ಬಂಟ್ವಾಳ: ತಾಯಿಯನ್ನೇ ಮನೆಗೆ ಪ್ರವೇಶಿಸದಂತೆ ನಿರ್ಭಂದ ಹೇರಿದ್ದ ವ್ಯಕ್ತಿಯೋರ್ವ ನ್ಯಾಯಾಲಯದ ನಿರ್ದೇಶನದಂತೆ ಮನೆಗೆ ಸೇರಿಸಿಕೊಂಡಿದ್ದರು ಅನ್ನ ನೀರು ನೀಡದೆ ಸತಾಯಿಸುತ್ತಿದ್ದು, ಮನೆಗೆ ಯಾರೂ ಪ್ರವೇಶಿಸದಂತೆ ಬೀಗ ಜಡಿದು ತೆರಳಿರುವ ಪ್ರಕರಣವೊಂದು ತಾಲೂಕಿನ ಚಂಡ್ತಿಮಾರ್ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ವಿಶ್ವನಾಥ ಎಂಬಾತ ಈ ಕೃತ್ಯ ಎಸಗಿದ ವ್ಯಕ್ತಿಯಾಗಿದ್ದು ಈತನ ಸಹೋದರಿ ಚಂದ್ರಾವತಿ ಎಂಬವರು ನ್ಯಾಯಾಲಯದ ಆದೇಶ ಸಹಿತ ವಕೀಲರ ಮೂಲಕ ಪೊಲೀಸರಿಗೆ ದೂರನ್ನು ಸಲ್ಲಿಸಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮಕೈಗೊಳ್ಳದೆ ನಿರ್ಲಕ್ಷ ವಹಿಸಿರುವುದಾಗಿ ಚಂದ್ರವತಿ ಅಳಲು ತೋಡಿಕೊಂಡಿದ್ದಾರೆ.

ಪೂರ್ವ ದ್ವೇಷದ ಹಿನ್ನಲೆಯಲ್ಲಿ ತನ್ನ ಹಿರಿಯ ಸಹೋದರಿಯ ಮನೆಗೆ ಹೋದರು ಎನ್ನುವ ಕಾರಣಕ್ಕೆ ವಿಶ್ವನಾಥ ತಾಯಿಗೆ ಮನೆಗೆ ಪ್ರವೇಶಕ್ಕೆ ನಿರ್ಭಂದ ಹೇರಿದ್ದರು. ಕಳೆದ ಹಲವು ಸಮಯಗಳಿಂದ ಮಗಳ ಮನೆಯಲ್ಲಿದ್ದ ತಾಯಿ ತನ್ನ ಮನೆಗೆ ಹೋಗುವುದಾಗಿ ಹಂಬಲ ವ್ಯಕ್ತಪಡಿಸಿದ್ದಾಗ ಕಿರಿಯ ಪುತ್ರಿ ಚಂದ್ರಾವತಿ ತಾಯಿಗೆ ಮನೆ ಪ್ರವೇಶಕ್ಕೆ ಅನುಮತಿ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಅದರಂತೆ ನ್ಯಾಯಾಲಯ ವಿಚಾರಣೆ ನಡೆಸಿ ಮನೆ ಪ್ರವೇಶಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿತ್ತು. ಬುಧವಾರ ವೃದ್ದ ತಾಯಿಯನ್ನು ಚಂದ್ರಾವತಿ ಕರೆದು ಕೊಂಡು ಬಂದಿದ್ದಾಗ ತಾಯಿಯನ್ನು ಮಾತ್ರ ಒಳಪ್ರವೇಶಿಸಲು ಅವಕಾಶ ನೀಡಿ ಸಹೋದರಿ ಚಂದ್ರಾವತಿಗೆ ಪ್ರವೇಶ ನಿರಾಕರಿಸಿ ಮನೆಗೆ ಹಾಗೂ ಗೇಟಿಗೆ ಬೀಗ ಜಡಿದು ತೆರಳಿದ್ದ. ಇದರಿಂದ ಬೆಳಗ್ಗಿನಿಂದ ಅನ್ನ ನೀರು ಇಲ್ಲದೆ ತಾಯಿ ಪರಿತಪಿಸುತ್ತಿದ್ದಾರೆ ಎಂದು ಚಂದ್ರಾವತಿ ದೂರಿದ್ದು ಈ ಬಗ್ಗೆ ವಕೀಲರ ಮೂಲಕ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

