ಭರ್ಜರಿ ಫಾರ್ಮನಲ್ಲಿರುವ ವಿರಾಟ್ ಕೊಹ್ಲಿ ಅವರ ಅಬ್ಬರದ ಅರ್ಧ ಶತಕದ ಹೊರತಾಗಿಯೂ ಅಂತಿಮ ಓವರ್ಗಳಲ್ಲಿ ಅಬ್ಬರಿಸಲು ವಿಫಲವಾದ ಭಾರತ ತಂಡ ಟಿ20 ವಿಶ್ವಕಪ್ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ಎದುರು ಸೋಲು ಅನುಭವಿಸಬೇಕಾಯಿತು. 2007ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಭಾರತ ಮತ್ತೆ ಅದನ್ನು ಪುನರಾವರ್ತಿಸಲು ವಿಫಲವಾಯಿತು.ಮಳೆಯಿಂದಾಗಿ ಸುಮಾರು 40 ನಿಮಿಷ ತಡವಾಗಿ ಪಂದ್ಯ ಆರಂಭವಾಯಿತು. ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ನಾಯಕ ಲಸೀತ್ ಮಾಲಿಂಗ್ ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಟಿ20 ಪಂದ್ಯಾವಳಿಯ ಆಡಿದ ಒಟ್ಟು 5 ಪಂದ್ಯಗಳಲ್ಲಿ ಒಂದು ಬಾರಿ ಮಾತ್ರ ಪ್ರಥಮ ಬಾರಿ ಬ್ಯಾಟಿಂಗ್ ಮಾಡಿದ್ದ ಭಾರತ, ಲಂಕಾದ ಶಿಸ್ತು ಬದ್ಧ ದಾಳಿಯ ಎದುರು 4 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತು.
ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ ಆರಂಭಿಸಿದ ಅಜಿಂಕ್ಯೆ ರಹಾನೆ(3) ಎರಡನೇ ಓವರ್ ಎಸೆದ ಎಂಜೆಲೋ ಬೌಲಿಂಗಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಆಗ ತಂಡದ ಮೊತ್ತ ಕೇವಲ 4. ನಂತರ ರೋಹಿತ್ ಶರ್ಮಾ ಅವರ ಜೊತೆಗೂಡಿದ ವಿರಾಟ್ ಕೊಹ್ಲಿ ನಿಧಾನವಾಗಿ ರನ್ ಸೇರಿಸತೊಡಗಿದರು. ಲಂಕಾದ ಶಿಸ್ತುಬದ್ಧ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿ 9 ಓವರ್ಗಳಲ್ಲಿ 60 ರನ್ಗಳನ್ನು ಕಲೆಹಾಕಿತು.29ರನ್ಗಳಿಸಿ ಆಡುತ್ತಿದ್ದ ರೋಹಿತ್ ಶರ್ಮಾ ರಂಗನ್ ಹೇರಾತ್ ಬೌಲಿಂಗ್ಗಲ್ಲಿ ಸೇನಾನಾಯಕ ಅವರಿಗೆ ಕ್ಯಾಚ್ ನೀಡಿ ಹೊರ ನಡೆದರು. ಮೂರನೆ ವಿಕೆಟ್ಗೆ ಯುವರಾಜ್ ಸಿಂಗ್ ಮತ್ತು ಕೊಹ್ಲಿ ಜೊತೆಯಾಟದಲ್ಲಿ 55 ರನ್ ಸೇರಿಸಿ ತಂಡದ ಮೊತ್ತವನ್ನು 119ಕ್ಕೆ ಹೆಚ್ಚಿಸಿದರು. ಶ್ರೇಷ್ಟ ಬ್ಯಾಟಿಂಗ್ ಪ್ರದರ್ಶನ ಮಾಡಿದ ಕೊಹ್ಲಿ ಅಂತಿಮವಾಗಿ 58 ಎಸೆತದಲ್ಲಿ 5 ಬೌಂಡರಿ, 4 ಸಿಕ್ಸರ್ ನೆರವಿನಿಂದ ಆಕರ್ಷಕ 77 ರನ್ ಗಳಿಸಿ ಕೊನೆಯಲ್ಲಿ ರನೌಟ್ ಆದರು.
ಗೆಲ್ಲಲು 130 ರನ್ಗಳ ಸವಾಲು ಪಡೆದ ಶ್ರೀಲಂಕಾ, ಇನ್ನೂ 13 ಎಸೆತಗಳು ಬಾಕಿಯಿರುವಂತೆ ನಾಲ್ಕು ವಿಕೆಟ್ ಕಳೆದುಕೊಂಡು 132 ರನ್ಗಳಿಸಿ ಚೊಚ್ಚಲ ಬಾರಿ ಟಿ20 ವಿಶ್ವಕಪ್ನ್ನು ತನ್ನ ಮುಡಿಗೇರಿಸಿಕೊಂಡಿತು. ನಿನ್ನೆ ಕೊನೆಯ ಟಿ-20 ಪಂದ್ಯವಾಡಿದ ಕುಮಾರ ಸಂಗಕ್ಕರ 35 ಎಸೆತಗಳಲ್ಲಿ ಅಜೇಯ 52 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮಹೇಲಾ ಜಯವರ್ಧನೆ 24 ಎಸೆತಗಳಲ್ಲಿ 24 ರನ್ಗಳಿಸಿದರೆ, ತಿಸಾರಾ ಪೆರರಾ ಕೇವಲ 14 ಎಸೆತಗಳಲ್ಲಿ 21 ರನ್ ಮಾಡಿದರು.

