ವಿಟ್ಲ: ಇಲ್ಲಿಯ ಸಂತೆ ಮಾರ್ಕೆಟ್ ನಲ್ಲಿ ಕೊಳೆತ ತರಕಾರಿಗಳು ಸೇರಿದಂತೆ ಮೊದಲಾದ ವಸ್ತುಗಳನ್ನು ತೆರವುಗೊಳಿಸದ ದುರ್ನಾತ ಬೀರುತ್ತಿದ್ದು, ಮಾರುಕಟ್ಟೆ ಸುತ್ತಮುತ್ತ ಹುಲ್ಲು ಗಿಡಗಂಟಿಗಳು ಬೆಳೆದಿದ್ದರಿಂದ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಮಾರಕ ರೋಗದ ಭೀತಿ ಎದುರಿಸುತ್ತಿದ್ದಾರೆ.


ಇಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ನಡೆಯುತ್ತದೆ. ವ್ಯಾಪಾರಿಗಳು ಸಂತೆ ಮುಗಿಸಿಕೊಂಡು ತೆರಳುತ್ತಾರೆ. ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ಬುಧವಾರ ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಇಲ್ಲಿ ಸ್ವಚ್ಛತೆ ಮಾಡದ ಹಿನ್ನೆಲೆಯಲ್ಲಿ ತರಕಾರಿಗಳು, ಒಣ ಮೀನುಗಳ ವಸ್ತುಗಳು ಕೊಳೆತು ನಾರುತ್ತಿದೆ. ನಾವು ಗ್ರಾಮ ಪಂಚಾಯಿತಿಗೆ ತೆರಿಗೆ ಪಾವತಿಸುತ್ತಿದ್ದು, ಇದೀಗ ಇಲ್ಲಿ ದುರ್ನಾತ ಬೀರುತ್ತಿದ್ದು, ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವ್ಯಾಪಾರಿಗಳು ಆರೋಪಿಸುತ್ತಿದ್ದಾರೆ. ಅದಲ್ಲದೇ ಮಾರುಕಟ್ಟೆ ಸುತ್ತಮುತ್ತ ಕಸಕಡ್ಡಿಗಳು ರಾಶಿ ಬಿದ್ದಿದ್ದು, ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಮಾರುಕಟ್ಟೆ ಹುಲ್ಲು, ಗಿಡಗಳು ಬೆಳೆದ ಕಾರಣ ನಡೆದಾಡಲು ಕಷ್ಟವಾಗುತ್ತಿದೆ. ಮಾರುಕಟ್ಟೆ ಸಮೀಪ ಪೊಲೀಸ್ ಸಿಬ್ಬಂದಿ ವಸತಿಗೃಹ, ಕೈಗಾರಿಕ ತರಬೇತಿ ಕೇಂದ್ರ ಮೊದಲಾದವು ಇದ್ದು, ಭಯದ ವಾತಾವರಣದಲ್ಲಿ ದಿನದೂಡುತ್ತಿದ್ದಾರೆ.
ವಿಟ್ಲ ಗ್ರಾಮ ಪಂಚಾಯಿತಿನಲ್ಲಿ ಕಸತ್ಯಾಜ್ಯಗಳನ್ನು ಕೊಂಡೊಯ್ಯಲು ವಾಹನವಿದ್ದು, ಅದು ಪೇಟೆಯಲ್ಲಿ ಮಾತ್ರ ಕಾರ್ಯಚರಿಸುತ್ತಿದ್ದು, ಈ ಕಡೆ ಬರುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
