ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಮಕ್ಕಳ ಸಂಖ್ಯೆ ಕಡಿಮೆ ಇರುವ ಸರಕಾರಿ ಶಾಲೆಗಳನ್ನು ಮುಚ್ಚಲು ಸರಕಾರ ಯೋಜನೆಯನ್ನೂ ರೂಪಿಸುತ್ತಿದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣ ಏನು ಎನ್ನುವುದು ಎಲ್ಲಡೆ ಚರ್ಚೆಗೂ ಗ್ರಾಸವಾಗುತ್ತಿದೆ. ಮಕ್ಕಳಿಲ್ಲ ಎನ್ನುವ ಒಂದೇ ಕಾರಣಕ್ಕೆ, ಇದ್ದ ಸರಕಾರಿ ಶಾಲೆಗಳನ್ನು ಮುಚ್ಚುವ ತೀರ್ಮಾನಕ್ಕಿಂತಲೂ ಅಲ್ಲಿ ಯಾಕೆ ಮಕ್ಕಳ ಸಂಖ್ಯೆ ಕಡಿಮೆಯಾಯಿತು ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾದ ಅಗತ್ಯ ಎದ್ದು ಕಾಣುತ್ತಿದೆ.
ಇಂಗ್ಲೀಷ್‍ನಿಂದಲೇ ಮಕ್ಕಳ ಉಧ್ದಾರ ಎಂಬ ಭ್ರಮೆ, ಅದರ ಮೇಲಿನ ಅತೀಯಾದ ಒಲವು ಮತ್ತು ಖಾಸಗಿ ಶಾಲೆಗಳ ಪ್ರಭಾವ-ಅದರ ಮೇಲಿನ ಆಕರ್ಷಣೆಯೇ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣವೆನ್ನುವುದು ಮೇಲ್ನೋಟದ ಸತ್ಯವಾದರೂ, ಇದಕ್ಕೆಲ್ಲಾ ಪೂರಕವಾಗಿ ಇನ್ನೂ ಅನೇಕ ಒಳಕಾರಣಗಳು ಇಲ್ಲದಿಲ್ಲವೆನ್ನುವುದೂ ಅಷ್ಟೇ ಸತ್ಯ.
ಕೆಲವರ್ಷದ ಹಿಂದೆ ನಗರ ಭಾಗದಲ್ಲಿ ಮಾತ್ರ ಕಾಣುತ್ತಿದ್ದ ಆಂಗ್ಲ ಮಾಧ್ಯಮ ಶಾಲೆಗಳು, ಇಂದು ಹಳ್ಳಿ ಗಲ್ಲಿಗಳಿಗೂ ಹೆಜ್ಜೆ ಇಟ್ಟಿರುವುದು ನಿಜ. ಬಹುತೇಕ, ಉಳ್ಳವರು ತಮ್ಮ ಮಕ್ಕಳನ್ನು ದುಬಾರಿ ಹಣ ತೆತ್ತಾದರೂ ಆಂಗ್ಲ ಮಾಧ್ಯಮ/ಖಾಸಗಿ ಶಾಲೆಗಳಿಗೆ ಕಳುಹಿಸುವುದು ನಿಜವೇ ಆದರೂ ನಗರ/ಹಳ್ಳಿಯಲ್ಲಿರುವ ಬಡವರ ಮಕ್ಕಳು ಎಲ್ಲಿಗೆ ಹೋದರು? ಕಳೆದ ವರ್ಷ ಸರಕಾರ ಮುಚ್ಚಲು ಉದ್ದೇಶಿರುವ ಬಹುತೇಕ ಶಾಲೆಗಳ ಪಟ್ಟಿಯಲ್ಲಿ ನಗರ/ಹಳ್ಳಿ ಪ್ರದೇಶದ ಶಾಲೆಗಳೂ ಸೇರಿದ್ದು ಈ ಪ್ರದೇಶಗಳ ಬಡವರ ಮಕ್ಕಳೂ ಖಾಸಗಿ ಶಾಲೆಗೆ ಹೋಗುತ್ತಿದ್ದಾರೆಯೇ? ಹೌದು, ಎಂದಾದರೆ ಅದರ ಹಿಂದಿರುವ ಕಾರಣಗಳನ್ನು ಹುಡುಕಬೇಕಾಗಿರುವುದು ಇಂದಿನ ತುರ್ತು. ಇಲ್ಲವಾದಲ್ಲಿ ಮುಂದೊಂದು ದಿನ ಈ ನಾಡಿನ ಎಲ್ಲಾ ಸರಕಾರಿ ಶಾಲೆಗಳು ಮುಚ್ಚಲ್ಪಟ್ಟರೆ ಅಚ್ಚರಿ ಏನಿಲ್ಲ.! ಆ ಮೂಲಕ ನಮ್ಮ ನಾಡಿನ ಸಂಸ್ಕøತಿಯ ತಾಯಿಬೇರು ಕನ್ನಡವೂ ಕಣ್ಮರೆಯಾದರೆ……?
ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಪೋಷಕರ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ನಾವು ಆಲೋಚಿಸಬೇಕು. ಉದಾಹರಣೆಗೆ ಪ್ರಸಕ್ತ ಸಾಲಿನ ದಾಖಲಾತಿಯನ್ನೇ ಗಮನಿಸೋಣ. ಈಗಾಗಲೇ ಊರಿನ ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕ ವಲಯದಿಂದ ಪರಿಸರದ ಮನೆ ಮನೆಗೆ ಬೇಟಿ ಆರಂಭಗೊಂಡಿದೆ. ಈ ಬೇಟಿ ನಿರಂತರ ಮುಂದುವರಿಯಲಿದ್ದು ಶಾಲಾ ವ್ಯಾಪ್ತಿಯಲ್ಲಿರುವ ಮಗು ಶಾಲೆಗೆ ಸೇರುವ ತನಕವೂ ನಡೆಯಲಿದೆ. ಶ್ರೀಮಂತರು, ಬಡವರು ಎಂಬ ಬೇಧವಿಲ್ಲದೆ ಊರಿನ ಎಲ್ಲಾ ಮಕ್ಕಳೂ ಶಾಲೆಗೆ ಬರಬೇಕೆನ್ನುವುದು ಅವರ ಯೋಚನೆಯಾಗಿದ್ದು ಅದಕ್ಕಾಗಿ ಅವರಿಂದ ಶತಾಯಗತಾಯ ಪ್ರಯತ್ನ ನಡೆಯುತ್ತದೆ. ಹತ್ತಿರದ ಮತ್ತೊಂದು ಖಾಸಗಿ ಶಾಲೆಗೆ ಹಾಗೂ ಸರಕಾರಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಅವರು ಕಾರ್ಯನಿರ್ವಹಿಸುತ್ತಿದ್ದು ಮನೆಯವರು ಕಟ್ಟಲು ಹಣ ಇಲ್ಲ ಎಂದರೂ ಅವರು ಕೇಳಲ್ಲ. `ಮೊದಲು ಸೇರಿಸಿ, ಮತ್ತೆ ನೋಡೋಣ’ ಎಂಬ ಸಮಾಧಾನ ಮಾತನ್ನು ಹೇಳುತ್ತಾರೆ. ಏನೇನೋ ಭ್ರಮೆ ಹುಟ್ಟಿಸಿ ಮಕ್ಕಳು ಅವರ ಶಾಲೆಗೆ ಸೇರುವಂತೆ ಮಾಡುತ್ತಾರೆ. ಸೇರಿದ ನಂತರವಷ್ಟೆ ಕಂತುಗಿಂತು, ಡೊನೇಷನ್, ಪೀಸು ಎಂಬ ಕಂಡೀಷನ್.
ಇರಲಿ. ಹೀಗೆ, ಇದು ನಮ್ಮದು ಎಂಬ ಮನೋಭಾವನೆಯ ಪ್ರಯತ್ನ ಸ್ಥಳೀಯಾಡಳಿತ, ಶಾಲಾಭಿವೃಧ್ದಿ ಸಮಿತಿ, ಪೋಷಕವೃಂದ, ಅಧಿಕಾರಿ ವರ್ಗ, ಶಿಕ್ಷಕ ವೃಂದದಿಂದ ಸರಕಾರಿ ಶಾಲಾ ಮಟ್ಟದಲ್ಲಿ ಎಷ್ಟರ ಮಟ್ಟಿಗೆ ನಡೆಯುತ್ತದೆ? ಈ ಪ್ರಯತ್ನ ನಡೆಸುವವರಾರು? ಹಾಗೆಂದು ಸರಕಾರಿ ಶಾಲಾ ಅಭಿವೃದ್ದಿ ಸಮಿತಿ ಮತ್ತು ಶಿಕ್ಷಕರಿಂದಲೂ ಕೆಲವೆಡೆ ಇದೇ ಮಾದರಿಯ ಪ್ರಯತ್ನ ನಡೆದಿದ್ದು ಅಂತಹ ಶಾಲೆಗಳಲ್ಲಿ ಸಾಕಷ್ಟು ಸಂಖ್ಯೆಯ ಮಕ್ಕಳಿದ್ದಾರೆ ಎನ್ನುವುದೂ ಇಲ್ಲಿ ಗಮನಾರ್ಹ.
ಎಲ್ಲಿ ಯಾವ ಶಿಕ್ಷಕರು:
ಊರಿನ ಖಾಸಗಿ ಶಾಲೆಗಳಲ್ಲಿರುವ ಶಿಕ್ಷಕರಲ್ಲಿ ಬಹುತೇಕ ಮಂದಿ ಅದೇ ಊರಿನವರು. ನಿತ್ಯ ಜನಸಮುದಾಯದೊಡನೆ ಬೆರೆಯುವವರು.ಅವರಿಗೆ ಊರಿನ ಪೋಷಕರನ್ನು ಮನವೊಲಿಸುವುದು ಕಷ್ಟವೇನಲ್ಲ. ಆದರೆ ಹಳ್ಳಿಯ ಸರಕಾರಿ ಶಾಲೆಗಳಲ್ಲಿರುವ ಬಹುತೇಕ ಶಿಕ್ಷಕರು ಬೇರೆ ಊರಿನವರು, ಇಲ್ಲವೇ ಹೊರಜಿಲ್ಲೆಯವರು. ಆ ಊರಿನ ಜನಸಮುದಾಯದವರೊಡನೆ ಯಾವುದೇ ಸಂಬಂಧ ಇಲ್ಲದವರು. ಇಂತಹವರೇ ಹೆಚ್ಚಿರುವ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವುದಾದರೂ ಹೇಗೆ? ಪಲಿತಾಂಶವೇ ಪ್ರಧಾನವಾಗಿರುವ ಪ್ರಸಕ್ತ ಕಾಲಘಟ್ಟದಲ್ಲಿ ಬಹುತೇಕ ಖಾಸಗಿ ಶಾಲೆಗಳಲ್ಲಿ/ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ನೂರಕ್ಕೆ ನೂರು. ಈ ಸಾಧನೆ ತೋರುವ ಸರಕಾರಿ ಶಾಲೆಗಳ ಸಂಖ್ಯೆ ಎರಡೋ-ಮೂರೋ ಅಷ್ಟೆ. ಪೋಷಕರಿಗೆ ಯಾವುದು ಇಷ್ಟವಾಗಬಹುದು? ಪಲಿತಾಂಶಕ್ಕೆ ಹೊರತುಪಡಿಸಿದ ಸಾಕಷ್ಟು ಸಾಧನೆಗಳು ಸರಕಾರಿ ಶಾಲೆಗಳಲ್ಲಿ ನಡೆದಿದ್ದರೂ ಇದ್ಯಾವುದು ಸಮುದಾಯದ ಮಟ್ಟಕ್ಕೆ ಮುಟ್ಟುವಲ್ಲಿ ವಿಫಲವಾಗುತ್ತಿದೆ.
ಸೌಲಭ್ಯ ಎಲ್ಲಿದೆ?:
ಇನ್ನು ಖಾಸಗಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾದ ಎಲ್ಲಾ ಸೌಲಭ್ಯಗಳು ಇದೆ ಎನ್ನುವುದು ಸಾಮಾನ್ಯ ನಂಬಿಕೆ. ಇವೆಲ್ಲವೂ ಸರಕಾರಿ ಶಾಲೆಯಲ್ಲಿ ಇನ್ನೂ `ಇಲ್ಲ’ ಎನ್ನುವುದು ಬಹುತೇಕ ಪೋಷಕರ ಬಲವಾದ ನಂಬಿಕೆ. ಸರಕಾರಿ ಶಾಲೆಗಳನ್ನು ಜನಾಕರ್ಷಣೆಗೊಳಿಸುವಲ್ಲಿ ಸರಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರೂ ಅವೆಲ್ಲವೂ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿದೆ? ಈ ಬಗ್ಗೆ ಪೋಷಕ ವಲಯಕ್ಕೆ ಸರಿಯಾದ ಮಾಹಿತಿ ಇದೆಯೇ? ಮಾಹಿತಿ ನೀಡುವವರಾರು? ಎನ್ನುವುದು ಇಲ್ಲಿ ಎದುರಾಗುವ ಗಂಭೀರ ಪ್ರಶ್ನೆ. ಸರಕಾರಿ ಶಾಲೆಗಳಲ್ಲಿ ಇರುವ ಸೌಲಭ್ಯಗಳು, ಮಕ್ಕಳಿಗೆ ದೊರೆಯುವ ಪ್ರಯೋಜನಗಳು ಮೊದಲಾದ ಬಗ್ಗೆ ಸಮಾಜಕ್ಕೆ ಶಾಲಾರಂಭಕ್ಕೆ ಸಾಕಷ್ಟು ಮುಂಚಿತವಾಗಿಯೇ ತಿಳಿಸುವಲ್ಲಿ ಇಲಾಖೆ, ಸ್ಥಳೀಯಾಡಳಿತಗಳು, ಶಿಕ್ಷಕರು ಹಾಗೂ ಪೋಷಕರು ಸಂಘಟಿತರಾಗಿ ಸೂಕ್ತ ಕಾರ್ಯಯೋಜನೆ ರೂಪಿಸಬೇಕಾಗಿದೆ.
