಸಮಾಜ ಕಂಡ ಘೋರ ನಿರ್ಬಯಾ, ಅರುಣ ಶಾನಭಾಗ ಅಥವಾ ಸೌಜನ್ಯ ಪ್ರಕರಣಗಳು ಎದುರಾಗುತ್ತಿದ್ದವೇ? ಪರಾಮರ್ಷಿಸಿಕೊಳ್ಳುವ ಕ್ಲಪ್ತ ಸಮಯ ಇದಾಗಿದೆ. ಮೈಲಿಗಲ್ಲು ಎಂಬಂತೆ ಕೇಂದ್ರ ಸರ್ಕಾರ ಲೈಂಗಿಕ ಜಾಲತಾಣಗಳ ಮೇಲೆ ದಿಗ್ಭಂಧ ಹೇರಿರುವುದು ಸ್ವಾಗತಾರ್ಹವೇ ಸರಿ.
