ಮೂಡುಬಿದರೆ: ವಿದ್ಯಾಗಿರಿ ಆಳ್ವಾಸ್ ಕ್ಯಾಂಪಸ್ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯ ವಿವಿಧ ಕಾಲೇಜುಗಳ 1,905 ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ರಾಜೀವ್ಗಾಂಧಿ ಆರೋಗ್ಯ ವಿವಿ ಸಂಯೋಜಿತ ಫಿಸಿಯೋಥೆರಫಿ, ನರ್ಸಿಂಗ್, ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಹಾಸ್ಪಿಟಲ್ ಅಡ್ಮಿನಿಸ್ಟ್ರೇಶನ್ ಕೋರ್ಸ್ಗಳು, ಮಂಗಳೂರು ವಿವಿಯಡಿಯ ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಡಿಯ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.


ವಿದ್ಯಾಗಿರಿಯ ಕೆ.ವಿ.ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ಇಸ್ರೋ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಯ ಆಡಳಿತ ಕೌನ್ಸಿಲ್ ಅಧ್ಯಕ್ಷ ಪದ್ಮಭೂಷಣ ಪ್ರೊ.ಯು.ಆರ್. ರಾವ್ ಅಧ್ಯಕ್ಷತೆ ವಹಿಸಿದ್ದರು. ಆಸಕ್ತಿ, ಪರಿಶ್ರಮ ಉದ್ಯೋಗದ ಮಾನದಂಡವಾದರೆ ಸಮಾಜದ ಜೊತೆ ಸ್ವಹಿತವನ್ನೂ ಕಾಪಾಡಿಕೊಳ್ಳಬಹುದು. ಎಲ್ಲವನ್ನೂ ಹಣದ ದೃಷ್ಠಿಕೋನದಲ್ಲಿ ಗ್ರಹಿಸುವುದು ಸರಿಯಲ್ಲ. ವಿಜ್ಞಾನ ತಂತ್ರಜ್ಞಾನಗಳಲ್ಲಿ ಅಭಿವೃದ್ಧಿಯಾದರೆ ದೇಶದ ಜಾಗತಿಕ ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.
ಮಂಗಳೂರು ವಿವಿಯ ಉಪಕುಲಪತಿ ಪ್ರೊ.ಕೆ.ಬೈರಪ್ಪ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತದಲ್ಲಿ ಶಿಕ್ಷಣ ಪಡೆದವರಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆಯಿದೆ. ಉತ್ತಮ ಉದ್ಯೋಗಾವಕಾಶವೂ ಇದೆ. ಪದವಿಯೊಂದಿಗೆ ಚಾರಿತ್ರ್ಯ, ಕೌಶಲ್ಯವನ್ನು ಬೆಳೆಸಿಕೊಂಡು ಮುನ್ನಡೆಯಬೇಕು. ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವಾ ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದವೀಧರರ ಪರವಾಗಿ ಶ್ರದ್ಧಾ ಶೆಟ್ಟಿ, ಸುಶ್ಮಿತಾ ವಿ.ಎಲ್, ವೀಣಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ.ವರ್ಣೆಕರ್ ವಂದಿಸಿದರು. ಉಪನ್ಯಾಸಕಿ ದೀಪಾ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.