ಶಿಕ್ಷಕರನ್ನು ಶಿಕ್ಷಕರಾಗಲು ಬಿಡಿ:
ಸದ್ಯಕ್ಕೆ ಸರಕಾರಿ ಶಾಲೆಯ ಶಿಕ್ಷಕ-ಶಿಕ್ಷಕಿಯರನ್ನು ಯಾರೇ ಮಾತಾಡಿಸಲಿ, ಹೇಗಿದ್ದೀರಿ ಎಂದರೆ ಸಾಕು. ಅವರ ಬಳಿ ನೂರಾರು ಉತ್ತರಗಳು, ಹತ್ತಾರು ಸಮಸ್ಯೆಗಳು. `ನಮ್ಮದು, ಎಂತದು ಸಾರ್. ಯಾವಾಗಲೂ ಮೀಟಿಂಗ್. ದಾಖಲೆಗಳ ತಯಾರಿ, ಮೇಲಾಧಿಕಾರಿಗಳ ಕಿರಿಕಿರಿ. ಯಾವಾಗ ನಮಗೆ ಇದರಿಂದ ಮುಕ್ತಿ ದೊರೆಯುತ್ತದೋ?’ ಎಂಬುವುದು ಅನೇಕ ಶಿಕ್ಷಕರ ಅಳಲು. ಆ ಶಾಲಾ ವ್ಯಾಪ್ತಿಯ ಪೋಷಕರು-ಮಕ್ಕಳ ಮಧ್ಯೆಯೇ ದುಡಿಯುವ ಶಿಕ್ಷಕ ವಲಯದಲ್ಲೇ ಈ ರೀತಿಯ ನಕಾರಾತ್ಮಕ ಮನೋಭಾವನೆ ಬೆಳೆದರೆ ಇನ್ನು ಅವರಿಂದ ಕಲಿಯಲೆಂದು ತನ್ನ ಮಕ್ಕಳನ್ನು ಕಳುಹಿಸುವ ಪೋಷಕರ ಪಾಡೇನು? ನಿಜ. ಸರಕಾರಿ ಶಾಲಾ ಶಿಕ್ಷಕರ ಮೇಲೆ ಪ್ರಸ್ತುತ ದಿನಗಳಲ್ಲಿ ಒತ್ತಡ ಹೆಚ್ಚಿದೆ. ಮೀಟಿಂಗು-ತರಬೇತಿ, ಕಚೇರಿ ಕೆಲಸ, ದಾಖಲೆಗಳ ತಯಾರಿ-ಹಸ್ತಾಂತರದ ಜತೆಯಲ್ಲಿ ಮತ್ತೆ ಹಲವಾರು ಕೆಲಸಗಳು, ಕೆಲವೆಡೆ ರಾಜಕೀಯ ಒತ್ತಡವೂ ಬೇರೆ. ಶಿಕ್ಷಕರನ್ನು ಶಿಕ್ಷಕರಾಗಿ ಸೇವೆ ಸಲ್ಲಿಸಲು ಬಿಟ್ಟಿಲ್ಲ ಎನ್ನುವುದೂ ಅಕ್ಷರಷ ಸತ್ಯ. ಹಾಗೆಂದು ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿ, ಸಕಾರಾತ್ಮಕ ಮನೋಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸುವ ಶಿಕ್ಷಕರಿರುವ ಅನೇಕ ಸರಕಾರಿ ಶಾಲೆಗಳು ಎಲ್ಲವನ್ನೂ ಮೀರಿ ಬೆಳೆದಿರುವುದು,ಗುರುತಿಸಲ್ಪಟ್ಟಿರುವುದು ಗಮನಾರ್ಹ ಅಂಶವೇ. ಆದರೂ ಶಿಕ್ಷಕ ವಲಯಕ್ಕೆ ಶಿಕ್ಷಣ ನೀಡಲು ಹೆಚ್ಚು ಸಮಯ ನೀಡಬೇಕಾದುದು ಅಗತ್ಯ.
ಖಾಸಗಿ ಶಾಲೆಯಲ್ಲಿ ಶಿಕ್ಷಕರಿಗೆ ಇಂತಹ ಒತ್ತಡ ಕಡಿಮೆ. ಎಲ್ಲವನ್ನೂ ಆಡಳಿತ ಮಂಡಳಿಯೇ ನಿರ್ವಹಿಸುತ್ತಿದೆ. ಎಲ್ಲದಕ್ಕೂ ಪ್ರತ್ಯೇಕ ಸಿಬ್ಬಂದಿಗಳಿದ್ದಾರೆ. ಒಂದೇ ಶಿಕ್ಷಕಿ’ ಇರುವ ಅನೇಕ ಸರಕಾರಿ ಶಾಲೆಗಳೂ ಇದೆ. ಇದ್ದ ಒಬ್ಬರೂ ಸಭೆ-ತರಬೇತಿಗೆಂದು ಹೋದಾಗ ಶಾಲೆಯ ಗತಿ-ದೇವರಿಗೇ ಪ್ರೀತಿ ಎಂಬಂತಹ ಸ್ಥಿತಿ. ಇಂತಹ ಶಾಲೆಗೆ ಯಾವ ತಂದೆ-ತಾಯಿ ತಾನೇ ತಮ್ಮ ಮಕ್ಕಳನ್ನು ಕಲಿಸಿಯಾರು? ಎಂಬುದನ್ನೂ ಸರಕಾರ ಗಂಭೀರವಾಗಿ ಯೋಚಿಸಬೇಕಾಗಿದೆ.
