ಮೂಡುಬಿದಿರೆ: ಇತಿಹಾಸ ಕಾಲದಿಂದಲೂ ನಮ್ಮ ದೇಶ ಜಗತ್ತಿನ ಸರ್ವಶ್ರೇಷ್ಠ ರಾಷ್ಟ್ರವಾಗಿದೆ. ಆದರೆ ಬ್ರಿಟೀಷರ ದಾಸ್ಯದಲ್ಲಿರುವಾಗ ಮತ್ತು ಸ್ವಾತಂತ್ರ್ಯಾನಂತರವೂ ನಮ್ಮಲ್ಲಿರುವ ಕೀಳರಿಮೆ ಭೌಗೋಳಿಕವಾಗಿ ಮಾತ್ರವಲ್ಲ ಭಾವನಾತ್ಮಕವಾಗಿಯೂ ನಮ್ಮನ್ನು ಕಿರಿಯರನ್ನಾಗಿಸಿದೆ. ನಮ್ಮ ಶ್ರೇಷ್ಠತೆಯ ಬಗ್ಗೆ ಹೆಮ್ಮೆ ಪಡದೇ ಯಾವುದೇ ಕೀಳರಿಮೆ ಇಲ್ಲದೇ ಸೀಮಿತರಾಗದೇ ಸಂಘಟಿತರಾಗಿ ಸಮಾಜಕ್ಕೆ ವ್ಯಾಪಿಸಬೇಕು . ರಾಷ್ಟ್ರಪ್ರೇಮಕ್ಕೆ ಇಸ್ರೇಲ್ ನಮಗೆ ಮಾದರಿಯಾಗಬೇಕು ಸಮಾಜ ಮುಖಿ ಚಿಂತನೆಯೊಂದಿಗೆ ಮುನ್ನಡೆಯಬೇಕು ಎಂದು ಆರೆಸ್ಸೆಸ್ನ ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೂಡುಬಿದಿರೆ ಇದರ ವತಿಯಿಂದ ರವಿವಾರ ಇಲ್ಲಿನ ಸ್ವರ್ಣ ಮಂದಿರದಲ್ಲಿ ಜರಗಿದ ಶ್ರೀ ಗುರುಪೂಜಾ ಉತ್ಸವದಲ್ಲಿ ಬೌದ್ಧಿಕ್ ನೀಡಿದರು.

ಇಸ್ರೇಲ್ ತನ್ನ ಸ್ವಾಭಿಮಾನದಿಂದ ವ್ಯಾಪ್ತಿಯಲ್ಲಿ ಹಿಗ್ಗುತ್ತಿದ್ದರೆ ಭಾರತ ಸ್ವಾತಂತ್ರ್ಯಾನಂತರ ತನ್ನ ಭೂಭಾಗವನ್ನು ಕಡಿತಗೊಳಿಸುತ್ತಾ ಸಾಗಿದೆ ಎಂದ ಅವರು ಆರೆಸ್ಸೆಸ್ ವ್ಯಕ್ತಿ ನಿರ್ಮಾಣದ ಮೂಲಕ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಿರುವ ಸಂಘಟನೆಯಾಗಿದೆ ಎಂದರು. ತಾಲೂಕು ಸಂಘಚಾಲಕ ಯಂ.ವಾಸುದೇವ ಭಟ್ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಪಡುಮಾರ್ನಾಡಿನ ಕೇಪುಳ ಫಾರ್ಮ್ ಬಾಲಕೃಷ್ಣ ಟಿ. ಸಾಮಾನಿ ಮಾತನಾಡಿ ದೇಶ ಮತ್ತು ಧರ್ಮಕ್ಕಾಗಿ ದುಡಿಯುತ್ತಿರುವ ಆರೆಸ್ಸೆಸ್ ಉತ್ತರಾಖಂಡದಲ್ಲಿ ಜಲಪ್ರಳಯ, ನೇಪಾಳ ದುರಂತದ ವೇಳೆಗೆ ಸಲ್ಲಿಸಿರುವ ನಿಸ್ವಾರ್ಥ ಸೇವೆ ಗಮನಾರ್ಹವಾಗಿದೆ. ರಾಷ್ಟ್ರನಾಯಕರ ಕನಸನ್ನು ನನಸಾಗಿಸಲು ಸಂಘಕಾರ್ಯದೊಂದಿಗೆ ಕೈ ಜೋಡಿಸಬೇಕು ಎಂದರು. ಮಣಿಪುರದ ರಾಜ್ ಕುಮಾರ್ ವೈಯಕ್ತಿಕ ಗೀತೆ ಹಾಡಿದರು. ಅಭಿಷೇಕ್ ಅಮೃತವಚನ ವಾಚಿಸಿದರು.
ಅಜಿತ್ ಕುಮಾರ್ ಸ್ವಾಗತಿಸಿದರು. ಮಂಜುನಾಥ್ ವಂದಿಸಿದರು. ಕೇಶವ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ಮಾತ್ರಭೂಮಿಯಲ್ಲ ಮಾತೃಭೂಮಿ!
ಭಾರತ ಎನ್ನುವುದು ಕೆಲವರಿಗೆ ಭೂಮಿ ಮಾತ್ರ, ಆದರೆ ಭಾರತೀಯ ಎನಿಸಿದವರಿಗೆ ಅದು ಮಾತೃಭೂಮಿ. ಸ್ವಾತಂತ್ರ್ಯ ಬಂದಾಗಲೇ ಅಖಂಡ ಭಾರತವನ್ನು ತ್ರಿಖಂಡವಾಗಿಸಿದ ನಮ್ಮ ನಾಯಕರು ಕಿರಿಕಿರಿ ಬೇಡವೆಂದು ಕೊಟ್ಟೆವು ಎಂದರು. ಪಡಕೊಂಡವರು ಈಗ ಜಗತ್ತಿಗೇ ಕಿರಿಕಿರಿ ಮಾಡುತ್ತಿದ್ದಾರೆ. ಜಗತ್ತಿನಲ್ಲಿ ಶಾಂತಿಪಡೆಗೆ ಭಾರತೀಯ ಸೈನಿಕರೇ ಅನಿವಾರ್ಯವಾಗಿದ್ದಾರೆ. ಯಾವ ದೃಷ್ಟಿಕೋನದಿಂದಲೂ ಜಾಗತಿಕ ಮಟ್ಟದಲ್ಲಿ ಶ್ರೇಷ್ಠತೆ ಹೊಂದಿರುವ ಭಾರತ ಜಗತ್ತಿಗೇ ಶ್ರೇಷ್ಠ ರಾಷ್ಟ್ರವಾಗಿದೆ. ಹಾಗಾಗಿ ನಮಗಿದು ಕೇವಲ ಭೂಮಿ ಮಾತ್ರವಲ್ಲ ಮಾತೃಭೂಮಿ! ಎಂದರು ಡಾ. ಭಟ್.
