ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಸಾಮಾಜಿಕ ಶೈಕ್ಷಣಿಕ ಗಣತಿ ಕಾರ್ಯದಲ್ಲಿ ಶೇ 38 ರಷ್ಟು ಪ್ರಗತಿ ಸಾಧಿಸಿದ್ದು, ಬುದ್ದಿವಂತರ ಜಿಲ್ಲೆಯಾದ್ದರಿಂದ ಗಣತಿಗೆ ಹೋದಲ್ಲೆಲ್ಲಾ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಗಣತಿದಾರರೇ ಏದುರಿಸಬೇಕಾಗಿದೆ, ಹಾಗಾಗಿ ಗಣತಿ ಕಾರ್ಯ ಆರಂಭದಲ್ಲಿ ನಿಧಾನಗತಿ ಕಂಡಿತ್ತು, ಈಗ ಸಮಸ್ಯೆಗಳಿಲ್ಲದೆ ನಡೆಯುತ್ತಿದೆ ಎಂದು ದ.ಕ.ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ತಿಳಿಸಿದರು.


ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮ ಹಾಗೂ ಬಿಮೂಡ ಗ್ರಾಮದಲ್ಲಿ ನಡೆಯುತ್ತಿದ್ದ ಸಾಮಾಜಿಕ ಶೈಕ್ಷಣಿಕ ಗಣತಿ ಕಾರ್ಯವನ್ನು ಪರಿವೀಕ್ಷಣೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ಗಣತಿದಾರರೊಂದಿಗೂ ಮಾತನಾಡಿದ ಜಿಲ್ಲಾಧಿಕಾರಿಯವರು, ಪ್ರತೀ ಪ್ರಶ್ನೆಗೂ ಮನೆಯವರ ಜೊತೆ ಮಾತನಾಡಿ ಉತ್ತರ ದಾಖಲಿಸಿ, ನಿಮ್ಮ ಅಭಿಪ್ರಾಯವನ್ನು ತುಂಬಬೇಡಿ. ಎಲ್ಲಾ ಫಿಲ್ ಆದ ಬಳಿಕವಷ್ಟೇ ಅವರ ಸಹಿ ಹಾಕಿಸಿ ಎಂದು ಸಲಹೆ ನೀಡಿದರು. ನೀವು ಸಂಗ್ರಹಿಸುವ ಮಾಹಿತಿ ಸರ್ಕಾರಕ್ಕೆ ದೊಡ್ಡ ಆಸ್ತಿ, ಹಾಗಾಗಿ ಶ್ರದ್ದೆಯಿಂದ ಕೆಲಸ ನಿರ್ವಹಿಸುವಂತೆ ಗಣತಿದಾರರನ್ನು ಹುರಿದುಂಬಿಸಿದ ಜಿಲ್ಲಾಧಿಕಾರಿಯವರು, ಮನೆಮಂದಿಯೊಂದಿಗೂ ಆತ್ಮೀಯತೆಯಿಂದ ಮಾತನಾಡಿಸಿದರು. ಸಜೀಪಮುನ್ನೂರು ಗ್ರಾಮದ ನಂದಾವರ ಪರಿಸರದ 2 ಮನೆಗಳಿಗೆ ಹಾಗೂ ಪುರಸಭಾ ವ್ಯಾಪ್ತಿಯ ಬಿಮೂಡದ ಚೆಂಡ್ತಿಮಾರು ದಲಿತಕಾಲೋನಿಯ 2 ಮನೆಗಳಿಗೆ ಅವರು ಗಣತಿದಾರರ ಜೊತೆ ಭೇಟಿ ನೀಡಿದರು. ಗಣತಿ ಬಳಿಕ ಮನೆಬಾಗಿಲಿಗೆ ಲಗತ್ತಿಸುವ ಗಣತಿ ಸ್ಟಿಕ್ಕರ್ ಅನ್ನು ಸ್ವತಃ ಜಿಲ್ಲಾಧಿಕಾರಿಯವರೇ ಅಂಟಿಸಿದರು.
ತಹಸೀಲ್ದಾರ್ ಪುರಂದರ ಹೆಗ್ಡೆ, ಉಪ ತಹಸೀಲ್ದಾರ್ ರೋಹಿನಾಥ್, ಪುರಸಭಾ ಅಧ್ಯಕ್ಷೆ ವಸಂತಿಚಂದಪ್ಪ, ಮುಖ್ಯಾಧಿಕಾರಿ ಲೀನಾಬ್ರಿಟ್ಟೋ, ಅಧಿಕಾರಿಗಳಾದ ಮತ್ತಡಿ, ಪ್ರಭಾದೇವಿ ಮತ್ತಿತರರು ಉಪಸ್ಥಿತರಿದ್ದರು.

