ಬಂಟ್ವಾಳ: ತಾಲ್ಲೂಕಿನ ತುಂಬೆ ಗ್ರಾಮಕರಣಿಕರೊಬ್ಬರು ಮಂಗಳೂರಿನ ಹೋಟೆಲ್ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿ ಜಿಲ್ಲೆ ನಿವಾಸಿ, ತುಂಬೆ ಗ್ರಾಮದ ಗ್ರಾಮ ಕರಣಿಕರಾಗಿದ್ದ ಚಿದಾನಂದ (35) ಎಂಬವರೇ ಆತ್ಮಹತ್ಯೆಗೆ ಶರಣಾದ ಸರ್ಕಾರಿ ನೌಕರ. ಕಳೆದ ಹತ್ತು ವರ್ಷಗಳಿಂದ ಬಂಟ್ವಾಳದಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಪತ್ನಿಯೊಂದಿಗೆ ಬಿ ಮೂಡ ಗ್ರಾಮದ ಗೂಡಿನಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಮಾನಸಿಕ ಖಿನ್ನತೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದ್ದರೂ ನಿಖರ ಕಾರಣವೇನೆಂದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಸಾವಿಗೆ ಶರಣಾಗುವ ಮೊದಲು ಇವರು ಡೆತ್ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ. ಚಿದಾನಂದ ಅವರು ಸೌಮ್ಯ ಸ್ವಭಾವದವರಾಗಿದ್ದು, ಕರ್ತವ್ಯ ನಿರ್ವಹಣೆಯಲ್ಲಿ ಸಮರ್ಪಕವಾಗಿದ್ದರು ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.
