ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ಬಂಟ್ವಾಳ ಮಾತ್ರವಲ್ಲದೆ ಪುತ್ತೂರು ಮತ್ತು ಮಂಗಳೂರು ದಕ್ಷಿಣ (ಉಳ್ಳಾಲ) ವಿಧಾನಸಭಾ ಕ್ಷೇತ್ರವೂ ಒಳಗೊಂಡು ಒಟ್ಟು 57 ಗ್ರಾಮ ಪಂಚಾಯಿತಿನ ಫಲಿತಾಂಶ ಪ್ರಕಟಗೊಂಡಿದ್ದು, ಇದೀಗ ಆಡಳಿತ ಚುಕ್ಕಾಣಿ ಹಿಡಿಯಲು ವಿವಿಧ ರಾಜಕೀಯ ಪಕ್ಷಗಳು ಭಾರೀ ಕಸರತ್ತು ನಡೆಸಲು ಆರಂಭಿಸಿದೆ.
ತಾಲ್ಲೂಕಿನಲ್ಲಿ ಬಿಜೆಪಿಗೆ 29 ಮತ್ತು ಕಾಂಗ್ರೆಸ್ಗೆ 23 ಪಂಚಾಯಿತಿನಲ್ಲಿ ಸ್ಪಷ್ಟ ಬಹುಮತ ದೊರೆತಿದ್ದು, ಎರಡು ಗ್ರಾಮ ಪಂಚಾಯಿತಿ ಮಾತ್ರ ಸಮಬಲ ಕಾಯ್ದುಕೊಂಡಿದೆ. ಉಳಿದಂತೆ ಮೂರು ಪಂಚಾಯಿತಿನಲ್ಲಿ ಅತಂತ್ರ ಸ್ಥಿತಿ ಉಂಟಾಗಿದೆ.
ತಾಲ್ಲೂಕಿನ ಸಂಗಬೆಟ್ಟು, ಪಿಲಾತಬೆಟ್ಟು, ಇರ್ವತ್ತೂರು, ಕಾವಳಪಡೂರು, ಉಳಿ, ಸರಪಾಡಿ, ನಾವೂರು, ಪಂಜಿಕಲ್ಲು, ಅಮ್ಟಾಡಿ, ರಾಯಿ, ಅರಳ, ಕರಿಯಂಗಳ, ಅಮ್ಮುಂಜೆ, ಮೇರಮಜಲು, ತುಂಬೆ, ಕಳ್ಳಿಗೆ, ನರಿಕೊಂಬು, ಬಾಳ್ತಿಲ, ಕಡೇಶ್ವಾಲ್ಯ, ಬರಿಮಾರು, ಗೋಳ್ತಮಜಲು, ಕುರ್ನಾಡು, ಮಂಚಿ, ಅನಂತಾಡಿ, ಕೆದಿಲ, ಇಡ್ಕಿದು, ವಿಟ್ಲಮುಡ್ನೂರು, ವಿಟ್ಲಪಡ್ನೂರು, ಕೇಪು ಗ್ರಾಮ ಪಂಚಾಯಿತಿನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದೆ.

ತಾಲ್ಲೂಕಿನ ಚೆನ್ನೈತ್ತೋಡಿ, ಕುಕ್ಕಿಪ್ಪಾಡಿ, ಕಾವಳಮೂಡೂರು, ಬಡಗಬೆಳ್ಳೂರು, ಸಜೀಪಮೂಡ, ಸಜೀಪಪಡು, ಫಜೀರು, ಬಾಳೆಪುಣಿ, ನರಿಂಗಾನ, ಇರಾ, ವೀರಕಂಭ, ಬೋಳಂತೂರು, ಪೆರಾಜೆ, ನೆಟ್ಲಮುಡ್ನೂರು, ಪೆರ್ನೆ , ಕೊಳ್ನಾಡು, ಮಣಿನಾಲ್ಕೂರು, ಕರೋಪಾಡಿ, ಕನ್ಯಾನ, ಪೆರುವಾಯಿ, ಮಾಣಿಲ, ಅಳಿಕೆ, ಪುಣಚ ಗ್ರಾಮ ಪಂಚಾಯಿತಿನಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುವುದು ಸ್ಪಷ್ಟವಾಗಿದೆ.

