ಬಂಟ್ವಾಳ : ಅಹಿತಕರ ಘಟನೆಗಳಿಗೆ ಕುಮ್ಮಕ್ಕು ನೀಡುವುದರ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡುವವರ ವಿರುದ್ದ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಬದ್ದವಾಗಿದೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ರಕ್ಷಿತ್ ಗೌಡ ಹೇಳಿದ್ದಾರೆ. ಜು.13 ರ ಪ್ರತಿಭಟನೆ ಹಾಗೂ ಮುಂಬರುವ ರಂಝಾನ್ ಹಬ್ಬದ ಅಂಗವಾಗಿ ಶನಿವಾರ ಬಿ.ಸಿ.ರೋಡಿನ ನಗರ ಠಾಣೆಯಲ್ಲಿ ನಡೆದ ಬಂಟ್ವಾಳ ನಗರ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯ ಶಾಂತಿ ಸಭೆಯಲ್ಲಿ ಮಾತನಾಡಿದರು.

3

1

2

ಕೆಲವರು ನಡೆಸುವ ದುಷ್ಕೃತ್ಯಗಳು ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತಿದ್ದು, ಈ ಬಗ್ಗೆ ಮಾಹಿತಿ ಇದ್ದವರು ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು, ಹೆಚ್ಚುವರಿ ಪೊಲೀಸರನ್ನು ತಾಲೂಕಿಗೆ ಕರೆಸಿಕೊಳ್ಳಲಾಗುವುದು ಎಂದರು.
ಬಂಟ್ವಾಳ ನಗರ ಠಾಣಾಧಿಕಾರಿ ನಂದ ಕುಮಾರ್ ಮಾತನಾಡಿ, ಆಯ್ದ ಪ್ರದೇಶಗಳಲ್ಲಿ ಈಗಾಗಲೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ, ನಾಗರೀಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರಲ್ಲದೆ, ಅನಿವಾರ್ಯವಾಗಿದ್ದರೆ ಆರಾಧನಾ ಕೇಂದ್ರಗಳಿಗೆ ಭದ್ರತೆ ಒದಗಿಸಲಾಗುವುದು ಎಂದರು. ಸಂಚಾರಿ ಠಾಣಾಉಪನಿರೀಕ್ಷಕ ಚಂದ್ರಶೇಖರಯ್ಯ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಸಾರ್ವಜನಿಕರು ಪೊಲೀಸರ ಜೊತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರೊಭೆಷನರಿ ಪಿಎಸ್ಐ ಮಂಜುನಾಥ್ ವೇದಿಕೆಯಲ್ಲಿದ್ದರು. ಪುರಸಭಾ ಸದಸ್ಯರಾದ ವಾಸುಪೂಜಾರಿ, ಪ್ರವೀಣ್ ಬಂಟ್ವಾಳ ಹಾಗೂ ವಿವಿಧ ಸಮುದಾಯದ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.

By Suddi9

Leave a Reply

Your email address will not be published. Required fields are marked *