ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾರ್ಯವೈಖರಿ ಬಗ್ಗೆ ಇಲ್ಲಿನ ಆಡಳಿತಾರೂಢ ಸದಸ್ಯರು ಆರೋಪಿಸಿದ್ದ ವಿವಿಧ ದೂರುಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ನೇತೃತ್ವದ ಅಧಿಕಾರಿಗಳ ತಂಡವು ಮಂಗಳವಾರ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿದರು.

ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈತ್ರೋಡಿ ಕುಡಿಯುವ ನೀರಿನ ಪಂಪ್ಹೌಸ್ಗೆ ಇಲ್ಲಿನ ಪಿಡಿಒ ವೆಂಕಟೇಶ್ ಅವರು ಬೀಗ ಜಡಿದು ಸ್ಥಳೀಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಪತ್ರಿಕೆಗೆ ರಾಜಕೀಯ ಪ್ರೇರಿತ ಹೇಳಿಕೆ ನೀಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಪ್ರತಿದಿನ ಕೆಲಸಕ್ಕೆ ಹಾಜರಾಗದೆ, ಸಾರ್ವಜನಿಕರಿಗೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಸಾಮಾನ್ಯ ಸಭೆ ನಿರ್ಣಯಕ್ಕೆ ವಿರುದ್ಧವಾಗಿ ನಡೆದು ಆಡಳಿತರೂಢ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರು ಸಹಿತ ಎಂಟು ಮಂದಿ ಸದಸ್ಯರು ಕಳೆದ ಒಂದು ವಾರದ ಹಿಂದೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಜಿ.ಪಂ.ಸಹಾಯಕ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ವಿಸ್ತರಣಾಧಿಕಾರಿ ಜೀವನ್ ಮತ್ತಿತರ ಆಧಿಕಾರಿಗಳು ಮಂಗಳವಾರ ಪಂಚಾಯಿತಿಗೆ ಭೇಟಿ ನೀಡಿ ಕಡತ ಪರಿಸೀಲಿಸಿದ್ದಾರೆ.
ಪ್ರತಿಕ್ರಿಯೆ:
ಪಂಚಾಯಿತಿ ಕಡತಗಳ ಪ್ರಕಾರ, ತೆರಿಗೆ ವಸೂಲಿ, ಉದ್ಯೋಗ ಖಾತರಿ ಯೋಜನೆ, ಹಣಕಾಸು ನಿರ್ವಹಣೆಯಲ್ಲಿ ಯಾವುದೇ ಲೋಪ ಕಂಡು ಬಂದಿಲ್ಲ. ಪಂಪ್ಹೌಸ್ಗೆ ಬೀಗ ಜಡಿದಿರುವುದು ತಪ್ಪು ಎಂದು ಪಿಡಿಒ ಒಪ್ಪಿಕೊಂಡಿದ್ದಾರೆ. ಕೊಯಿಲ ಸಮೀಪದ ಪಾಂಡವರಗುಡ್ಡೆ ಸ್ಮಶಾನ ಜಮೀನು ಸಮತಟ್ಟುಗೊಳಿಸಿದ ಕಾಮಗಾರಿಗೆ ಸಂಬಂಧಿಸಿದಂತೆ ಅನಗತ್ಯವಾಗಿ ಬಾಕಿ ಇರಿಸಿಕೊಂಡಿರುವ ಮೊತ್ತವನ್ನು 13ನೇ ಹಣಕಾಸು ಯೋಜನೆಯಡಿ ಪಾವತಿಸಲು ಸೂಚಿಸಲಾಗಿದೆ. ಪ್ರತಿದಿನ ಕರ್ತವ್ಯಕ್ಕೆ ಹಾಜರಾಗಿ ಪಂಚಾಯಿತಿ ಸದಸ್ಯರು ಮತ್ತು ನಾಗರಿಕರೊಂದಿಗೆ ಸಮನ್ವಯತೆ ಕಾಪಾಡಿಕೊಂಡು ಬರಲು ಸೂಚಿಸಲಾಗಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಕಡತ ಪರಿಶೀಲನೆ ನಡೆಸಿದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಎಚ್ಚರಿಕೆ:
ಇದೇ ವೇಳೆ ಆಡಳಿತಾರೂಢ ಸದಸ್ಯರೊಂದಿಗೆ ಅಗೌರವದಿಂದ ವರ್ತಿಸಿ ಪಂಚಾಯಿತಿ ಅಭಿವೃದ್ಧಿಗೆ ಅಡ್ಡಿಯಾಗಿರುವ ಪಿಡಿಒ ವರ್ಗಾ ವಣೆಗೊಳಿಸಬೇಕು. ಇಲ್ಲದಿದ್ದಲ್ಲಿ ಯಾವುದೇ ಸಾಮಾನ್ಯ ಸಭೆ ನಡೆಸಲು ಬಿಡುವುದಿಲ್ಲ ಎಂದು ಗ್ರಾ.ಪಂ.ಅಧ್ಯಕ್ಷ ದಯಾನಂದ ಸಪಲ್ಯ, ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಹರೀಶ ಆಚಾರ್ಯ, ರಾಘವ ಅಮೀನ್, ಪದ್ಮನಾಭ ಗೌಡ, ನಿರುಪಮಾ ಎಸ್.ಭಂಡಾರಿ, ಯಶೋಧ ಮತ್ತಿತರರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