ಈ ನಡುವೆ ತಾಲ್ಲೂಕಿನ ಸಜೀಪಮುನ್ನೂರು, ಸಾಲೆತ್ತೂರು ಮತ್ತು ಸಜೀಪನಡು ಗ್ರಾಮ ಪಂಚಾಯಿತಿನಲ್ಲಿ ಮಾತ್ರ ಯಾವುದೇ ರಾಜಕೀಯ ಪಕ್ಷಗಳು ಕೂಡಾ ಸ್ಪಷ್ಟ ಬಹುಮತ ಇಲ್ಲದೆ ಅತಂತ್ರವಾಗಿದೆ.
ಈ ಬಾರಿ ಅಸ್ತಿತ್ವಗೊಂಡ ಒಟ್ಟು 12 ಹೊಸ ಗ್ರಾಮ ಪಂಚಾಯಿತಿ ಪೈಕಿ ಸಾಲೆತ್ತೂರು ಮತ್ತು ಮಾಣಿ (ಎರಡು) ಗ್ರಾಮ ಪಂಚಾಯಿತಿನಲ್ಲಿ ಕಾಂಗ್ರೆಸ್-ಬಿಜೆಪಿ ಸಮಬಲ ಕಾಯ್ದುಕೊಂಡಿದೆ.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟ ಸಜೀಪನಡುವಿಲ್ಲಿ ಇದೇ ಪ್ರಥಮ ಬಾರಿಗೆ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಒಟ್ಟು 7 ಸ್ಥಾನ ಗೆದ್ದುಕೊಂಡಿದೆ. ಇಲ್ಲಿ ಕಾಂಗ್ರೆಸ್- 5 ಮತ್ತು ಬಿಜೆಪಿ-3 ಸ್ಥಾನಗಳನ್ನು ಹೊಂದಿದೆ. ಇದರಿಂದಾಗಿ ಕಾಂಗ್ರೆಸ್ ಅಥವಾ ಬಿಜೆಪಿ ಸದಸ್ಯರ ಬೆಂಬಲ ಪಡೆದು ಆಡಳಿತ ನಡೆಸಲು ಭಾರೀ ಕಸರತ್ತು ಆರಂಭಿಸಿರುವುದು ಕಂಡು ಬಂದಿದೆ.
ಕಳೆದ ಅವಧಿಯಲ್ಲಿ ಕೇವಲ ಎರಡು ಸ್ಥಾನ ಹೊಂದಿದ್ದ ಎಸ್ಡಿಪಿಐ ಈ ಬಾರಿ ಐದು ಪಂಚಾಯಿತಿನಲ್ಲಿ ಒಟ್ಟು 15 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಥಾನ ವೃದ್ಧಿಸಿಕೊಂಡಿದೆ. ಈ ನಡುವೆ ಮೂರು ಪಂಚಾಯಿತಿನಲ್ಲಿ ಒಟ್ಟು ಐವರು ಪಕ್ಷೇತರರು ಇದ್ದರೂ ಅಲ್ಲಿ ಸ್ಪಷ್ಟ ಬಹುಮತ ಇರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ‘ಕುದುರೆ ವ್ಯಾಪಾರ’ ಭೀತಿ ಇಲ್ಲ ಎಂಬ ಅಭಿಪ್ರಾಯವೂ ಇಲ್ಲಿನ ನಾಗರಿಕರಿಂದ ವ್ಯಕ್ತವಾಗಿದೆ.

-ಮೋಹನ್ ಕೆ.ಶ್ರೀಯಾನ

By suddi9

Leave a Reply

Your email address will not be published. Required fields are marked *