ನವದೆಹಲಿ, ಮೇ 16-ಭಾರತೀಯ ಜನತಾಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ)ಸರ್ಕಾರ ಒಂದು ವರ್ಷದ ಆಡಳಿತ ಪೂರೈಸುತ್ತಿರುವ ಈ ಸಂದರ್ಭದಲ್ಲಿ ದೇಶಾದ್ಯಂತ ಅದ್ಧೂರಿ ಕಾರ್ಯಕ್ರಮಗಳನ್ನು ನಡೆಸಲು ಪಕ್ಷ ಸರ್ವಸಿದ್ಧತೆಗಳನ್ನು ನಡೆಸಿದೆ. ಈ ಕಾರ್ಯಕ್ರಮಗಳಿಗಾಗಿ ಪ್ರಧಾನಿ ಮೋದಿ ಆಡಳಿತದ ಯಶಸ್ಸನ್ನು ಸಾರಲು ಬಿಜೆಪಿ ಎರಡು ಘೋಷ ವಾಕ್ಯಗಳನ್ನು ಬಿಡುಗಡೆ ಮಾಡಿದೆ.

ಮೊದಲನೆಯದು ವರ್ಷ್ ಏಕ್ ಕಾಮ್ ಅನೇಕ್ ಮತ್ತು ಎರಡನೆಯದು ಮೋದಿ ಸರ್ಕಾರ್ ಕಾಮ್ ಲಗ್ತಾರ್ ಈ ಘೋಷ ವಾಕ್ಯಗಳನ್ನು ಭಾರತೀಯ ಜನತಾಪಕ್ಷ ಆಯೋಜಿಸಲಿರುವ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಬಳಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ದೇಶಾದ್ಯಂತ 2 ಲೋಕಸಭಾ ಕ್ಷೇತ್ರಗಳಿಗೆ ಒಂದರಂತೆ 250 ರ್ಯಾ ಲಿಗಳನ್ನು ನಡೆಸಲು ಪಕ್ಷ ತೀರ್ಮಾನಿಸಿದೆ. ಇದರ ಜೊತೆ ಸಂಸದರು ಮತ್ತು ಶಾಸಕರು ದೇಶಾದ್ಯಂತ 500 ಸುದ್ದಿಗೋಷ್ಠಿಗಳನ್ನು ನಡೆಸಲಿದ್ದಾರೆ. ಸರ್ಕಾರ ಒಂದು ವರ್ಷ ಪೂರೈಸುವ ಮೇ 26ರಿಂದ ಮೇ 31ರವರೆಗೆ ಪ್ರತಿಯೊಬ್ಬ ಸಂಸದನೂ ತನ್ನ ಕ್ಷೇತ್ರಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ತಾಕೀತು ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬಳಿಕ 2014ರ ಮೇ 26ರಂದು ಮೋದಿ ಪ್ರಧಾನಿಯಾಗಿ ಅಧಿಕಾರಿ ವಹಿಸಿಕೊಂಡಿದ್ದರು.