ಹೀಗೆ ಇಂಗ್ಲೀಷ್ ವ್ಯಾಮೋಹ ಒಂದೇ ಅಲ್ಲದೆ ಅನೇಕ ಬಗೆಯಲ್ಲಿ ಸರಕಾರಿ ಶಾಲೆಗಳು ಜನಾಕರ್ಷಣೆ ಕಳೆದುಕೊಂಡಿರುವುದು, ಪೋಷಕರು ತಮ್ಮ ಮಕ್ಕಳನ್ನು ಪರ್ಯಾಯ ವ್ಯವಸ್ಥೆಗೆ ಒಪ್ಪಿಸಲು ಕಾರಣವಾಗಿರಬಹುದು. ಸರಕಾರಿ ಶಾಲೆಯಲ್ಲೂ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳು, ಸಾಕಷ್ಟು ಸಂಖ್ಯೆಯ ಶಿಕ್ಷಕರು, ಕಚೇರಿ ಕೆಲಸಕ್ಕಾಗಿ ಸಿಬ್ಬಂದಿಗಳ ನೇಮಕ, ಒಂದನೇ ತರಗತಿಯಿಂದಲೇ ಇಂಗ್ಲೀಷ್ ಕಲಿಕೆ-ಮೊದಲಾದ ಹೊಸ ಹೊಸ ಯೋಜನೆಗಳೊಂದಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಿದ್ದರೆ ಸರಕಾರಿ ಶಾಲೆಗಳು ಎಂದೂ ಮುಚ್ಚುವುದಿಲ್ಲ. ಮುಂದೆಯಾದರೂ ಇವೆಲ್ಲವೂ ಸಕಾಲದಲ್ಲಿ ದೊರೆಯಬೇಕು, ಹಾಗಾದಾಗ ಎಲ್ಲಾ ಮಕ್ಕಳೂ ಅಲ್ಲಿಗೆ ಬರಲೇಬೇಕು.
ಶಿಕ್ಷಕರು-ಸಮುದಾಯದ ಅಪಾರ ಇಚ್ಛಾಶಕ್ತಿಯಿಂದಾಗಿ ಈ ನಾಡಿನ ಹಲವು ಸರಕಾರಿ ಶಾಲೆಗಳು ಎಲ್ಲಾ ರೀತಿಯ ಸೌಲಭ್ಯಗಳನ್ನೊಳಗೊಂಡು ಖಾಸಗಿ ಶಾಲೆಗಳನ್ನು ಮೀರಿ ಬೆಳೆದು ನಿಂತಿದ್ದು ನಿಜಕ್ಕೂ ಹೆಮ್ಮೆ. ಎಲ್ಲಾ ಸರಕಾರಿ ಶಾಲೆಗಳನ್ನು ಆ ರೀತಿಯಾಗಿ ಬೆಳೆಸುವಲ್ಲಿ, ಆ ಮೂಲಕ ಅವೆಲ್ಲವನ್ನೂ ಶಾಶ್ವತವಾಗಿ ಉಳಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿ ವೃಂದ, ಜನ ಸಮುದಾಯ ಹಾಗೂ ಶಿಕ್ಷಕ ವೃಂದದ ಸಂಘಟಿತ ಪ್ರಯತ್ನ ನಡೆಯಬೇಕಾದುದು ಇಂದಿನ ತುರ್ತು.
ಗೋಪಾಲ ಅಂಚನ್
