ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಸೋರ್ಣಾಡು ಗ್ರಾಮೀಣ ಪ್ರದೇಶದಲ್ಲಿ ಕಳೆದ ವರ್ಷ ಆರಂಭಗೊಂಡ ಕೆನರಾ ಬ್ಯಾಂಕಿನ ಶಾಖೆ ಮತ್ತು ಕೆನರಾ ಬ್ಯಾಂಕಿನ ಆಫೀಸರ್ಸ್ ಎಸೋಸಿಯೇಶನ್ ವತಿಯಿಂದ ಇಲ್ಲಿನ ಕುರಿಯಾಳ ಗ್ರಾಮವನ್ನು ಭಾನುವಾರ ದತ್ತು ಸ್ವೀಕರಿಸುವ ಮೂಲಕ ತ್ವರಿತ ಅಭಿವೃದ್ಧಿಗೆ ಚಾಲನೆ ನೀಡಿದೆ. ಈಗಾಗಲೇ ಸರ್ಕಾರದ ನಬಾರ್ಡ್ ಯೋಜನೆಯಡಿ ಕುರಿಯಾಳ-ಪಾದೆಗುರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 1ಕೋಟಿ ಮೊತ್ತದ ಅನುದಾನ ಮಂಜೂರಾಗಿ ಟೆಂಡರ್ ಹಂತದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.


ಬಂಟ್ವಾಳ ತಾಲ್ಲೂಕಿನ ಸೋರ್ಣಾಡು ಕೆನರಾ ಬ್ಯಾಂಕಿನ ಶಾಖೆ ಮತ್ತು ಕೆನರಾ ಬ್ಯಾಂಕಿನ ಆಫೀಸರ್ಸ್ ಎಸೋಸಿಯೇಶನ್ ವತಿಯಿಂದ ಇಲ್ಲಿನ ಕುರಿಯಾಳ ಗ್ರಾಮವನ್ನು ಭಾನುವಾರ ದತ್ತು ಸ್ವೀಕರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆನರಾ ಬ್ಯಾಂಕಿನ ವೃತ್ತೀಯ ಉಪ ಮಹಾಪ್ರಬಂಧಕ ಜಿ.ವಿ.ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆನರಾ ಬ್ಯಾಂಕ್ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳ ಜೊತೆಗೆ ಕೃಷಿಕರಿಗೆ ಕೂಡಾ ಆರ್ಥಿಕ ನೆರವು ನೀಡುವ ಮೂಲಕ ಜನಸ್ನೇಹಿಯಾಗಿ ರೂಪುಗೊಂಡಿದೆ ಎಂದರು.
ಸಹಾಯಕ ಮಹಾಪ್ರಬಂಧಕರಾದ ಎಸ್.ಸಿ.ಶೆಟ್ಟಿ, ವಿನಾಯಕ ಕಾಮತ್, ವಿಭಾಗೀಯ ಪ್ರಬಂಧಕ ವಸಂತ ಶೆಟ್ಟಿ, ಪ್ರಗತಿಪರ ಕೃಷಿಕ ರಘುನಾಥ ಪಯ್ಯಡೆ, ವಕೀಲ ಅಶ್ವನಿ ಕುಮಾರ್ ರೈ, ಸ್ಥಳೀಯ ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ಹರೀಶ ಶೆಟ್ಟಿ, ತಾ.ಪಂ.ಸದಸ್ಯ ಎಪ್ರಿಯಂ ಸಿಕ್ವೇರ, ಎಸೋಸಿಯೇಶನ್ ಮಾಜಿ ಪ್ರಾಂತೀಯ ಕಾರ್ಯದಶರ್ಿ ಎ.ಎಸ್.ಭಟ್ ಮತ್ತಿತರರು ಶುಭ ಹಾರೈಸಿದರು.
ಶಾಖಾಧಿಕಾರಿ ಎಸ್.ರಮೇಶ ನಾಯ್ಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಇಲ್ಲಿನ ತೀರಾ ಹಿಂದುಳಿದ ಕುರಿಯಾಳ ಗ್ರಾಮವನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಸ್ಥಳೀಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತ ಕಂಪ್ಯೂಟರ್ ಮತ್ತಿತರ ಮೂಲಭೂತ ಸೌಲಭ್ಯ ಒದಗಿಸಲಾಗುತ್ತದೆ. ಸಾರ್ವಜನಿಕ ಬಸ್ನಿಲ್ದಾಣ, ದಾರಿದೀಪ ಅಳವಡಿಕೆ ಮತ್ತಿತರ ಜನಪರ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಶ್ರಮದಾನ:
ಇದೇ ವೇಳೆ ಕೆನರಾ ಬ್ಯಾಂಕ್ ಮತ್ತು ಕ್ಯಾನ್ಪಾಲ್ ಸಂಘಟನೆ ವತಿಯಿಂದ ಎರಡು ಜೆಸಿಬಿ ಮತ್ತು ಟಿಪ್ಪರ್ ಮೂಲಕ ಸಿಮೆಂಟ್ ಮಿಶ್ರಿತ ಜೆಲ್ಲಿ ಹುಡಿ, ಕೆಂಪುಕಲ್ಲು ಮತ್ತಿತರ ಸಾಮಾಗ್ರಿ ಜೊತೆಗೆ ಸ್ಥಳೀಯ ನೂರಾರು ಮಂದಿ ಸೇರಿಕೊಂಡು ಸಂಪೂರ್ಣ ಹದಗೆಟ್ಟ ಕುರಿಯಾಳ-ಪಾದೆಗುರಿ ಸಂಪರ್ಕ ರಸ್ತೆಗೆ ಶ್ರಮದಾನ ನಡೆಸಿ ದುರಸ್ತಿಗೊಳಿಸಿದರು.
ಕೆನರಾ ಬ್ಯಾಂಕಿನ ಆಫೀಸರ್ಸ್ ಎಸೋಸಿಯೇಶನ್ ಮಂಗಳೂರು ಘಟಕ ಉಪಾಧ್ಯಕ್ಷ ಎಂ.ಯು.ಕುಲಕರ್ಣಿ , ಉಪ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ್ ನಾಯಕ್, ಪ್ರಾಂತೀಯ ಕಾರ್ಯದರ್ಶಿ ವಾಲ್ಟರ್ ಸಿಕ್ವೇರ, ನರಿಂಗಾನ ಶಾಖಾಧಿಕಾರಿ ನಾರಾಯಣ ನಾಯ್ಕ ಮತ್ತಿತರರು ಪಾಲ್ಗೊಂಡಿದ್ದರು.

