ಹೊನ್ನಾವರ:ಬದುಕು ಮತ್ತು ಜಗತ್ತನ್ನು ಕಾಣದೇ ಕಳೆದ 42 ವರ್ಷಗಳಿಂದ ಮುಂಬೈ ಶಹರದಲ್ಲಿಜೀವಂತ ಶವವಾಗಿ ಉಸಿರಾಡುತ್ತ ಇತ್ತೀಚೆಗಷ್ಟೇ ಕೊನೆ ಉಸಿರೆಳೆದ ಅರುಣಾ ಶ್ಯಾನಭಾಗ್ ಅವರ ಹುಟ್ಟೂರಿನಲ್ಲಿ ಅವರ ಗೌರವಾರ್ಥ ‘ಹಣತೆ ಬೆಳಕಿನಲ್ಲಿ ಅರುಣಾ ನೆನಪು’ ಕಾರ್ಯಕ್ರಮವನ್ನು ಮೇ 23 ಶನಿವಾರದಂದು ಹಳದೀಪುರದ ಗೋಪಿನಾಥ ಸಭಾಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ, ಉತ್ತರ ಕನ್ನಡ ಇದರ ಜಿಲ್ಲಾಧ್ಯಕ್ಷ ಅರವಿಂದ ಕರ್ಕೆಕೋಡಿ ಅವರು ತಿಳಿಸಿದ್ದಾರೆ.


ಇದೀಗ ಅರುಣಾ ಇತಿಹಾಸ. ಆದರೆ ಅವರ ನೋವಿನ ನಿಟ್ಟುಸಿರು ಎಲ್ಲರೊಳಗೂ ತಲ್ಲಣ ಮೂಡಿಸುತ್ತಲೇ ಇದೆ. ಈ ಸಂದರ್ಭದಲ್ಲಿ ಅರುಣಾ ಹುಟ್ಟಿದ ನೆಲ, ಆಟವಾಡಿದ ಅಂಗಳ, ಅವಳು ಹೂವು ಕೊಯ್ಯಲು ಓಡಾಡಿದ ಓಣಿ, ರಂಗೋಲಿ ಹಾಕಿದ ಮನೆ ಬಾಗಿಲು ಈ ಎಲ್ಲ ಪರಿಸರದಲ್ಲಿ ಕೆಲ ಹೊತ್ತು ಅವರ ನೆನಪು ಮಾಡಿಕೊಳ್ಳಲು ಪುಟ್ಟ ಸಭೆ ಏರ್ಪಡಿಸಲಾಗಿದ್ದು ಹಿರಿಯ ಕಥೆಗಾರ ಡಾ. ಶ್ರೀಧರ ಬಳಗಾರ ಉದ್ಘಾಟಿಸಲಿದ್ದಾರೆ. ಹಿರಿಯ ಕವಿ ಡಾ. ಶ್ರೀಪಾದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಭೆಯಲ್ಲಿ ಅರುಣಾ ಅವರನ್ನು ಮುದ್ದಿಸಿದ ಹಿರಿಯರು, ಸಹಪಾಠಿಗಳು, ಒಡನಾಡಿಗಳು, ಕಲಿಸಿದ ಶಿಕ್ಷಕರು ಎಲ್ಲರೂ ಭಾಗವಹಿಸುತ್ತಾರೆ.ಆಸಕ್ತರೆಲ್ಲ ಬರಬೇಕೆಂದು ಅರವಿಂದ ಕರ್ಕೆಕೋಡಿ ತಿಳಿಸಿದ್ದಾರೆ
