ಮೂಡುಬಿದಿರೆ : ಜೂನ್ 1ರಂದು ಎಲ್ಲೆಡೆ ಶಾಲೆ ಆರಂಭಗೊಳ್ಳುವ ದಿನ ಅಂದು 1ನೇ ತರಗತಿಗೆ ಪುಟಾಣಿಗಳು ದಾಖಲಾಗುವ ದಿನವೂ ಹೌದು. ಈ ದಿನ ವಿಶೇಷವಾಗಿರಬೇಕೆಂಬ ನಿಟ್ಟಿನಲ್ಲಿ ಮೂಡುಬಿದಿರೆ ಸಮೀಪದ ಕಲ್ಲಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಟಾಣಿ ಮಕ್ಕಳಿಗೆ ಆರತಿ ಬೆಳಗಿ, ಗುಲಾಬಿ ಹೂ ನೀಡಿ ಸ್ವಾಗತಿಸಿ ವಲಯ ಮಟ್ಟದ ಶಾಲಾ ಆರಂಭೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು.


ನಂತರ ನಡೆದ ಸಭಾ ಕಾರ್ಯಕ್ರಮವನ್ನು ಮೂಡುಬಿದಿರೆ ಪುರಸಭಾಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಮಕ್ಕಳಿಗೆ ಪಠ್ಯಪುಸ್ತಕ, ಯುನಿಫಾರಂ ಬಟ್ಟೆಯನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ ಮಕ್ಕಳು ಶಾಲೆಯಲ್ಲಿ ಶಿಕ್ಷಣವನ್ನು ಪಡೆಯುವುದಲ್ಲದೆ ಶಿಸ್ತನ್ನು ಮೈಗೂಡಿಸಿಕೊಳ್ಳುವ ಮೂಲಕ ಉತ್ತಮಪ್ರಜೆಗಳಾಗಿ ಮೂಡಿ ಬರಬೇಕೆಂದು ಶುಭ ಹಾರೈಸಿದರು.
ಎಸ್ಡಿಎಂಸಿ ಅಧ್ಯಕ್ಷ ಆಲಿದ್ ಅಧ್ಯಕ್ಷತೆಯನ್ನು ವಹಿಸಿದ್ದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ಶಿಕ್ಷಣ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕಲ್ಲಬೆಟ್ಟು ಜನರ ಬಹುದಿನಗಳ ಬೇಡಿಕೆಯಾದ ಪ್ರೌಢಶಾಲೆಗೆ ಶಿಕ್ಷಣ ಇಲಾಖೆಯಿಂದ ಪ್ರಯತ್ನಗಳು ನಡೆಯುತ್ತಿವೆ. ಸರ್ಕಾರಿ ಶಾಲೆಯಲ್ಲಿ ಪರಿಣಿತ ಶಿಕ್ಷಕರಿದ್ದಾರೆ. ಇತರ ಶಾಲೆಗಳಿಗಿಂತ ಗುಣಮಟ್ಟದ ಶಿಕ್ಷಣ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸಿಗುತ್ತಿವೆ. ಶಿಕ್ಷಣ ಪ್ರತಿಷ್ಠೆಯ, ಆಡಂಬರದ ಸೊತ್ತಾಗಬಾರದು ಎಂದರು.
ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನಕ್ಕೆ ಮೂಡುಬಿದಿರೆ ವಲಯದಿಂದ ಆಯ್ಕೆಯಾಗಿರುವ ಶಾಲೆಯ ವಿದ್ಯಾರ್ಥಿನಿ ರಕ್ಷಿತಾಳನ್ನು ಅಭಿನಂದಿಸಲಾಯಿತು.
ಕಲ್ಲಬೆಟ್ಟು ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಮಂಗಳೂರು ಎಪಿಎಂಸಿ ಸದಸ್ಯ ಜೋಸ್ಸಿ ಮೆನೇಜಸ್, ಮೂಡುಬಿದಿರೆ ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಜ್ಯೋತಿನಗರ ಕ್ಲಸ್ಟರ್ ಶಿಕ್ಷಣ ಸಂಯೋಜಕ ದೇವದಾಸ್, ಸದಸ್ಯ ದಿನೇಶ್ ಆಚಾರ್ಯ, ಮುಖ್ಯ ಶಿಕ್ಷಕ ವಿನಯ ಕುಮಾರ್ ಉಪಸ್ಥಿತರಿದ್ದರು.
ಶಿಕ್ಷಕಿ ಪ್ರತಿಭಾ ಸ್ವಾಗತಿಸಿದರು. ಅನಿತಾ ಎಂ.ಎ ಕಾರ್ಯಕ್ರಮ ನಿರೂಪಿಸಿದರು. ಅನಿತಾ.ಎಲ್ ಸಿಕ್ವೇರಾ ವಂದಿಸಿದರು.
ಇದಕ್ಕೂ ಮೊದಲು ಮೊದಲ ದಿನ ಶಾಲೆಗೆ ದಾಖಲಾತಿಯನ್ನು ಪಡೆದಿರುವ 13 ವಿದ್ಯಾರ್ಥಿಗಳನ್ನು ಮುಖ್ಯ ಧ್ವಾರದಿಂದ ಶಾಲೆವರೆಗೆ ಬ್ಯಾಂಡ್ ಮೂಲಕ ಕರೆ ತರಲಾಯಿತು.
