ಭಕ್ತರಿಗೆ ಸ್ಪೂರ್ತಿ, ನೆಮ್ಮದಿ ಹಾಗೂ ಚೈತನ್ಯ ನೀಡುವ ದೇವಸ್ಥಾನಗಳೂ ಚೈತನ್ಯ ಕಳೆದುಕೊಂಡರೆ ಹೇಗೆ? ಬದುಕಿನಲ್ಲಿ ನೊಂದವರಿಗೆ, ಬೆಂದವರಿಗೆ ಸಾಂತ್ವನದ ಶಾಂತಿಧಾಮವಾಗಿರುವ ಆರಾಧನಾಲಯಗಳೇ ಲವಲವಿಕೆ, ಜೀವಂತಿಕೆಯನ್ನು ಕಳೆದುಕೊಂಡರೆ ಮತ್ತೆ ಭಕ್ತರಿಗೆ ಧನಾತ್ಮಕ ಶಕ್ತಿ ದೊರೆಯುವುದಾದರೂ ಎಲ್ಲಿ? ನಿರಂತರ ಕ್ರಿಯಾಶೀಲ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿಲ್ಲವಾದರೆ ಇಂತಹ ದೇವಸ್ಥಾನಗಳಲ್ಲಿ ಗ್ರಂಥಾಲಯವಾದರೂ ಸ್ಥಾಪನೆಯಾಗಬೇಕು. ಅಲ್ಲಿ ಜನರ ಓದುವಿಕೆಗೆ ಅನುಕೂಲವಾದ ವಾಚನಾಲಯದ ವ್ಯವಸ್ಥೆಯೂ ಇರಬೇಕು. ಪೂಜೆ ಮತ್ತಿತರ ವೈದಿಕ, ಧಾರ್ಮಿಕ ಕಾರ್ಯಕ್ರಮಗಳ ಸಮಯ ಹೊರತುಪಡಿಸಿ ಉಳಿದ ಸಮಯದಲ್ಲಿ ದೇವಸ್ಥಾನಗಳ ಖಾಲಿ ಜಾಗ ಮತ್ತು ಸಮಯವನ್ನು ತುಂಬುವಲ್ಲಿ ಈ ಗ್ರಂಥಾಲಯ ಮತ್ತು ವಾಚನಾಲಯಗಳು ನೆರವಾಗಬೇಕು. ಈ ಮೂಲಕ ದೇವಸ್ಥಾನಗಳಿಗೆ ಜೀವ ತುಂಬುವ ಕಾರ್ಯ ತುರ್ತು ನಡೆಯಬೇಕು.

images
ನಿಜಕ್ಕೂ ಹೇಗಿದೆ ನಮ್ಮ ದೇವಸ್ಥಾನಗಳು? ಶಾಲವಾದ ಒಳಾಂಗಣ, ಹೊರಾಂಗಣ. ಮಧ್ಯದಲ್ಲೊಂದು ಭವ್ಯವಾದ ದೇವಸ್ಥಾನ. ವಿಶಾಲ ಕಟ್ಟಡದೊಳಗಿನ ಚಿಕ್ಕ ಚಿಕ್ಕ ರೂಮುಗಳಲ್ಲಿ ಬಂಧಿಸಲ್ಪಟ್ಟ ನಾನಾ ಹೆಸರಿನ ದೇವರುಗಳು. ಬೆಳಿಗ್ಗೆ, ಮಧ್ಯಾಹ್ನ, ಸಂಜೆಗೊಮ್ಮೆ ಪೂಜೆ. ಉಳಿದ ಹೊತ್ತಿನಲ್ಲಿ ಮುಖಮಂಟಪವೆಂಬ ಪಾಳುಬಿದ್ದ ಖಾಲಿ ಜಾಗದಲ್ಲಿ ಕಾಲು ಚಾಚಿ ಕುಳಿತು ಭಕ್ತರನ್ನು, ದೇವರನ್ನು ಕಾಯುತ್ತಿರುವ ಒಂದಿಬ್ಬರು ಅರ್ಚಕರು. ಆಗೊಮ್ಮೆ ಈಗೊಮ್ಮೆ ಕೆಲವು ಭಕ್ತರು. ಹೊರಾಂಗಣದ ಗೋಡೆಯಲ್ಲೊಂದು ನೇತು ಹಾಕಿದ ದಿನಸಿ ಐಟಂಗಳ ಪಟ್ಟಿಯಂತಿರುವ ಸೇವೆಗಳ ವಿವರದ ಬೋರ್ಡು. ದಿನದ ಬಹುಪಾಲು ವೇಳೆಯಲ್ಲಿ ಇಲ್ಲಿ ಬಾಗಿಲುಗಳ ಮುಚ್ಚುಗಡೆ, ಎಲ್ಲಡೆ ನೀರವ ಮೌನ. ಇದು ಹಲವು ಗ್ರಾಮ ದೇವಸ್ಥಾನಗಳಲ್ಲಿ -ಊರಿನ ಪ್ರಮುಖ ಆರಾದನಾಲಯಗಳಲ್ಲಿ ಕಾಣುತ್ತಿರುವ ಚಿತ್ರಣ….
ದೇವಸ್ಥಾನಗಳೆಂದರೆ ಅದು ಗ್ರಾಮದ ಪ್ರಗತಿಯ ದ್ಯೋತಕ. ಊರಿನ ಜೀವಂತಿಕೆಯ ಸಂಕೇತ. ಗ್ರಾಮದ-ಊರಿನ ಪ್ರಮುಖ ಆಕರ್ಷಣಾ ಕೇಂದ್ರವೆಂದು ಗುರುತಿಸಲ್ಪಡುವ, ಊರು ಹೇಗಿದೆ ಎಂದು ನೋಡಬೇಕಾದರೆ ಆ ಊರಿನ ದೇವಸ್ಥಾನ ಹೇಗಿದೆ ಎಂದು ನೋಡಬೇಕೆಂದು ಹೇಳಲ್ಪಡುವ ಮತ್ತು ದೂರದೂರಿಂದ ನಮ್ಮೂರಿಗೆ ಬರುವ ಜನರು ಅಲ್ಲಿಗೊಮ್ಮೆ ಹೋಗಲೇಬೇಕೆಂದು ಬಯಸುವ ಇಂತಹ ದೇವಸ್ಥಾನಗಳಲ್ಲಿಯೇ ಈ ರೀತಿಯ ಖಾಲಿ ಖಾಲಿ ಚಿತ್ರಣವೆಂದರೆ? ನಾಲ್ಕೈದು ತಿಂಗಳಲ್ಲಿ ಭಕ್ತರಿಂದ ಸಂಗ್ರಹಿಸಲ್ಪಟ್ಟ ಕೋಟಿಕಟ್ಟಲೆ ವೆಚ್ಚದಲ್ಲಿ ಸರ್ವಾಂಗ ಸುಂದರವಾಗಿ ನಿರ್ಮಾಣಗೊಂಡು, ಅಪಾರ ಜನಸ್ತೋಮದ ಜನಜಂಗುಳಿಯ ಮಧ್ಯೆ ಹತ್ತಾರು ದಿನಗಳಲ್ಲಿ ವೈಭವದ ಬ್ರಹ್ಮಕಲಶೋತ್ಸವ ಕಂಡು ನಿಜಾರ್ಥದಲ್ಲಿ ಜನಸಮುದಾಯದ ಭಾಗವಹಿಸುವಿಕೆಯ ಕೇಂದ್ರವಾಗಿ ಗುರುತಿಸಲ್ಪಡಬೇಕಾದ ಇಂತಹ ದೇವಸ್ಥಾನಗಳು ಬ್ರಹ್ಮಕಲಶೋತ್ಸವ ಮುಗಿದ ಒಂದೆರೆಡು ದಿನಗಳಲ್ಲೇ ಮೌನ ಕೇಂದ್ರವಾಗುವುದೆಂದರೆ ನಿಜಕ್ಕೂ ಇದು ದುರಂತವಲ್ಲವೇ? ಒಂದಿಬ್ಬರ ಇಷ್ಠಾನುಸಾರ ದೇವಸ್ಥಾನಗಳು ದಿನದ ಬಹುಪಾಲು ಸಮಯದಲ್ಲಿ ಮುಚ್ಚಿ ನಿರ್ಜೀವ ಸ್ಥಿತಿಯಲ್ಲಿರುವುದೆಂದರೆ ಭಕ್ತರು ರಾತ್ರಿ ಹಗಲೆನ್ನದೇ ಇದಕ್ಕಾಗಿ ಶ್ರಮಿಸಿದ ಶ್ರಮ, ನೀಡಿದ ದೇಣಿಗೆ ಎಲ್ಲವೂ ವ್ಯರ್ಥವಲ್ಲವೇ?
