ಬಂಟ್ವಾಳ : ತಾಲೂಕು ವಾಮದಪದವು ಸ.ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆ ಇದರ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಹಾಗೂ ಅಕ್ರಮ ಸಾಗಾಟ ವಿರೋದಿ ದಿನಾಚರಣೆ ಕಾರ್ಯಕ್ರಮ ವಾಮದಪದವು ಸ.ಪ.ಪೂ.ಕಾಲೇಜಿನಲ್ಲಿ ಜರಗಿತು.
ಪುಂಜಾಲಕಟ್ಟೆ ಠಾಣಾಕಾರಿ ಲತೇಶ್ ಕುಮಾರ್ ಡಿ.ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಮಾದಕದ್ರವ್ಯಗಳ ದುಷ್ಪರಿಣಾಮದ ಅರಿವಿಲ್ಲದೆ ಅವುಗಳ ಜಾಲಕ್ಕೆ ಸಿಲುಕಿ ಬಳಿಕ ಅದರ ದಾಸರಾಗಿ ಜೀವನವನ್ನು ಕಳೆದುಕೊಳ್ಳುತ್ತಾರೆ. ವಿದ್ಯಾಥರ್ಿಗಳು ಅಂತಹ ಯಾವುದೇ ಆಶೆ ಆಕಾಂಕ್ಷೆಗಳಿಗೆ ಬಲಿಯಾಗದೆ ವಿದ್ಯಾರ್ಜನೆ ನಡೆಸಬೇಕು. ಮಾದಕ ದ್ರವ್ಯಗಳನ್ನು ಹೊಂದಿರುವುದು ಮತ್ತು ಉಪಯೋಗಿಸುವುದು ಅಪರಾಧವಾದುದರಿಂದ ಗಮನಕ್ಕೆ ಬಂದಲ್ಲಿ ಪೊಲೀಸ್ ಠಾಣೆಗೆ ತಿಳಿಸಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸುವುದರಿಂದ ದುಶ್ಚಟಗಳಿಗೆ ಬಲಿಯಾಗುವುದು ತಪ್ಪುತ್ತದೆ ಎಂದು ಹೇಳಿದರು.
ಸ.ಪ.ಪೂ.ಕಾಲೇಜು ಉಪಪ್ರಾಂಶುಪಾಲ ರಾಘವೇಂದ್ರ ಬಲ್ಲಾಳ್ ಅವರು ಅಧ್ಯಕ್ಷತೆ ವಹಿಸಿದ್ದರು. ಪ.ಪೂ.ಕಾಲೇಜು ಉಪನ್ಯಾಸಕರಾದ ದಯಾನಂದ, ಸರಿತ, ಪುಂಜಾಲಕಟ್ಟೆ ಪೊಲೀಸ್ಠಾಣಾ ಸಿಬಂದಿಗಳಾದ ವೆಂಕಪ್ಪ , ಮಾಲತೇಶ್ ರಾವ್, ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಶಿಕ್ಷಕ ನರಸಿಂಹ ಅವರು ಸ್ವಾಗತಿಸಿದರು. ಶಿಕ್ಷಕಿ ವಿದ್ಯಾ ಕುಮಾರಿ ವಂದಿಸಿದರು. ಶಿಕ್ಷಕ ರೇವಣ್ಣ ಸಿದ್ಧಪ್ಪ ಕಾರ್ಯಕ್ರಮ ನಿರೂಪಿಸಿದರು.

