ಮೂಡುಬಿದಿರೆ : ವಿಶ್ರಾಂತ ಹಿರಿಯ ಪತ್ರಕರ್ತ ಸದಾನಂದ ಹೆಗಡೆಕಟ್ಟೆಯವರಿಗೆ ಕನರ್ಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ 2011ನೇ ಸಾಲಿನ ಹಾಸ್ಯರತ್ನ ನಾಡಿಗೇರ ಕೃಷ್ಣರಾವ್ ಸ್ಮಾರಕ ಪ್ರಶಸ್ತಿ ಲಭಿಸಿದೆ. 2011ರಲ್ಲಿ ಕರ್ಮವೀರದಲ್ಲಿ ಪ್ರಕಟವಾದ ‘ಬಕಾಸುರನ ಬವಣೆ’ ಎನ್ನುವ ಅವರ ಲೇಖನಕ್ಕೆ ಅತ್ಯುತ್ತಮ ವಿಡಂಬನಾತ್ಮಕ ಲೇಖನ ಎನ್ನುವ ಗೌರವದೊಂದಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು ಎ.26ರಂದು ಹಾಸನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮೂಡುಬಿದಿರೆ ಮಹಾವೀರ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ, ರಾಜ್ಯ ಶಾಸ್ತ್ರ ಉಪನ್ಯಾಸಕರಾಗಿದ್ದ ಅವರು ನಿವೃತ್ತರಾದ ಬಳಿಕ ಸುಮಾರು ಒಂದೂವರೆ ದಶಕಗಳ ಕಾಲ ಪ್ರಜಾವಾಣಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವದಲ್ಲಿದ್ದ ಅವಧಿಯಲ್ಲಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ನಾಡಿನ ಹಲವು ಕನ್ನಡ, ಆಂಗ್ಲ ದೈನಿಕ, ಮಾಸ ಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳ ಮೂಲಕ ಸ್ಥಳೀಯ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಗುರುತಿಸಿಕೊಂಡಿದ್ದ ಅವರ ಐದು ಕೃತಿಗಳು ಈವರೆಗೆ ಪ್ರಕಟವಾಗಿವೆ.
ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಗೌರವ ಪ್ರಶಸ್ತಿಗಳಿಗೆ ಹೆಗಡೆಕಟ್ಟೆಯವರು ಭಾಜನರಾಗಿದ್ದಾರೆ.