ಗ್ರಾಮದ ಪ್ರತಿ ದೇವಸ್ಥಾನದಲ್ಲೂ ಗ್ರಂಥಾಲಯವೊಂದು ಸ್ಥಾಪನೆಯಾಗಿ ಅಲ್ಲಿನ ವಾತಾವರಣಕ್ಕೆ ಜೀವ ತುಂಬುವ ಕಾರ್ಯ ನಡೆಯಬೇಕಾದದ್ದು ತೀರಾ ಅಗತ್ಯವೆನಿಸುತ್ತದೆ. ಜತೆಯಲ್ಲಿ ಈ ವ್ಯವಸ್ಥೆ ಗ್ರಾಮದ ಜನರ ಜ್ನಾನಶಾಖೆಯನ್ನು ವಿಸ್ತರಿಸಿ, ವ್ಯಕ್ತಿತ್ವವನ್ನು ವಿಕಸನಗೊಳಿಸುವ ಮೂಲಕ ದೇವಸ್ಥಾನಗಳು ನಿಜಾರ್ಥದಲ್ಲಿ ವ್ಯಕ್ತಿವಿಕಾಸದ ಕೇಂದ್ರಗಳಾಗುವುದು ಅನಿವಾರ್ಯವಾಗಿದೆ.
ಭಕ್ತರ ಬೇಡಿಕೆಯಾಗಬೇಕು:
ಊರಿಗೆ ಆರಾಧನಾಲಯಗಳು, ವಿದ್ಯಾಲಯಗಳು ಎಷ್ಟು ಅಗತ್ಯವೋ ಗ್ರಂಥಾಲಯಗಳೂ ಅಷ್ಟೇ ಅಗತ್ಯ. ಶಾಲೆಗೊಂದು, ಪಂಚಾಯತಿಗೊಂದು, ಊರಿಗೊಂದು ಗ್ರಂಥಾಲಯಗಳು ಬೇಕು ಎನ್ನವುದು ಎಷ್ಟರಮಟ್ಟಿಗೆ ಸರಿಯೋ ಊರಜನರು ಒಂದಾಗುವ, ಸಂಘಟಿತರಾಗುವ ದೇವಸ್ಥಾನಗಳಿಗೂ ಗ್ರಂಥಾಲಯ ಬೇಕು ಎನ್ನುವುದು ಅಷ್ಟೇ ಸರಿಯಾದುದು. ಇದು ಭಕ್ತರ ಬೇಡಿಕೆಯಾಗಬೇಕು. ದೇವಸ್ಥಾನಗಳು ಮನುಷ್ಯನ ಮನಸ್ಸಿಗೆ ನೆಮ್ಮದಿ, ವಿದ್ಯಾಲಯಗಳು ಮಕ್ಕಳಿಗೆ ವಿದ್ಯೆ ನೀಡಿದಂತೆ ಗ್ರಂಥಾಲಯಗಳು ಮನುಷ್ಯನ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಪೂರಕವಾದುದು. ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ, ಶೈಕ್ಷಣಿಕ ಸೇರಿದಂತೆ ಸಮಾಜದ ಬಹುಸ್ತರದ ಬೆಳವಣಿಗೆಯೊಂದಿಗೆ ಸಮಗ್ರ ಪ್ರಗತಿಯಲ್ಲಿ ದೇವಸ್ಥಾನಗಳಷ್ಟೇ ಗ್ರಂಥಾಲಯಗಳ ಪಾಲೂ ಮಹತ್ತರವಾದುದು. ಪುಸ್ತಕಗಳು ನಿಜಕ್ಕೂ ಜ್ಢ್ನಾನವಾಹಿನಿ. ಔಷಧ, ಪ್ರಸಾಧಗಳಿಗೂ ಮಿಗಿಲಾದ ಸಂಜೀವಿನಿ. ಮನುಷ್ಯನ ಸುಗಮ ಬದುಕಿಗೆ ಬೇಕಾದ ಎಲ್ಲಾ ರೀತಿಯ ಜ್ನಾನವನ್ನು ನೀಡುವ ಪುಸ್ತಕಗಳು ಮಾನವ ಬದುಕಿನ ಜಂಜಾಟ, ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಾ, ಅನುಭವವನ್ನು ವಿಸ್ತರಿಸುವ ಕಾಯಕದೊಂದಿಗೆ ಒಬ್ಬ ಸ್ನೇಹಿತನಂತೆ, ವೈಚಾರಿಕ ಮನೋಭಾವನೆಯ ಶಿಕ್ಷಕನಂತೆ ಕೆಲಸ ಮಾಡುವ ಶಕ್ತಿಯುಳ್ಳವುಗಳು. ಕೊನೆಗೂ ದೇವಸ್ಥಾನವೊಂದು ನಿಜಾರ್ಥದಲ್ಲಿ ಸಾಧಿಸಬೇಕಾದ, ಮನುಷ್ಯ ಸಹಜವಾಗಿ ಹಂಬಲಿಸುವ ಆರೋಗ್ಯ ಮತ್ತು ನೆಮ್ಮದಿಗಳೆಂಬ ಅಮೂಲ್ಯ ಆಸ್ತಿಗಳೆರಡೂ ದೇವಸ್ಥಾನಗಳಿಂದ ದೊರೆಯುವಷ್ಟೇ ಸುಲಭವಾಗಿ ಗ್ರಂಥಾಲಯಗಳೂ ನೀಡುತ್ತದೆ ಎನ್ನುವುದು ವಾಸ್ತವ ಸತ್ಯ.
ದೇವರ ಮೇಲಿನ ಶ್ರದ್ಧೆ, ನಂಬಿಕೆ, ವಿಶ್ವಾಸಗಳು ದೇವಸ್ಥಾನದಲ್ಲಿ ಮಾನವ ಬಯಸುವ ಸಕಲ ಬೇಡಿಕೆಗಳು ಈಡೇರಿಕೆಗೆ ಪೂರಕವಾದರೆ ಗ್ರಂಥಾಲಯದಲ್ಲಿ ದೊರೆಯುವ ಅನುಭವ, ಶಿಕ್ಷಣ, ಮೌಲ್ಯಯುತ ವಿಚಾರಧಾರೆಗಳು ಮಾನವನನ್ನು ದೈವತ್ವಕ್ಕೆ ಏರಿಸುತ್ತದೆ. ವಿಸ್ತಾರವಾದ, ಆಳವಾದ ಓದು ಮನುಷ್ಯನ ಸಂಕುಚಿತತೆಯನ್ನು ಕಳೆದು ವಿಶ್ವಭಾತೃತ್ವದ ಕಲ್ಪನೆಯನ್ನು ಚಿಗುರೊಡೆಸುತ್ತದೆ, ವಿಶ್ವಮಾನವನನ್ನಾಗಿಸುತ್ತದೆ. ತಾನು ಸುಖಿಯಾಗಿರುವುದರೊಂದಿಗೆ ಸರ್ವರೂ ಸುಖಿಯಾಗಿರಬೇಕೆಂಬ ಭಾವನೆಯನ್ನು ಬೆಳೆಸುತ್ತದೆ. ನಿಜಕ್ಕೂ ಆರಾಧನಾಲಯಗಳು ಮಾಡಬೇಕಾದುದು ಇದನ್ನೇ ತಾನೆ. ಇದಕ್ಕೆ ಪೂರಕವಾಗಿ ಒಂದು ಗ್ರಂಥಾಲಯ ಮಹತ್ವದ ಪಾಲು ನೀಡುತ್ತದೆ ಎಂದರೆ ಅದು ಪ್ರತೀ ದೇವಸ್ಥಾನದಲ್ಲೂ ಇರಬೇಕಾದದ್ದು ಅಗತ್ಯ ಮತ್ತು ಅನಿವಾರ್ಯ ಕೂಡ.
ಗ್ರಂಥಾಲಯಕ್ಕೂ ದೇಣಿಗೆ ನೀಡಿ ಪುಣ್ಯ ಕಟ್ಟಿಕೊಳ್ಳಿ:
ದೇವಸ್ಥಾನ ನಿರ್ಮಾಣಕ್ಕೆ ವಿಶೇಷ ಮುತುವರ್ಜಿ ವಹಿಸುವ ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿಗಳು ಅಲ್ಲೊಂದು ಗ್ರಂಥಾಲಯ ನಿರ್ಮಾಣಕ್ಕೂ ಆಧ್ಯತೆ ನೀಡಿದರೆ ನಿಜಕ್ಕೂ ಅದೂ ಜನಸೇವೆಯ ಮೂಲಕವಾಗುವ ಜನಾರ್ಧನನ ಸೇವೆಯೇ. ಮನುಕುಲ ಉದ್ಧಾರದ ಪುಣ್ಯಕಾರ್ಯವೇ. ದೇವಸ್ಥಾನದ ನಿರ್ಮಾಣ, ಅನ್ನಸಂತರ್ಪಣೆ, ಉತ್ಸವ, ಸೇವಾ ಕಾರ್ಯಗಳಿಗೆ ಡೊನೇಶನ್ ನೀಡುವುದೇ ಪುಣ್ಯ ಸಂಪಾದನೆಯ ಏಕೈಕ ಮಾರ್ಗವೆಂದು ನಂಬಿರುವ ಉಧ್ಯಮಿಗಳು, ದಾನಿಗಳು ಅದರಷ್ಟೇ ಅಮೂಲ್ಯವಾಗಿರುವ ಗ್ರಂಥಾಲಯ ನಿರ್ಮಾಣಕ್ಕೂ ಒಂದಷ್ಟು ಕೊಡುಗೆ ನೀಡಿದರೆ ನಿಜಕ್ಕೂ ಸಾರ್ಥಕತೆ, ಧನ್ಯತೆಯ ಅಪಾರ ತೃಪ್ತಿಯಂತೂ ಪ್ರಾಪ್ತವಾಗುವುದು ಖಂಡಿತ. ಯಾಕೆಂದರೆ ಪುಸ್ತಕಗಳಿಲ್ಲದ ಮನೆ, ದೇವಸ್ಥಾನ, ಶಾಲೆ, ಗ್ರಾಮ, ದೇಶ…..ಎಲ್ಲವೂ ಬರೀ ಬರಡು, ಬಂಜರು. ಪುಸ್ತಕಗಳಿಗೆ, ಮಾನವನ ಬದುಕಿನ ವಿಕಾಸಕ್ಕೆ ನೀಡುವ ಕಾಣಿಕೆಗಿಂತ ದೊಡ್ಡದಾದ, ಶಾಶ್ವತವಾದ ಕಾಣಿಕೆ ಇನ್ನೇನಿದೆ ಹೇಳಿ?
ನಾಲ್ಕು ಗೋಡೆಗಳ ಕಟ್ಟಡವಷ್ಟೇ ಅಲ್ಲ:
ಗ್ರಂಥಾಲಯಗಳೆಂದರೆ ಅದು ನಾಲ್ಕು ಗೋಡೆಗಳ ಕಟ್ಟಡವಷ್ಟೇ ಅಲ್ಲ. ದಾನಿಗಳ, ಪ್ರಕಾಶಕರ, ಸಂಘಟನೆಗಳ ನೆರವಿನಿಂದ ಅಲ್ಲಿ ಮಾನವನ ಬದುಕಿಗೆ ನೆರವಾಗುವ ಎಲ್ಲಾ ರೀತಿಯ ಮೌಲ್ಯಯುತ ಸಾಹಿತ್ಯ ಕೃತಿಗಳು ಇರಬೇಕು. ಮುಖ್ಯವಾಗಿ ದೇವಸ್ಥಾನಗಳ ಗ್ರಂಥಾಲಯಗಳಲ್ಲಿ ನಿಜವಾದ ಧರ್ಮ, ಧಾರ್ಮಿಕ ಸತ್ಕಾರ್ಯಗಳ ಅಗತ್ಯ, ದೇವರು, ನಂಬಿಕೆ, ದೇವಸ್ಥಾನದ ಮಹತ್ವವನ್ನು ಸಾರುವ ಕೃತಿಗಳಿರಬೇಕು. ಜನಸಾಮಾನ್ಯರ ಬದುಕಿನಲ್ಲಿ ದೇವರು ಧರ್ಮದ ಹೆಸರಿನಲ್ಲಿ ಅಂಟಿಕೊಂಡಿರುವ ಮಡಿವಂತಿಕೆ, ಅಂಧಶ್ರದ್ಧೆ, ಮೂಡನಂಬಿಕೆಗಳನ್ನು ಹೋಗಲಾಡಿಸಿ ನಿಜಾರ್ಥದ ಆಧ್ಯಾತ್ಮಿಕ, ವೈಚಾರಿಕ ಹಾಗೂ ವೈಜ್ನಾನಿಕ ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಪೂರಕವಾದ ಶ್ರೇಷ್ಠ ಕೃತಿಗಳು ಹೇರಳವಾಗಿ ಸಿಗುವಂತಿರಬೇಕು. ಕೃತಿಗಳನ್ನು ಇಲ್ಲಿ ಜೋಪಾನವಾಗಿ ಸಂಗ್ರಹಿಸಿ ಇಡುವುದು ಮುಖ್ಯವಲ್ಲ. ಕೃತಿಗಳು ಮುಟ್ಟಲ್ಪಡಬೇಕು, ಓದಲ್ಪಡಬೇಕು, ಬಳಸಲ್ಪಡಬೇಕು. ಕೆಲವು ದೇವಸ್ಥಾನಗಳಲ್ಲಿ ಇಂದು ಹೆಸರಿಗೊಂದು ಗ್ರಂಥಾಲಯವಿದೆ. ಅದರಲ್ಲಿ ಯಾರೋ ದಾನಿಗಳು ನೀಡಿದ ಒಂದಷ್ಟು ಪುಸ್ತಕಗಳು, ಬ್ರಹ್ಮಲಶೋತ್ಸವ ಸಂದರ್ಭ ಹೊರತರಲಾದ ಸ್ಮರಣ ಸಂಚಿಕೆಗಳು ಮರಣ ಸಂಚಿಕೆಗಳಾಗಿ ಕೋಣೆಯ ಮೂಲೆಯೊಂದರಲ್ಲಿ ತ್ಯಾಜ್ಯದಂತೆ ರಾಶಿ ಬಿದ್ದಿದೆ. ಗ್ರಂಥಾಲಯಗಳೆಂದರೆ ಪುಸ್ತಕ ಸಂಗ್ರಹ ಅದರ ಕೆಲಸವಲ್ಲ. ಪುಸ್ತಕವನ್ನು ಜನ ಬಳಸುವಂತೆ ಮಾಡುವುದು, ಜನರಲ್ಲಿ ಓದುವ ಬರೆಯುವ ಅಭಿರುಚಿ ಮೂಡಿಸುವುದು, ಆ ಮೂಲಕ ಜನರು ಸುಸಂಸ್ಕøತರಾಗಿ ಸ್ವಚ್ಚವಾದ ಸ್ವಸ್ಥವಾದ ಸಮಾಜ ನಿರ್ಮಿಸುವುದು ಗ್ರಂಥಾಲಯದ ಮೂಲೋದ್ದೇಶವಾಗಬೇಕು.
