ಬಂಟ್ವಾಳ:ಕಳೆದ ಐದು ವರ್ಷಗಳ ಹಿಂದೆಯಷ್ಟೇ ತಾಲ್ಲೂಕಿನ ಕೆಲವೆಡೆ ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಚಿಕುನ್ಗುನ್ಯಾ ಜ್ವರಬಾಧೆಯಿಂದ ಬಳಲಿರುವ ಇಲ್ಲಿನ ಜನತೆ ಈ ಬಾರಿ ಶಂಕಿತ ಡೆಂಗೆ ಜ್ವರಬಾಧೆ ಭೀತಿಗೆ ಒಳಗಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿದಿನ ನೂಕು ನುಗ್ಗಲು ದೃಶ್ಯ ಕಂಡು ಬರುತ್ತಿದೆ.

ಕಳೆದ ಎರಡು ವರ್ಷಗಳ ಹಿಂದೆ ಡೆಂಗೆ ಮತ್ತು ಇಲಿಜ್ವರ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಾಲ್ಲೂಕಿಗೆ ಒಟ್ಟು ಒಂಭತ್ತು ಫಾಗಿಂಗ್ ಯಂತ್ರ ದೊರೆತಿದ್ದು, ಇದೀಗ ಅವೆಲ್ಲವೂ ಕೆಟ್ಟು ಮೂಲೆ ಸೇರಿದೆ. ‘ಬ್ಲ್ಯಾಕ್ ಸ್ಟೋನ್’ ಹೆಸರಿನ ಈ ಫಾಂಗಿಂಗ್ ಯಂತ್ರವನ್ನು ದುರಸ್ತಿಗೊಳಿಸಲು ಸೂಕ್ತ ತಜ್ಞರೂ ಇಲ್ಲದೆ ಕೊನೆಗೂ ಮೂರು ಯಂತ್ರಗಳನ್ನು ದುರಸ್ತಿಗೊಳಿಸಿ ಸಿಬ್ಬಂದಿ ಕೊರತೆಯಿಂದ ಕೆಲವೆಡೆ ಮಾತ್ರ ಫಾಗಿಂಗ್ ನಡೆಸಲಾಗಿದೆ. ಈ ಫಾಗಿಂಗ್ ಯಂತ್ರ ದುರಸ್ತಿಗೊಳಿಸಿ ಹೊಗೆ ಹರಡಲು ಪುಂಜಾಲಕಟ್ಟೆ ಆರೋಗ್ಯ ಕೇಂದ್ರ ಸಹಾಯಕ ಆರೋಗ್ಯಾಧಿಕಾರಿ ಅನ್ವರ್ಗೆ ಜವಾಬ್ದಾರಿ ಹೊರಿಸಲಾಗಿದೆ.

ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ಪ್ರತಿದಿನ ನೂರಾರು ಮಂದಿ ಧಾವಿಸಿ ಸಾಲು ಸಾಲಾಗಿ ನಿಲ್ಲುವ ದೃಶ್ಯ 

 

25btl-Hospital

ಬಂಟ್ವಾಳ ಸಾರ್ವಜನಿಕ ಆಸ್ಪತ್ರೆ ಪುನರ್ನಿಮರ್ಾಣ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನಿಧಾನಗತಿಯಲ್ಲಿ ನಡೆಯುತ್ತಿದೆ.25btl-kamgari

ಬಂಟ್ವಾಳ ಸಾರ್ವಜನಿಕ ಆಸ್ಪತ್ರೆ ಒಳಗೆ ರೋಗಿಗಳಿಗೆ ನಿಲ್ಲಲು ಖಾಲಿ ಜಾಗವಿಲ್ಲದೆ ಹೊರಗೆ ಸಾಲು ನಿಂತಿದ್ದಾರೆ.25btl-Salu

ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಸೂಕ್ತ ಸ್ಥಳಾವಕಾಶ ಇಲ್ಲದೆ ದಾರಿಯಲ್ಲಿಯೂ ಹಾಸಿಗೆ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿರುವ ದೃಶ್ಯ. 25btl-Ward
ತಾಲ್ಲೂಕಿನಲ್ಲಿ ಬಂಟ್ವಾಳ, ವಾಮದಪದವು, ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ಮಾತ್ರವಲ್ಲದೆ ಒಟ್ಟು 17 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇದಕ್ಕೆ ಪುಣಚ ಸರ್ಕಾರಿ ಆರೋಗ್ಯ ಕೇಂದ್ರವೊಂದು ಹೊಸದಾಗಿ ಸೇರ್ಪಡೆಗೊಂಡಿದ್ದು, ತಾಲ್ಲೂಕಿನಲ್ಲಿ ಒಟ್ಟು 92 ಆರೋಗ್ಯ ಉಪಕೇಂದ್ರವೂ ಇದೆ. ಈಗಾಗಲೇ ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ಶುಶ್ರೂಷಕಿಯರು, ಪ್ರಯೋಗಾಲಯ ತಜ್ಞರು ಮತ್ತು ಔಷಧಿ ವಿತರಿಸುವ ಫಾರ್ಮಸಿಸ್ಟ್ ಕೊರತೆಯೂ ಕಾಡುತ್ತಿದೆ.

