ಬಂಟ್ವಾಳ; ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಅಮ್ಟೂರು ಗ್ರಾಮದಲ್ಲಿ ಮರವೊಂದು ಉರುಳಿಬಿದ್ದು ಮನೆಗೆ ಹಾನಿಯಾಗಿದೆ. ಇಲ್ಲಿನ ಅಂಗನವಾಡಿ ಕೇಂದ್ರದ ಬಳಿ ನಿವಾಸಿ ಸುಂದರಿ ಎಂಬವರ ಮನೆಗೆ ಶುಕ್ರವಾರ ತಡರಾತ್ರಿ ಪಕ್ಕದ ಆಲದ ಮರ ಬಿದ್ದಿದೆ. ಮನೆಯಲ್ಲಿ ಸುಂದರಿ ಮತ್ತು ಅವರ ಮಕ್ಕಳು ಮೊಮ್ಮಕ್ಕಳು ಇದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯ ತೀವ್ರತೆಗೆ ಮನೆಯ ಮೇಲ್ಛಾವಣಿಗೆ ಸಂಪೂರ್ಣ ಹಾನಿಯಾಗಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಮೂವರು ಮಕ್ಕಳಿಗೆ ಹಂಚಿನ ತುಂಡುಗಳು ತಾಗಿ ಸಣ್ಣಪುಟ್ಟ ಗಾಯಗಳಾಗಿದೆ.
ಸಚಿವ ರೈ ಭೇಟಿ; ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶನಿವಾರ ಬೆಳಿಗ್ಗೆ ಭೇಟಿ ನೀಡಿದರು. ಮನೆಮಂದಿಯೊಂದಿಗೆ ಮಾತನಾಡಿದ ಅವರು, ಸರ್ಕಾರದಿಂದ ಗರಿಷ್ಟ ಪ್ರಮಾಣದಲ್ಲಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಮನೆಗೆ ಸಂಪೂರ್ಣ ಹಾನಿ ಕುರಿತಾಘಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅವರು ಈ ಸಂದರ್ಭ ಉಪಸ್ಥಿತರಿದ್ದ ತಹಶೀಲ್ದಾರ್ ಪುರಂದರ ಹೆಗ್ಡೆಯವರಿಗೆ ತಿಳಿಸಿದರು. ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಸ್ಥಳಕ್ಕೆ ಭೇಟಿ ನೀಡಿ ವೈಯುಕ್ತಿಕವಾಗಿ ರೂ 25 ಸಾವಿರ ವನ್ನು ಮನೆ ಮಂದಿಗೆ ನೀಡುವುದಾಗಿ ಭರವಸೆ ನೀಡಿದರು. ತಾಲೂಕು ಪಂಚಾಯತ್ ಸದಸ್ಯರಾದ ಐಡಾ ಸುರೇಶ್, ದಿನೇಶ್ ಅಮ್ಟೂರು, ಪ್ರಮುಖರಾದ ಅಬ್ಬಾಸ್ ಆಲಿ, ಸಂಜೀವ ಪೂಜಾರಿ, ಪದ್ಮನಾಭ ರೈ, ಪದ್ಮನಾಭ ನರಿಂಗಾನ, ನಿರಂಜನ್ ಜೈನ್, ಶೇಖರಕೊಟ್ಟಾರಿ ಮೊದಲಾದವರು ಭೇಟಿ ನೀಡಿದರು.

By Suddi9

Leave a Reply

Your email address will not be published. Required fields are marked *