ಬಂಟ್ವಾಳ: ನೇತ್ರಾವತಿ ನದಿಯಲ್ಲಿ ರಭಸದಿಂದ ಉಕ್ಕಿ ಬಂದು ಕಾಮಾಗಾರಿ ಸಲಕರಣೆಗಳು ಕೊಚ್ಚಿ ಹೋದ ತುಂಬೆಯ ನೂತನ ವೆಂಟೆಡ್ ಡ್ಯಾಂನಲ್ಲಿ ಇನ್ನೂ ನಿರ್ಮಾಣ ಕಾಮಾಗಾರಿ ಪುನಾರಂಭಗೊಂಡಿಲ್ಲ. ಸದ್ಯಕ್ಕಂತೂ ಕಾಮಾಗಾರಿ ಆರಂಭಗೊಳ್ಳುವ ಲಕ್ಷಣವೂ ಕಾಣುತ್ತಿಲ್ಲ. ಯಾಕೆಂದರೆ ಕೆಲಸ ನಿರತರಾಗಿದ್ದ ಕಾರ್ಮಿಕರೆಲ್ಲಾ ಊರಿನತ್ತ ಮುಖ ಮಾಡಿದ್ದಾರೆ.
DSC_6376
ಕಳೆದ ಕೆಲ ದಿನಗಳ ಹಿಂದೆ ತಾಲೂಕು ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಗೆ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಮಾತ್ರವಲ್ಲದೆ ಶಂಭೂರಿನ ಎಎಂಆರ್ ಡ್ಯಾಂನಿಂದ ಅಧಿಕ ಪ್ರಮಾಣದ ನೀರನ್ನು ಹೊರ ಬಿಟ್ಟ ಕಾರಣಕ್ಕಾಗಿ ತುಂಬೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ನೂತನ ಡ್ಯಾಂನ ಕಬ್ಬಿಣದ ಸಲಕರಣೆಗಳು, ಜನರೇಟರ್‍ಗಳು ನೀರಲ್ಲಿ ಕೊಚ್ಚಿ ಹೋಗಿದ್ದವು. ಕಾಮಾಗಾರಿಗೆ ಬಳಸಲು ತಂದಿದ್ದ ಕಬ್ಬಿಣದ ಸರಳುಗಳು ಹಾಗೂ ಆದಾರ ಸ್ತಂಭಗಳು ರಸ್ತೆ ನಿರ್ಮಾಣಕ್ಕೆ ಹಾಕಿದ್ದ ಮಣ್ಣಡಿ ಹೂತು ಹೋಗಿದ್ದವು. ಇವುಗಳನ್ನು ಹೊರ ತೆಗೆದು ಕಾಮಗಾರಿ ಆರಂಭಿಸಲು ಕನಿಷ್ಠ 15 ದಿನಗಳ ಕಾಲಾವಕಾಶ ಬೇಕಾಗುವುದಾಗಿ ಇಲ್ಲಿನ ಸೈಟ್ ಮ್ಯಾನೇಜರ್ ತಿಳಿಸಿದ್ದರು. ನೀರಲ್ಲಿ ಕೊಚ್ಚಿ ಹೋದ ಸಲಕರಣೆಗಳನ್ನು ಕ್ರೇನ್ ಬಳಸಿ ಸಂಗ್ರಹಿಸಿ ಇಡಲಾಗಿದೆ. ಆದರೆ ಇದೀಗ ನದಿಯಲ್ಲಿ ನೀರಿನ ಹರಿವು ಇರುವಿವುದರಿಂದ ವಿದ್ಯುತ್ ಮೂಲಕ ನಿರ್ವಹಿಸಲ್ಪಡುವ ಸೆಂಟ್ರಿಂಗ್ ಮೊದಲಾದ ಕೆಲಸಗಳನ್ನು ಮಾಡಲು ಸಾಧ್ಯವಾಗದೆ ಕಾರ್ಮಿಕರು ತಮ್ಮ ಊರು ಆಂಧ್ರ ಪ್ರದೇಶಕ್ಕೆ ತೆರಳಲು ಸಿದ್ದತೆ ನಡೆಸುತ್ತಿದ್ದಾರೆ. ಡ್ಯಾಂಗೆ ಕೆಲಸಕ್ಕೆ ಹಾಕಿದ್ದ ಹಲಗೆಗಳನ್ನು ಬಿಚ್ಚುವ ಕಾರ್ಯ ಕೆಲಸ ಮಾಡುತ್ತಿದ್ದು ಸಂಪೂರ್ಣ ಮಳೆಗಾಲ ಮುಗಿದ ಬಳಿಕವೇ ಕಾಮಾಗಾರಿ ಆರಂಭಗೊಳಿಸುವುದಾಗಿ ಅವರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *