ಬಂಟ್ವಾಳ : ತಾಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಎಂಬಲ್ಲಿನ ದರ್ಗಾವೊಂದರ ಮುಂಭಾಗದಲ್ಲಿಯೇ ಪಂಚಾಯತ್ ಆಡಳಿತ ಕಸದ ತೊಟ್ಟಿಯೊಂದನ್ನು ಇಟ್ಟಿರುವುದರ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾವಳಕಟ್ಟೆ ಜಾಮಿಯಾ ಮಸೀದಿಯ ಅನತಿ ದೂರದಲ್ಲಿರುವ ಹಯಾತುಲ್ ಅವುಲಿಯಾ ದರ್ಗಾ ಶರೀಫ್ ಮುಂಭಾಗದಲ್ಲಿ ಈ ತ್ಯಾಜ್ಯ ತೊಟ್ಟಿಯನ್ನು ಕಾವಳಮೂಡೂರು ಪಂಚಾಯತ್ ವತಿಯಿಂದ ಅಳವಡಿಸಲಾಗಿದೆ. ಇದರಲ್ಲಿ ಸ್ಥಳೀಯರು ಕಸ-ತ್ಯಾಜ್ಯಗಳನ್ನು ತಂದು ಹಾಕುತ್ತಿದ್ದು, ದರ್ಗಾ ಶರೀಫ್ ಸಂದರ್ಶಿಸುವವರು ತ್ಯಾಜ್ಯ ದುರ್ನಾತದಿಂದ ಮೂಗಿಗೆ ಕೈ ಹಿಡಿದು ಬರುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಆರೋಪಿಸಲಾಗಿದೆ.


ಅಲ್ಲದೆ ಈ ಕಸದ ತೊಟ್ಟಿಯಲ್ಲಿ ತಂದು ಹಾಕುತ್ತಿರುವ ತ್ಯಾಜ್ಯಗಳನ್ನು ಜಾನುವಾರುಗಳು ಹಾಗೂ ನಾಯಿಗಳು ಎಲ್ಲೆಂದರಲ್ಲಿ ಎಳೆದಾಡುತ್ತಿದ್ದು, ಇದರಿಂದ ಪರಿಸರವೂ ಮಲಿನಗೊಳ್ಳುತ್ತಿದೆ ಎಂದು ಸ್ಥಳೀಯರು ಪಂಚಾಯತ್ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತು ಈ ಕಸದ ತೊಟ್ಟಿಯನ್ನು ಸ್ಥಳಾಂತರಿಸದಿದ್ದರೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

