ಮೂಡುಬಿದಿರೆ: ಐಸಿಎಐ ನವದೆಹಲಿ ವತಿಯಿಂದ ಕಳೆದ ಮೇ ತಿಂಗಳಲ್ಲಿ ಜರಗಿದ್ದ ಅಖಿಲ ಭಾರತ ಲೆಕ್ಕ ಪರಿಶೋಧಕರ (ಸಿ.ಎ) ಅಂತಿಮ ಪರೀಕ್ಷೆಯ ಫಲಿತಾಂಶ ಕಳೆದ ಜುಲೈ 16ರಂದು ಪ್ರಕಟವಾಗಿದ್ದು ಈ ಪರೀಕ್ಷೆಯಲ್ಲಿ ದುಬೈ ನಿವಾಸಿ ಮೂಲತಃ ಮೂಡುಬಿದಿರೆಯವರಾದ ಶ್ರೀಕಲಾ ಪ್ರಭು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ 15ನೇ ರ್ಯಾಂಕ್ ಪಡೆಯುವ ಮೂಲಕ ಹೆಮ್ಮೆಯ ಸಾಧನೆ ಮಾಡಿದ್ದಾರೆ. ಗಲ್ಫ್ ವಲಯದಿಂದ ಪರೀಕ್ಷೆ ಬರೆದಿರುವ ವಿದ್ಯಾರ್ಥಿ ಗಳ ಪೈಕಿ ರ್ಯಾಂಕ್ ಪಡೆದಿರುವ ಮೊದಲ ಸಾಧಕಿ ಎನ್ನುವ ಹೆಗ್ಗಳಿಕೆಗೆ 22ರ ಹರೆಯದ ಶ್ರೀಕಲಾ ಪ್ರಭು ಪಾತ್ರರಾಗಿದ್ದಾರೆ.

ಗ್ರೇಡ್ 12 ಸಿಬಿಎಸ್ಸಿ ಪರೀಕ್ಷೆಯಲ್ಲೊ ಗಲ್ಫ್ ಟಾಪರ್ ಆಗಿದ್ದ ಶ್ರೀಕಲಾ ಸಿ.ಎ ಆಗುವ ಹಾದಿಯಲ್ಲಿ ಸಿಪಿಟಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್, ಐಪಿಸಿಸಿ ಯಲ್ಲಿ ಮೊದಲ ಯತ್ನದಲ್ಲೇ ಮಧ್ಯ ಏಷ್ಯಾದಲ್ಲಿ ಟಾಪರ್ ಆಗಿ ಮೂಡಿ ಬಂದಿದ್ದರು. ಇಂಡಿಯನ್ ಹೈಸ್ಕೂಲ್ ದುಬೈನಲ್ಲಿ ಶಿಕ್ಷಣ ಪಡೆದಿದ್ದ ಶ್ರೀಕಲಾ ದುಬೈನ ಯುಎಇ ಕೇಂದ್ರದ ಮೂಲಕ ಸಿ.ಎ ಪರೀಕ್ಷೆ ಬರೆದಿದ್ದರು.
ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಇರುವೈಲು ಪ್ರಭು ಕುಟುಂಬಕ್ಕೆ ಸೇರಿದ ಗಂಟಾಲ್ಕಟ್ಟೆ ನಿವಾಸಿಯಾಗಿದ್ದ ಮಹೇಶ್ ಪ್ರಭು ವಂದನಾ ಪ್ರಭು ದಂಪತಿಯ ಪುತ್ರಿಯಾಗಿರುವ ಶ್ರೀಕಲಾ ಸಿಎ ಆಗುವತ್ತ ಗಮನ ಹರಿಸಲು ವೃತ್ತಿಯಲ್ಲಿ ಸಿಎ ಆಗಿದ್ದ ತಂದೆ ಹಾಗೂ ತಾಯಿಯ ಸಹೋದರ ಮಂಗಳೂರಿನ ಸಿಎ ಕೆ. ದೇವದಾಸ್ ನಾಯಕ್ ಅವರೇ ಸ್ಫೂರ್ತಿ .
ಶ್ರೀಕಲಾ ಅವರ ತಂದೆ ಮಹೇಶ್ ಮೂಡುಬಿದಿರೆಯ ಜೈನ್ ಹೈಸ್ಕೂಲ್ ಹಾಗೂ ಧವಲಾ ಕಾಲೇಜಿನ ಹಳೆ ವಿದ್ಯಾರ್ಥಿ ದ್ಯಾಯಾಗಿದ್ದು ಪಿಯುಸಿಯಲ್ಲಿ ಕಾಮರ್ಸ್ ಉಪನ್ಯಾಸಕರಾಗಿದ್ದ ರಾಮಚಂದ್ರ ಆಚಾರ್ಯರ ಪ್ರೇರಣೆಯಿಂದ ಸಿ.ಎ ತರಬೇತಿ ಪಡೆದು ಮಂಗಳೂರಿನ ಬಿ.ಬಿ.ಶ್ಯಾನುಭಾಗ್, ಮೂಡುಬಿದಿರೆಯ ರಘುಪತಿ ಭಟ್ ಅವರಲ್ಲಿ ತರಬೇತಿ ಪಡೆದು 1989ರಲ್ಲಿ ಮೂಡುಬಿದಿರೆಯಲ್ಲಿ ಲೆಕ್ಕ ಪರಿಶೋಧಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಪ್ರಸ್ತುತ ಅವರು ದುಬೈನಲ್ಲಿ ಲೆಕ್ಕ ಪರಿಶೋಧಕ ಸಂಸ್ಥೆಯೊಂದರ ಸಹಪಾಲುದಾರರಾಗಿದ್ದಾರೆ. ಇದೀಗ 25 ವರ್ಷಗಳ ನಂತರ ಮಹೇಶ್ ಅವರ ಪುತ್ರಿ ಸಿಎ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವ ಮೂಲಕ ಹೊಸದಾಖಲೆ ಬರೆದಿದ್ದಾರೆ.
ಶ್ರೀಕಲಾ –
ಕಠಿಣ ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲ. ಸ್ವಸಾಮಥ್ರ್ಯ, ದೇವರಲ್ಲಿ ನಂಬಿಕೆಯಿಂದ ಈ ಯಶಸ್ಸು ಸಾಧ್ಯವಾಗಿದೆ. ದೇವರಿಗೆ, ನನ್ನನ್ನು ಪ್ರೋತ್ಸಾಹಿಸಿದ ಹೆತ್ತವರು, ಹಿತೈಶಿಗಳಿಗೆ ನಾನು ಆಭಾರಿಯಾಗಿದ್ದೇನೆ, ಪವಿತ್ರವಾಗಿರುವ ಈ ವೃತ್ತಿಯಲ್ಲಿ ಭಾರತದ ಆಥರ್ಿಕತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊಡುಗೆ ನೀಡುವ ಉತ್ಸಾಹದಲ್ಲಿದ್ದೇನೆ ಎಂದರು.

