ಬಂಟ್ವಾಳ ಕ್ಷೇತ್ರಕ್ಕೆ ಹೆಚ್ಚುವರಿ 300 ವಸತಿ ಮಂಜೂರು: ಸಚಿವ ರೈ
ಬಂಟ್ವಾಳ: ರಾಜ್ಯದಲ್ಲಿ ಭೂ ಮಸೂದೆ ಕಾಯ್ದೆ ಬಳಿಕ ಸರ್ಕಾರವು ಅನುಷ್ಠಾನಗೊಳಿಸಿದ ವಿವಿಧ ಯೋಜನೆಯಡಿ ಲಕ್ಷಾಂತರ ಮಂದಿಗೆ ನಿವೇಶನ ಮತ್ತು ವಸತಿ ನೀಡುವ ಮೂಲಕ ಎಲ್ಲಾ ವರ್ಗದ ಜನರನ್ನು ಪಟ್ಟಾದಾರರನ್ನಾಗಿಸಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕೂಡಾ ಅಕ್ರಮ-ಸಕ್ರಮ, ದರ್ಖಾಸು, ಸೈಟು ವಿತರಣೆ, 94ಸಿ ಮತ್ತಿತರ ಯೋಜನೆ ಮೂಲಕ ಬಹಳಷ್ಟು ಮಂದಿಗೆ ನಿವೇಶನ ಮತ್ತು ವಸತಿ ಸೌಲಭ್ಯ ನೀಡಿದ್ದು, ಇದೀಗ ಅರ್ಹರಿಗೆ ನೀಡಲು ಮತ್ತೆ 300 ಹೆಚ್ಚುವರಿ ವಸತಿ ಮಂಜೂರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿಗೆ ಮಂಗಳವಾರ ‘ಗ್ರಾಮ ಭೇಟಿ’ ನೀಡಿ ಅಹವಾಲು ಸ್ವೀಕಾರ ಮತ್ತು ಅರ್ಹ ಪಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿ ಮಾತನಾಡಿದರು.
ಈಗಾಗಲೇ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಒಟ್ಟು ರೂ 120ಕೋಟಿ ಮೊತ್ತದ ಅನುದಾನ ದೊರೆತಿದ್ದು, ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ಯಡಿ ಒಟ್ಟು ರೂ 36ಕೋಟಿ ಮೊತ್ತದ ಅನುದಾನ ಮಂಜೂರಾಗಿ ಸಂಗಬೆಟ್ಟು ಮತ್ತು ಕರೋಪಾಡಿ ಎಂಬಲ್ಲಿ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಕೇಂದ್ರ ರಸ್ತೆ ನಿಧಿ(ಸಿಆರ್‍ಎಫ್) ಯೋಜನೆಯಡಿ ರೂ 16.5ಕೋಟಿ ಮೊತ್ತದ ಅನುದಾನದಲ್ಲಿ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಇದೀಗ ಮತ್ತೆ ನಬಾರ್ಡ್ ಯೋಜನೆಯಡಿ ರೂ 3.30ಕೋಟಿ ಮೊತ್ತದ ಅನುದಾನ ಮಂಜೂರಾಗಿದೆ ಎಂದು ಅವರು ವಿವರಿಸಿದರು. ರಾಯಿ ಗ್ರಾಮ ಪಂಚಾಯಿತಿಯ ಕೊಯಿಲ ಗ್ರಾಮವು ‘ಗ್ರಾಮ ವಿಕಾಸ ಯೋಜನೆ’ಯಡಿ ಆಯ್ಕೆಗೊಂಡು ರೂ 75ಲಕ್ಷ ಮೊತ್ತದ ಅನುದಾನ ಮಂಜೂರಾಗಿದೆ ಎಂದರು.
ಬಂಟ್ವಾಳ ಕ್ಷೇತ್ರದಲ್ಲಿ ಒಟ್ಟು 14ಸಾವಿರಕ್ಕೂ ಮಿಕ್ಕಿ ಮಂದಿ ಬಿಪಿಎಲ್ ಪಡಿತರದಾರರು ಮುಂದಿನ ಮೇ ತಿಂಗಳಿನಿಂದ ಉಚಿತ ಅಕ್ಕಿ ಸೌಲಭ್ಯ ಪಡೆಯಲಿದ್ದು, ಎಪಿಎಲ್ ಪಡಿತರರಿಗೂ ರಿಯಾಯಿತಿ ದರದಲ್ಲಿ ಪಡಿತರ ಸಿಗಲಿದೆ. ರಾಜೀವ ಗಾಂಧಿ ವಿದ್ಯುದ್ದೀಕರಣ ಯೋಜನೆಯಡಿ ವಿದ್ಯುತ್ ಸೌಲಭ್ಯ, ಆರೋಗ್ಯ ಭಾಗ್ಯವೂ ದೊರೆಯುತ್ತಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಸಿವು ಮುಕ್ತ, ನಿವೇಶನ ಮುಕ್ತ, ವಸತಿ ಮುಕ್ತ ಹಾಗೂ ಪೋಡಿ ಮುಕ್ತ ಸಮಾಜ ನಿರ್ಮಿಸಲು ಪಣ ತೊಟ್ಟಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಚಿರತೆ ದಾಳಿಯಿಂದ ದನ ಸಾವಿಗೀಡಾದ ಹೈನುಗಾರ ರಮೇಶ ಪೂಜಾರಿಗೆ ರೂ 10ಸಾವಿರ ಪರಿಹಾರಧನ, 94ಸಿ ಹಕ್ಕುಪತ್ರ, ಶೇ.25ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉಚಿತ ನೀರಿನ ಟ್ಯಾಂಕ್ ವಿತರಿಸಿದರು.
ಮನವಿ:
ರಾಯಿ-ಪುಂಚೋಡಿ ಸಂಪರ್ಕ ರಸ್ತೆಯನ್ನು ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಸೇರ್ಪಡೆ, ರಾಯಿ-ಬದನಡಿ, ಬೊಲ್ಲೋಡಿ-ಕೈತ್ರೋಡಿ ಬೈಲು ಮುಂದುವರಿಕಾ ರಸ್ತೆ ನಿರ್ಮಾಣ, ಕೈತ್ರೋಡಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಸಚಿವರಿಗೆ ಸ್ಥಳೀಯರು ಮನವಿ ಸಲ್ಲಿಸಿದರು.
ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಎಂ.ಬಂಗೇರ, ತಾ.ಪಂ.ಸದಸ್ಯ ಎಪ್ರಿಯಂ ಸಿಕ್ವೇರ, ಬೂಡ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ತಹಶೀಲ್ದಾರ್ ಪುರಂದರ ಹೆಗ್ಡೆ, ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ರಾವ್, ತಾ.ಪಂ.ಸಹಾಯಕ ನಿರ್ದೇಶಕಿ ದಯಾವತಿ, ಜಿ.ಪಂ.ಎಂಜಿನಿಯರ್ ನರೇಂದ್ರ ಬಾಬು, ಎಂಜಿನಿಯರ್ ಜಗದೀಶ್, ಗ್ರಾಮಕರಣಿಕರಾದ ಪವಿತ್ರ ಮತ್ತು ನಾಗರಾಜ ಮತ್ತಿತರರು ಇದ್ದರು.
ಪಿಡಿಒ ವೆಂಕಟೇಶ ಸ್ವಾಗತಿಸಿ, ಕಂದಾಯ ನಿರೀಕ್ಷಕ ಸಾಧು ವಂದಿಸಿದರು. ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೀಶ ಕೊಯಿಲ ಕಾರ್ಯಕ್ರಮ ನಿರೂಪಿಸಿದರು.
