ಮೂಡುಬಿದರೆ: ಮಂಗಳೂರು-ಮೂಡುಬಿದರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರ ಅಪಘಾತಗಳಿಂದ ಸಾವು ನೋವುಗಳು ಸಂಭವಿಸುತ್ತಿದ್ದು ಈ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು ಚತುಷ್ಪಥಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಅಲಂಗಾರಿನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.
mbd_april27_3
ಪ್ರತಿಭಟನಕಾರರನ್ನುದ್ದೆಶಿಸಿ ಮಾತನಾಡಿದ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ದ.ಕ ಜಿಲ್ಲೆ ಇದರ ಮುಖಂಡ ಶಿವಾನಂದ ಪಾಂಡ್ರು ಮೂಡುಬಿದರೆಯ ಬೆಳವಣಿಗೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದರಿಂದ ಸಮಸ್ಯೆಗಳು ಹೆಚ್ಚುತ್ತಿವೆ. ಮಂಗಳೂರು-ಮೂಡುಬಿದಿರೆ-ಕಾರ್ಕಳ ಹೆದ್ದಾರಿ ಕಿರಿದಾಗಿರುವುದರಿಂದ ನಿರಂತರ ಅಪಘಾತಗಳು ಸಂಭವಿಸಿ ನಾಗರಿಕರು ಆತಂಕ ಪಡುವಂತಾಗಿದೆ. ಸರಕಾರಿ ಬಸ್ ಸೇವೆ ಆರಂಭಿಸಿ ಖಾಸಗಿ ಬಸ್‍ಗಳ ಏಕಸ್ವಾಮ್ಯ ನಿಯಂತ್ರಿಸಬೇಕೆಂದು ನಾಗರಿಕರು ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹೆದ್ದಾರಿ ಅಗಲೀಕರಣ ಹಾಗೂ ಸರ್ಕಾರಿ ಬಸ್ ಸೇವೆ ವಿಳಂಬವಾಗುತ್ತಿದೆ. ಈ ನಿಟ್ಟಿನಲ್ಲಿ ಸರಕಾರವನ್ನು ಎಚ್ಚರಿಸಲು ಪ್ರಜಾಪ್ರಭುತ್ವ ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಬಿಜೆಪಿ ಮುಖಂಡ ಸುಚರಿತ ಶೆಟ್ಟಿ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಎಸ್.ಪಿ ಆನಂದ, ಉಮನಾಥ ಪಾಡ್ಯಾರ್, ಪದ್ಮನಾಭ, ಯೂತ್ಸ್ ಫಾರ್ ಸೋಶಿಯಲ್ ಚೇಂಜ್, ಬಿಜೆಪಿ ಮುಖಂಡರಾದ ಸುಚರಿತ ಶೆಟ್ಟಿ, ಭಾಸ್ಕರ್ ಆಚಾರ್ಯ, ತುಡರ್ ಯುವಕ ಸಂಘದ ಪ್ರವೀಣ್ ಭಂಡಾರಿ, ರಾಜೇಶ್ ಕಡಲಕೆರೆ, ಬಹುಜನ ಸಮಾಜ ಪಕ್ಷ ಗೋಪಾಲ ಮುತ್ತೂರು, ರಘು ದೇವಾಡಿಗ, ಸಮಿತಿ ಸಂಚಾಲಕ ನೀಲಯ್ಯ ಮತ್ತಿತರರು ಇದ್ದರು.
ಪ್ರತಿಭಟನೆಯ ಬಳಿಕ ತಹಶಿಲ್ದಾರ್ ಮೂಲಕ ಸಾರಿಗೆ ಸಚಿವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಂಗಳೂರು ಇಲ್ಲಿನ ಮುಖ್ಯ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು.

By suddi9

Leave a Reply

Your email address will not be published. Required fields are marked *