ವಾಚನಾಲಯವೂ ಇರಬೇಕು:
ಮುಖ್ಯವಾಗಿ ದೇವಸ್ಥಾನದಲ್ಲಿ ಗ್ರಂಥಾಲಯವೊಂದು ಇದೆ ಎಂಬುದು ಅಲ್ಲಿಗೆ ಬರುವ ಭಕ್ತರಿಗೆ ಗೊತ್ತಾಗುವಂತಿರಬೇಕು. ಉತ್ಸವಗಳಿಗೆ ನೀಡುವ ಪ್ರಚಾರದಷ್ಟೇ ಬಲವಾಗಿ ಗ್ರಂಥಾಲಯಗಳ ಬಗ್ಗೆಯೂ ಜನರಿಗೆ ಪ್ರಚಾರ ನೀಡಬೇಕು. ಅಲ್ಲಿ ಪುಸ್ತಕದ ಪ್ರದರ್ಶನ, ಮಾರಾಟ ಇರುವಂತೆ ಜನರು ಉಚಿತವಾಗಿ ಓದಲು ಅವಕಾಶವಾಗುವ ವಾಚನಾಲಯದ ವ್ಯವಸ್ಥೆಯೂ ಇರಬೇಕು. ಮುಖ್ಯವಾಗಿ ದಿನದ ಬಹುಪಾಲು ಸಮಯದಲ್ಲಿ ಗ್ರಂಥಾಲಯಗಳು, ವಾಚನಾಲಯಗಳು ಬಳಸಲ್ಪಡುವ ಮೂಲಕ ದೇವಸ್ಥಾನಗಳ ಕಟ್ಟಡಗಳು ಜೀವಂತಿಕೆ ಪಡೆಯಬೇಕು. ಬೆಲೆಬಾಳುವ ಕಟ್ಟಡಗಳು ದಿನವಿಡೀ ಮುಚ್ಚಿರುವ ಬದಲು ತೆರೆಯಲ್ಪಟ್ಟು ಜನೋಪಯೋಗಿಯಾಗಬೇಕು.
ದೇವಸ್ಥಾನದ ಜಾತ್ರೆ, ಉತ್ಸವದ ಸಂದರ್ಭದಲ್ಲಿ ಇತರ ವಸ್ತುಗಳ ಸಂತೆ ಇರುವಂತೆ ಪುಸ್ತಕದ ಸಂತೆಯೂ ಮುಖ್ಯವಾಗಿ ಇರಬೇಕು. ಉತ್ಸವ, ಹಬ್ಬಗಳ ಸಂದರ್ಭ ಇತರೆಲ್ಲಾ ಸ್ಪರ್ಧೇ ನಡೆಸುವಂತೆ ಸಾಹಿತ್ಯ ಪ್ರೀತಿಯನ್ನು ಮೂಡಿಸುವ, ಓದುವ, ಬರೆಯುವ ಸ್ಪರ್ಧೆಗೂ ಅವಕಾಶ ನೀಡಬೇಕು. ಜನರು ಬರೆಯವುದಿಲ್ಲ, ಓದುವುದಿಲ್ಲ, ಪುಸ್ತಕ ಖರೀದಿಸುವುದಿಲ್ಲ, ಲೈಬ್ರೆರಿಗೆ ಬರುವುದಿಲ್ಲ ಎಂದು ಸಬೂಬು ಹೇಳುವ ಬದಲಾಗಿ ಬರೆಯಲು, ಓದಲು, ಪುಸ್ತಕ ಖರೀದಿಸಲು ಅನುಕೂಲಕರವಾದ ವಾತಾವರಣವನ್ನು ಮೊದಲು ಕಲ್ಪಿಸಬೇಕು. ಆರೋಗ್ಯವಂತ ಬದುಕಿಗೆ ಪೂರಕವಾದ ನಿಯಮಿತ ಆಹಾರ, ನಿಯಮಿತ ವ್ಯಾಯಾಮ, ನಿಯಮಿತ ನಿದ್ದೆಯಂತೆ ನಿಯಮಿತವಾದ ಓದು ಬರಹವೂ ಅಗತ್ಯವೆಂಬುದು ಜನರಿಗೆ ಮನವರಿಕೆಯಾಗಬೇಕು.
