ಬಂಟ್ವಾಳ: ಅಲ್ ಮಿಸ್ಬಾಹ್ ಫೌಂಡೇಶನ್ ಫರಂಗಿಪೇಟೆ ಇದರ 2ನೆ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮವು ಮೇ.17ರಂದು ಬೋಳಂತೂರು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆಯೆಂದು ಸಂಸ್ಥೆಯ ಗೌರವ ಸಲಹೆಗಾರ ನೌಷದ್ ಸೂರಲ್ಪಾಡಿ ತಿಳಿಸಿದ್ದಾರೆ. ಬುಧವಾರ ಬಿ.ಸಿ.ರೋಡ್ ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಡು ಬಡತನ ರೇಖೆಯಲ್ಲಿರುವ ಜಿಲ್ಲೆಯ 10 ಜೋಡಿಗೆ ಉಚಿತ ಸಾಮೂಹಿಕ ವಿವಾಹ ನೆರವೇರಲಿದೆ. ಮಂಗಳೂರು ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಸಚಿವರ ಸಹಿತ ಹಲವಾರು ಧಾರ್ಮಿಕ, ಸಾಮಾಜಿಕ ಗಣ್ಯರು ಭಾಗವಹಿಸಲಿದ್ದಾರೆಂದು ತಿಳಿಸಿದರು. ಸಂಸ್ಥೆಯ ವತಿಯಿಂದ ಈಗಾಗಲೆ ಹಲವಾರು ಸಮಾಜಮುಖಿ ಕಾರ್ಯಕ್ರಮ ನಡೆಸಲಾಗಿದ್ದು ಏಡ್ಸ್ ರೋಗಿಗಳಿಗೆ ನೆರವು ಅವರೊಂದಿಗೆ ಸಹಭೋಜನ ಸಹಿತ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗಿದೆ. ಮೂರು ಅಂಬುಲೆನ್ಸ್ ಗಳನ್ನು ಉಚಿತವಾಗಿ ಪೂರೈಸಲಾಗಿದ್ದು ಮುಂದಿನ ದಿನಗಳಲ್ಲಿ ಅಗತ್ಯ ವಿರುವ ಮೂರು ಕಡೆಗೆ ಅಂಬುಲೆನ್ಸ್ ಒದಗಿಸಲು ನಿರ್ಧರಿಸಲಾಗಿದೆ. ಹಾಗೆಯೆ ಸರ್ವಧರ್ಮ ಸಮ್ಮೇಳನ ಮತ್ತು ಸರ್ವ ಧರ್ಮಿಯರ ಉಚಿತ ಸಾಮೂಹಿಕ ವಿವಾಹ ಕಾರ್ಯ ಕ್ರಮವನ್ನು ಆಯೋಜಿಸಲು ಯೋಚಿಸಲಾಗಿದೆ ಎಂದರು. ಸುದ್ದಿ ಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಎಫ್ ಹಬೀಬ್, ಪದಾಧಿಕಾರಿಗಳಾದ ಸಲೀಮ್ ಡಿ.ಕೆ, ಮೊಹಮ್ಮದ್ ಶರೀಫ್, ಮೊಹಮ್ಮದ್ ನಝೀರ್ ಉಪಸ್ಥಿತರಿದ್ದರು.
