ಬಂಟ್ವಾಳ: ಕಟ್ಟಡವೊಂದರ ಮೇಲೆ ಗುಡ್ಡದ ಮಣ್ಣು ಕುಸಿದು ಮೂರು ಮಂದಿ ಕಾರ್ಮಿಕರು ಮೃತಪಟ್ಟ ಘಟನೆ ಫರಂಗಿಪೇಟೆಯಲ್ಲಿರುವ ಪುದು ಗ್ರಾಮಪಂಚಾಯತ್ನ ಕಚೇರಿ ಸಮೀಪ ಶನಿವಾರ ನಡೆದಿದೆ. ಘಟನೆಯಲ್ಲಿ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರಾದ ಮಿಲೋನ್, ತೋರಿಕೋಲ್, ಹಾಗೂ ಮೈಮಿನೋಲ್ ಮೃತಪಟ್ಟಿದ್ದಾರೆ.
ಫರಂಗಿಪೇಟೆ ನಿವಾಸಿ ಸೈಯ್ಯದ್ ಬಾವಾ ಎಂಬವರಿಗೆ ಸೇರಿದ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ಪಶ್ಚಿಮ ಬಂಗಾಳ ಮೂಲದ 7 ಮಂದಿ ಕಾರ್ಮಿ ಕರು ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಮಧ್ಯಾಹ್ನದ ವೇಳೆಗೆ ಗುಡ್ಡ ಕುಸಿದು ಬಿದ್ದು ಮಊರು ಮಂದಿ ಮಣ್ಣಡಿ ಬಿದ್ದಿದ್ದರೆ ಒರ್ವನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆತನ ಸೊಂಟದ ಬಾಗಕ್ಕೆ ಮಣ್ಣು ಬಿದ್ದುದರಿಂದ ಆತ ಗಂಭೀರ ಗಾಯಗೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಉಳಿದ ಮೂವರ ಮೇಲೆ ಮಣ್ಣಿನ ದಿಣ್ಣೆಗಳು ಬಿದ್ದು ಮೃತಪಟ್ಟಿದ್ದಾರೆ.
ಕಾರ್ಯಚರಣೆ:
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಮಣ್ಣಡಿ ಸಿಲುಕಿ ಕೊಂಡವರನ್ನುಆಸ್ಪತ್ರೆಗೆ ಸಾಗಿಸುವ ಕಾರ್ಯ ನಡೆಸಿದ್ದಾರೆ. ಸ್ಥಳೀಯರ ನೆರೆವಿನೊಂದಿಗೆ ಜಸಿಬಿ ಯಂತ್ರವನ್ನು ಕರೆಸಿ ಕುಸಿದು ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯವನ್ನು ನಡೆಸಲಾಯಿತು. ಕೆಲವೇ ಹೊತ್ತುಗಳಲ್ಲಿ ಮಂಗಳೂರು ಹಾಗೂ ಬಂಟ್ವಾಳದಿಂದ ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕದಳದ ಸಿಬ್ಬಂದಿಗಳು ಆಗಮಿಸಿ ಕಾರ್ಯಚರಣೆ ಚುರುಕುಗೊಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ, ವಿ.ಎಸ್.ಕುಮಾರ್, ಎಎಸ್ಪಿ ರಾಹುಲ್ ಕುಮಾರ್, ಸಿಐ ಬೆಳ್ಳಿಯಪ್ಪ ಕಾರ್ಯಚರಣೆಗೆ ಮಾರ್ಗದರ್ಶನ ಮಾಡಿದರು. ಠಾಣಾಧಿಕಾರಿಗಳಾದ ರಕ್ಷಿತ್ ಹಾಗೂ ನಂದಕುಮಾರ್, ಪ್ರೋಬೆಷನರಿ ಎಸೈ ಮಂಜುನಾಥ್ ಹಾಗೂ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು.
ಸುಮಾರು ಒಂದೂವರೆ ಗಂಟೆಗಳ ಕಾರ್ಯಚರಣೆ ನಡೆಸಿದ ಬಳಿಕ ಒರ್ವನ ಮೃತದೇಹವನ್ನು ಮಣ್ಣಿನಡಿಯಿಂದ ಮೇಲೆತ್ತಲು ಸಾದ್ಯವಾಯಿತು. ಸಂಜೆ ಆರು ಗಂಟೆಯ ವೇಳೆಗೆ ಇನ್ನಿಬ್ಬರ ಮೃತದೇಹಗಳನ್ನು ಮೇಲೆತ್ತಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿ ಕೊಡಲಾಯಿತು. ಜಿ.ಪಂ.ಮಾಜಿ ಸದಸ್ಯ ಉಮ್ಮರ್
ಫಾರೂಕ್, ಪ್ರಮುಖರಾದ ಆಸೀರ್, ರಮ್ಲಾನ್, ಟಿ.ಕೆ.ಬಶೀರ್, ಖಾದರ್ ಪಾವೂರು, ಇಸ್ಮಾಯಿಲ್ ಪಾವೂರು, ಅಖ್ತರ್ ಹುಸೈನ್ ಮೃತದೇಹವನ್ನು ಮೇಲೆತ್ತುವ ಕಾರ್ಯಚರಣೆಯ ವೇಳೆ ಸಹಕರಿಸಿದರು. ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ, ಪುದು ಗ್ರಾಮಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷ ಶರೀಫ್, ತಹಸೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ ಗ್ರಾಮಕರಣಿಕ ಪ್ರದೀಪ್ ಭೇಟಿ ನೀಡಿ ಕಾರ್ಯಚರಣೆ ಮುಗಿಯುವರೆಗೂ ಸ್ಥಳದಲ್ಲಿ ಹಾಜರಿದ್ದರು.