ಮನುಷ್ಯನಿಗೆ ಓದಲು, ಬರೆಯಲು, ಅಧ್ಯಯನ ಮಾಡಲು ದೇವಸ್ಥಾನದ ಪರಿಸರದಷ್ಟು ಪೂರಕವಾದ ಮತ್ತೊಂದು ಪರಿಸರವೆಲ್ಲೂ ಸಿಗದು. ನಗರದ ಅಲ್ಲಲ್ಲಿ ಗ್ರಂಥಾಲಯವಿದ್ದರೂ ಜನದಟ್ಟಣೆ, ವಾಹನ ದಟ್ಟನೆ, ಶಬ್ಧಗಳ ಅಬ್ಬರದ ಭರಾಟೆಯಿಂದ ಆರಾಮವಾಗಿ ಓದುವುದು ಅಸಾಧ್ಯದ ಮಾತು. ಗ್ರಾಮೀಣ ಪ್ರದೇಶದಲ್ಲೂ ಶಾಲೆ, ಇಲ್ಲವೇ ಗ್ರಾಮ ಪಂಚಾಯತುಗಳ ಲೈಬ್ರೇರಿಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ಯಾಕೆಂದರೆ ಇಲ್ಲಿಯೂ ಜನರ ಬೊಬ್ಬೆಯೇನೂ ಕಡಿಮೆ ಇಲ್ಲ. ಸಧ್ಯಕ್ಕೆ ಹೆಚ್ಚು ಕರ್ಕಶವಿಲ್ಲದ ಸ್ಥಳವೆಂದರೆ ಅದು ದೇವಸ್ಥಾನಗಳು ಮಾತ್ರ. ಗ್ರಾಮೀಣ ಪ್ರದೇಶಗಳಲ್ಲಂತೂ ಬಹುತೇಕ ದೇವಸ್ಥಾನಗಳು ಪೃಕೃತಿ ರಮಣೀಯ ಸುಂದರ ಪರಿಸರದಲ್ಲಿರುವುದರಿಂದ ಮತ್ತು ಪೇಟೆಯಿಂದ ಬಲು ದೂರದಲ್ಲಿರುವುದರಿಂದ ಇಲ್ಲಿ ಶಬ್ಧ ಮಾಲಿನ್ಯವೂ ಕಡಿಮೆ. ಪ್ರಶಾಂತವಾದ, ಸುಂದರವಾದ, ಸ್ವಚ್ಚವಾದ ವಾತಾವರಣದ ಮೂಲವೇ ದೇವಸ್ಥಾನವಾಗಿರುವದರಿಂದ ಇಲ್ಲಿಯೇ ಗ್ರಂಥಾಲಯಗಳು ಸ್ಥಾಪನೆಯಾಗಬೇಕಾದ ಅಗತ್ಯತೆ ತೀರಾ ಹೆಚ್ಚು. ಏನಂತೀರಾ?
ಗೋಪಾಲ ಅಂಚನ್
……………………………………………………………..
………………………………………………………………………

By suddi9

Leave a Reply

Your email address will not be published. Required fields are marked *