ತಾಲ್ಲೂಕಿನ ರಾಯಿ, ವಾಮದಪದವು, ಪಂಜಿಕಲ್ಲು, ವಿಟ್ಲ, ಪುದು,  ಸಜಿಪನಡು, ನಾವೂರ, ಮಾಣಿ, ಮಂಚಿ ಮತ್ತಿತರ ಕಡೆಗಳಲ್ಲಿ ಡೆಂಗೆ ಜ್ವರಬಾಧೆ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಇಲ್ಲಿನ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರಕ್ತ ತಪಾಸಣೆ ಸಹಿತ ಸೂಕ್ತ ಸೌಲಭ್ಯ ಇಲ್ಲದಿರುವ ಪರಿಣಾಮ ಬಹುತೇಕ ಮಂದಿ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿ ಸಾವಿರಾರು ಮೊತ್ತ ವ್ಯಯಿಸುವಂತಾಗಿದೆ. ಇದರಿಂದಾಗಿ ತಾಲ್ಲೂಕಿನಲ್ಲಿ ಕೇವಲ 12 ಮಂದಿಗೆ ಮಾತ್ರ ಶಂಕಿತ ಡೆಂಗೆ ಜ್ವರ ಕಾಣಿಸಿಕೊಂಡಿದ್ದು, ಅವರು ಗುಣಮುಖರಾಗಿದ್ದಾರೆ ಎನ್ನುತ್ತಾ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಕೈಕಟ್ಟಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಜ್ವರ ಭೀತಿಯಿಂದ ಬಂಟ್ವಾಳ ಪುರಸಭೆ ಎದುರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿದಿನ ಸುಮಾರು 500ಕ್ಕೂ ಮಿಕ್ಕಿ ಮಂದಿ ಆರೋಗ್ಯ ತಪಾಸಣೆಗೆ ಧಾವಿಸುತ್ತಿದ್ದು, ಕಿಷ್ಕಿಂಧೆಯಂತಿರುವ ಆಸ್ಪತ್ರೆಯಲ್ಲಿ ನೂಕು ನುಗ್ಗಲು ದೃಶ್ಯ ಸಾಮಾನ್ಯವಾಗಿದೆ.
ಈ ಹಿಂದೆ 30 ಹಾಸಿಗೆಯಿಂದ 50 ಹಾಸಿಗೆಗೆ ಮೇಲ್ದರ್ಜೆಗೇರಿದ್ದ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯು ಮತ್ತೆ 2007ರಲ್ಲಿ 50 ಹಾಸಿಗೆಯಿಂದ 100 ಹಾಸಿಗೆಗೆ ಮೇಲ್ದರ್ಜೆಗೇರಿಸಲು ಕಳೆದ 2007ರ ಆ.27ರಂದು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗರಾಜ ಶೆಟ್ಟಿ ಉಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಿತ್ತು.

ಕರ್ನಾಟಕ ಆರೋಗ್ಯ ಪದ್ಧತಿ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆಯಡಿ ಕಳೆದ 2012ನೇ ಫೆ.28ರಿಂದ ಬೆಂಗಳೂರಿನ ಕೆ.ಬಿ.ಆರ್. ಇನ್ಫ್ರಾಟಿಕ್ ಲಿಮಿಟೆಡ್ ಸಂಸ್ಥೆಯು ರೂ 6ಕೋಟಿ ವೆಚ್ಚದಲ್ಲಿ ಟೆಂಡರ್ ಮೂಲಕ ಗುತ್ತಿಗೆ ವಹಿಸಿಕೊಂಡು ಕಾಮಗಾರಿ ಕೈಗೆತ್ತಿಕೊಂಡಿತ್ತು. ಕೇವಲ ಎರಡು ವರ್ಷಗಳಲ್ಲಿ ಅಂದರೆ 2014ನೇ ಜೂ.27ರೊಳಗೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಭರವಸೆ ನೀಡಿದ್ದ ಗುತ್ತಿಗೆ ಸಂಸ್ಥೆ ಅನುದಾನ ಕೊರತೆ ನೆಪದಲ್ಲಿ ಕಾಮಗಾರಿ ಪೂರ್ಣಗೊಳಿಸದಿರುವ ಬಗ್ಗೆ ಸಾರ್ವಜನಿಕರಿಂದ ಪ್ರತಿಭಟನೆಯೂ ನಡೆದಿದೆ. ಪ್ರಸಕ್ತ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರತಿಕ್ರಿಯಿಸಿ, ಈಗಾಗಲೇ ಅನುದಾನ ಮಂಜೂರಾಗಿ ಕಾಮಗಾರಿ ತ್ವರಿತಗೊಳಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಈಗಾಗಲೇ ಸಾಕಷ್ಟು ಮಂದಿ ವೈದ್ಯರು, ಶುಶ್ರೂಷಕಿಯರು, ಪ್ರಯೋಗಾಲಯ ತಜ್ಞರು ಮತ್ತಿತರ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಸೂಕ್ತ ಸ್ಥಳಾವಕಾಶವಿಲ್ಲದೆ ಆಸ್ಪತ್ರೆ ಒಳಗಿನ ಕಾಲುದಾರಿಯಲ್ಲಿಯೂ ಹಾಸಿಗೆ ಅಳವಡಿಸಿ ಚಿಕಿತ್ಸೆ ನೀಡುತ್ತಿರುವ ದೃಶ್ಯ ಕಂಡು ಬಂದಿದೆ. ಸ್ವತಃ ಆರೋಗ್ಯ ಸಚಿವ ಯು.ಟಿ.ಖಾದರ್ ತವರು ಜಿಲ್ಲೆಯಲ್ಲೇ ಇಂತಹ ದುಸ್ಥಿತಿ ಎದುರಾದರೆ ನಾವು ಈ ಬಗ್ಗೆ ಯಾರಲ್ಲಿ ಕೇಳಬೇಕು ಎಂಬುದೇ ಅರ್ಥವಾಗುತ್ತಿಲ್ಲ ಎಂಬ ಅಳಲು ರೋಗಿಗಳಿಂದ ವ್ಯಕ್ತವಾಗಿದೆ.

-ಮೋಹನ್ ಕೆ.ಶ್ರೀಯಾನ್ ರಾಯಿ

By Suddi9

Leave a Reply

Your email address will not be published. Required fields are marked *