ಮೂಡುಬಿದರೆ: ಕೆಂಪುಕಲ್ಲಿಗೆ ಖ್ಯಾತಿಯಾಗಿರುವ ಬೆಳುವಾಯಿಯಲ್ಲಿ ಕಳೆದ ಕೆಲವು ವರ್ಷಗಳಿಂದ ದುರಂತಗಳು ಸಂಭವಿಸಿ, ಮೃತ್ಯು ಕೂಪಗಳಾಗಿ ಪರಿಣಮಿಸಿದೆ. 2014 ಜುಲೈ 20ರಂದು ನೀರು ತುಂಬಿದ ಕ್ವಾರೆಗೆ ಬಿದ್ದು ಇಬ್ಬರು ಹೆಣ್ಣುಮಕ್ಕಳು ಬಲಿಯಾಗಿದ್ದರು.
ಕಳೆದ ವರ್ಷ ದುರಂತ ಸಂಭವಿಸಿ, 10 ತಿಂಗಳಿಂದ ಜೀವಂತವಾಗಿದ್ದ ಕ್ವಾರೆಯನ್ನು ಮುಚ್ಚಿರುವ ಬಗ್ಗೆ ತಹಸೀಲ್ದಾರ್ಗೆ ಗ್ರಾಮಕರಣಿಕರು ಮಾಹಿತಿ ನೀಡಿದ್ದಾರೆ. ಆದರೆ ಕಳೆದ 4 ವರ್ಷದಲ್ಲಿ 6 ಜನರನ್ನು ಬೆಳುವಾಯಿಯ ಕರಿಯನಂಗಡಿ ಸಮೀಪ ಅಸುರಕ್ಷಿತ ಕ್ವಾರೆಗಳು ಇನ್ನೂ ಜೀವಂತವಾಗಿದ್ದು, ಜೀವ ಬಲಿಗಾಗಿ ಹಾತೊರೆಯುತ್ತಿದೆ.
ಮೂಡುಬಿದರೆ ವಲಯದಲ್ಲಿ 200ರಷ್ಟು ಕ್ವಾರೆಗಳನ್ನು ಹೊಂದಿರುವ ಮೂಡುಬಿದರೆಯಲ್ಲಿ 88 ಅಪಾಯಕಾರಿ ಕ್ವಾರೆಗಳಿವೆಯೆಂದು ತಹಸೀಲ್ದಾರ್ ಕಚೇರಿ ಗುರುತಿಸಿದೆ. ವುಗಳಲ್ಲಿ 50 ಕ್ವಾರೆಗಳಿಗೆ ಸುರಕ್ಷತ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ವತಿಯಿಂದ 10 ಅಪಾಯಕಾರಿ ಕೋರೆಗಳಿಗೆ ಬೇಲಿ/ ತಡೆಗೊಡೆ ನಿರ್ಮಿಸಿ ಸುರಕ್ಷತೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ 4 ಕ್ವಾರೆಗಳಿಗೆ ಸುರಕ್ಷತೆ ಕ್ರಮ ಪೂರ್ಣಗೊಂಡಿದ್ದು, ಉಳಿದ 6 ಕ್ವಾರೆಗಳಿಗೆ ಬೇಲಿ/ ತಡೆಗೋಡೆ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಮೂಡುಬಿದರೆ ತಹಸೀಲ್ದಾರ್ ಮಹಮ್ಮದ್ ತಿಳಿಸಿದ್ದಾರೆ.
ಮೂಡುಬಿದರೆ ಹೋಬಳಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆ ನಡೆಸಿ ಉಂಟಾದ ಕ್ವಾರಿ ಗುಂಡಿಗಳನ್ನು ಸಂಬಂಧಪಟ್ಟವರು ಮುಚ್ಚುವುದು ಇಲ್ಲವೇ ಶಾಶ್ವತ ತಡೆಬೇಲಿ ನಿರ್ಮಿಸಬೇಕು. ಇದಕ್ಕೆ ತಪ್ಪಿದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಅಲ್ಲದೇ ಈ ಬಾಬ್ತು ಸಂಭವಿಸಿದ ಎಲ್ಲಾ ನಷ್ಟಗಳಿಗೂ ಸಂಬಂಧಪಟ್ಟವರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು. ಯಾವುದೇ ಅನಾಹುತಗಳಿಗೆ ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ ಗುತ್ತಿದಾರರು ಮತ್ತು ಭೂ ಮಾಲಿಕರು ಇಬ್ಬರೂ ಜವಾಬ್ದಾರರಾಗಿರುತ್ತಾರೆ ಕಳೆದ ತಿಂಗಳಲ್ಲಿ ತಹಸೀಲ್ದಾರ್ ಸೂಚನೆ ನೀಡಿದ್ದಾರೆ.

