ಮೂಡುಬಿದಿರೆ : ಬಹುರಾಷ್ಟ್ರೀಯ ಸಂಸ್ಥೆಗಳ ಪರವಾದ ಮತ್ತು ರೈತ ವಿರೋಧಿಯಾದ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ವಿರೋಧಿಸಿ, ಬಗರ್‍ಹುಂಕ್, ಅರಣ್ಯ ಭೂಮಿ ಹಕ್ಕು ಸಕ್ರಮಗೊಳಿಸಲು ಅಗತ್ಯ ಕಾನೂನು ತಿದ್ದುಪಡಿಗಳನ್ನು ಆಗ್ರಹಿಸಿ, ನಿವೇಶನ ರಹಿತರಿಗೆ ಮನೆ ನಿವೇಶನ, ಎಲ್ಲರಿಗೂ ಶುದ್ಧ ಕುಡಿಯುವ ನೀರು ಹಾಗೂ ಶಾಶ್ವತ ನೀರಾವರಿಗಾಗಿ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘವು ವಿಧಾನ ಸೌಧ ಚಲೋ ಜಾಥಾದ ಅಂಗವಾಗಿ ಮೂಡುಬಿದಿರೆಯಲ್ಲಿ ಗುರುವಾರ ಪ್ರಚಾರ ಜಾಥಾ ನಡೆಸಿತು.

23 mood prachara jaatha
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಜಾಥಾವನ್ನು ಉದ್ದೇಶಿಸಿ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿಯವರಿಗೆ ಲಕ್ಷ ಲಕ್ಷ ಕೊಟ್ಟು ಸಾಕಿರುವ ಅಂಬಾನಿ ಅದಾನಿಯವರ ಋಣವನ್ನು ತೀರಿಸಲು ಭೂ ಸ್ವಾಧೀನ ಸುಗ್ರಿವಾಜ್ಞೆಯನ್ನು ಹೊರಡಿಸುವ ಮೂಲಕ ತಮ್ಮ ಫಲವತ್ತಾದ ಭೂಮಿಯನ್ನು ಮಾರಾಟ ಮಾಡಲು ಕೇಂದ್ರ ಸರಕಾರ ಹೊರಟಿದೆ ಎಂದು ಆರೋಪಿಸಿದರು. “ಬಹುರಾಷ್ಟ್ರೀಯ ಸಂಸ್ಥೆಗಳ ಕಂಪನಿಯ ಕೃಷಿಯನ್ನು ವಿರೋಧಿಸಿರಿ ಮತ್ತು ರೈತರ ಹಾಗೂ ಕೂಲಿಕಾರರ ಕೃಷಿಯನ್ನು ಸಂರಕ್ಷಿಸಿರಿ” ಎಂಬ ಘೋಷಣೆಯಡಿಯಲ್ಲಿ ಭೂಮಿ ಹಾಗೂ ನೀರು ನಮ್ಮ ಹಕ್ಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೀತಿಯನ್ನು ವಿರೋಧಿಸಿ ಏ.28ರಂದು ವಿಧಾನ ಸೌಧ ಚಲೋ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಿಪಿಐಎಂ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ವ್ಯತ್ಯಾಸವಿಲ್ಲ. ಬಿಜೆಪಿಯು ಅಧಕಾರಕ್ಕೆ ಬರುವ ಮೊದಲು ನರೇಂದ್ರ ಮೋದಿಯವರು ನಮ್ಮದು ಹಿಂದೂ ರಾಷ್ಟ್ರ. ಹಿಂದೂಗಳು ನಾವೆಲ್ಲರೂ ಒಂದೇ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು
ಹೇಳುತ್ತಿದ್ದರು ಆದರೆ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಭೂ ಸ್ವಾಧೀನವೆಂಬ ಕಾಯಿದೆಯನ್ನು ತರುವ ಮೂಲಕ ವಿದೇಶಿ ಹಿಂದುಗಳನ್ನು ಸಾಕಲು ಹೊರಟಿದ್ದಾರೆ.

ನಮ್ಮ ದೇಶದಲ್ಲಿರುವ ಬಡವರಿಗೆ ಮನೆ, ಉತ್ತಮ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಯಾವುದೇ ಸುಗ್ರಿವಾಜ್ಞೆಯನ್ನು ತಂದಿಲ್ಲ ಅಲ್ಲದೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಯಾವುದೇ ಕಾಯಿದೆಯಲ್ಲಿ ತಿದ್ದುಪಡಿಯನ್ನು ಮಾಡಿಲ್ಲ ಎಂದು ಆರೋಪಿಸಿದ ಅವರು ಚುನಾವಣೆ ಮುಗಿಸಿದ ತಕ್ಷಣ ವಿದೇಶದಿಂದ ಕಪ್ಪು ಹಣವನ್ನು ತರುತ್ತೇವೆಂದು ಹೇಳಿದ ಬಿಜೆಪಿಯು ಈವರೆಗೆ ಕಪ್ಪು ಹಣವನ್ನು ತರುವಲ್ಲಿ ವಿಫಲವಾಗಿದೆ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ರೈತ ಸಂಘದ ಮುಖಂಡರಾದ ಕೃಷ್ಣಪ್ಪ ಸಾಲ್ಯಾನ್, ಮೂಡುಬಿದಿರೆ ವಲಯ ರೈತ ಮುಖಂಡರಾದ ಸುಂದರ ಶೆಟ್ಟಿ, ಶಂಕರ, ಗಿರಿಜಾ, ಕಾರ್ಮಿಕ ಮುಖಂಡರಾದ ರಾಧ, ಲಕ್ಷ್ಮೀ ಮತ್ತಿತರರು ಈ ಸಂದರ್ಭ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *