ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಝುನಾರಿಷಿ ಗ್ರಾಮದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಅಪರಾಹ್ನದವರೆಗೆ ಭಾರತೀಯ ಸೇನಾ ಪಡೆ ಮತ್ತು ಬಂಡುಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಬಂಡುಕೋರ ಹಾಗೂ ಇಬ್ಬರು ಭದ್ರತಾ ಸಿಬ್ಬಂಧಿ ಹತರಾಗಿದ್ದಾರೆ. ಬಂಡುಕೋರರು ಠಿಕಾಣಿ ಹೂಡಿ ಹತ್ಯಾಕಾಂಡ ನಡೆಸುವ ಸಂಚು ರೂಪಿಸುತ್ತಿರುವ ಮಾಹಿತಿಯ ಆಧಾರದಲ್ಲಿ ಸೋಮವಾರ ರಾತ್ರಿಯಿಂದಲೇ ಜಮ್ಮು ಕಾಶ್ಮೀರ ಪೊಲೀಸ್ ಪಡೆ ಮತ್ತು ಭಾರತೀಯ ಸೇನೆ ಕೈಗೊಂಡಿದ್ದ ಜಂಟಿ ಕಾರ್ಯಾಚರಣೆಯಲ್ಲಿ ಕನಿಷ್ಠ ಮೂವರು ಮೃತರಾಗಿದ್ದು, ಮೂವರು ಚಿಂತಾಜನಕ ಸ್ಥಿತಿಯಲ್ಲಿ ಗಾಯಗೊಂಡಿದ್ದಾರೆ.
ಗುಂಡಿನ ಚಕಮಕಿ ಮಂಗಳವಾರ ಅಪರಾಹ್ನದ ವೇಳೆ ಅಂತ್ಯಗೊಂಡಿದೆಯೆಂದು ಗೊತ್ತಾಗಿದೆ. ಮೃತರನ್ನು ಸೇನಾಧಿಕಾರಿ ನಾಯ್ಬ್ ಸುಬೇದ್ಕರ್ ಕಂಕನ್’ವಾಡಿ ಹಾಗೂ ವಿಶೇಷ ಪೊಲೀಸ್ ಪಡೆಯ ಸಬ್’ಇನ್ಸ್’ಪೆಕ್ಟರ್ ರಿಯಾಝ್ ಅಹಮದ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ತಿಳಿದುಬಂದಿರುವಂತೆ ಒಬ್ಬ ಬಂಡುಕೋರನ ಹತ್ಯೆಯಾಗಿದ್ದು, ಮೃತದೇಹವನ್ನಿನ್ನೂ ವಶಕ್ಕೆ ತೆಗೆದುಕೊಳ್ಳಲಾಗಿಲ್ಲ. ಹಂಗಾಗಿ ಆತನ ವಿವರವಿನ್ನೂ ಸ್ಪಷ್ಟವಾಗಿ ಲಭ್ಯವಾಗಿಲ್ಲ. ಬಂಡುಕೋರರು ಅವಿತಿದ್ದ ಪ್ರದೇಶದ ಶೋಧ ಕಾರ್ಯ ನಡೆಸಿದ ಬಳಿಕವಷ್ಟೇ, ಎಷ್ಟೊಂದು ಬಂಡುಕೋರರು ಹತ್ಯೆಯಾಗಿದ್ದಾರೆಂದು ಸ್ಪಷ್ಟವಾಗಿ ಗೊತ್ತಾಗಲಿದೆ. ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

